ಈಗ ಉದ್ದ ಕೂದಲಿಗೆ ಕತ್ತರಿ; ಬಾಲ ಬಿಚ್ಚಿದರೆ ಅದಕ್ಕೂ...!

7
ರೌಡಿ ಶೀಟರ್‌ಗಳ ಪರೇಡ್; ಎಸ್ಪಿ ಖಡಕ್ ಎಚ್ಚರಿಕೆ

ಈಗ ಉದ್ದ ಕೂದಲಿಗೆ ಕತ್ತರಿ; ಬಾಲ ಬಿಚ್ಚಿದರೆ ಅದಕ್ಕೂ...!

Published:
Updated:

ಕಲಬುರ್ಗಿ: ‘ಏಯ್.. ಏಕೆ ಇಷ್ಟೊಂದು ಕೂದಲು ಬಿಟ್ಟಿದ್ದು, ಸ್ಟೈಲ್ ಆಗಿ ಮೀಸೆ ಬಿಟ್ಟರೆ ನಿನ್ನ ಸುಮ್ಮನೆ ಬಿಡುವುದಿಲ್ಲ.. ಅಮಾಯಕರನ್ನು ಹೆದರಿಸಿದರೆ, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಗಡೀಪಾರು ಖಚಿತ. ಬಾಲ ಬಿಚ್ಚಿದರೆ ಕಟ್ ಮಾಡಿಬಿಡ್ತೀನಿ ಹುಷಾರ್! ಹೀಗೆಂದು ಖಡಕ್ ಸೂಚನೆ ನೀಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್.ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ರೌಡಿ ಪರೇಡ್‌ನಲ್ಲಿ ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ರೌಡಿಗಳಿಗೆ ಬಿಸಿ ಮುಟ್ಟಿಸಿದರು.

ಕೆಲವರು ಉದ್ದ ಕೂದಲು, ಗಡ್ಡ, ಮೀಸೆ ಬಿಟ್ಟಿರುವುದನ್ನು ಕಂಡು, ‘ಇನ್ನೊಮ್ಮೆ ಈ ರೀತಿ ಬಂದರೆ ಹುಷಾರ್’ ಎಂದು ತಾಕೀತು ಮಾಡಿದರು. ಕೈ ಕಡಗ, ಕಿವಿಯಲ್ಲಿನ ರಿಂಗ್‌ಗಳನ್ನೂ ತೆಗೆಸಿ ಹಾಕಿದರು. ಎಲ್ಲರಿಗೂ ಕೈಮೇಲೆತ್ತುವಂತೆ ಸೂಚಿಸಿದರು. ಕೈಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಪರೀಕ್ಷಿಸಿದರು. ‘ಯಾವ ಕೃತ್ಯಗಳಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ, ಜೈಲಿನೊಳಗೆ ಇದ್ದಾರಾ ಅಥವಾ ಜಾಮೀನಿನ ಮೇಲೆ ಹೊರಬಂದಿದ್ದಾರಾ’ ಎಂಬುದರ ಬಗ್ಗೆ ಠಾಣೆಯ ಇನ್‌ಸ್ಪೆಕ್ಟರ್‌ಗಳಿಂದ ಮಾಹಿತಿ ಪಡೆದರು.ಈ ವೇಳೆ ಮಾತನಾಡಿದ ಪೊಲೀಸ್ ಅಧಿಕಾರಿಗಳು, ‘ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸಿದರೆ ಗಡೀಪಾರು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ 3,800 ರೌಡಿಗಳು: ಪರೇಡ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ‘ವಿಧಾನಸಭೆ ಚುನಾವಣೆ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಪರೇಡ್ ನಡೆಸಲಾಗಿದೆ. ನಗರ ವ್ಯಾಪ್ತಿಯ 600 ಮತ್ತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 700 ಸೇರಿ ಒಟ್ಟು 1,300 ರೌಡಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.‘ಇವರೆಲ್ಲರೂ ಕೊಲೆ, ಡಕಾಯಿತಿ, ಅತ್ಯಾಚಾರ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ರೌಡಿ ಪಟ್ಟಿಯಲ್ಲಿದ್ದು ಪರೇಡ್‌ಗೆ ಹಾಜರಾಗದವರಿಗೆ ವಾರಂಟ್ ಹೊರಡಿಸಲಾಗುವುದು. ಅಲ್ಲದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು’ ಎಂದು ಹೇಳಿದರು.‘ಕಳೆದ ವರ್ಷ 16ಜನರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 26 ರೌಡಿಗಳ ಗಡೀಪಾರಿಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಯಾರನ್ನೂ ಗಡೀಪಾರು ಮಾಡಿಲ್ಲ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿ.ಜೆ.ಲೋಕೇಶ್, ಪ್ರೋಬೇಷನರಿ ಅಧಿಕಾರಿಗಳಾದ ಮಿಥುನ್, ಸುಮಂತ್, ವಿ.ಲಕ್ಷ್ಮಿ ಇದ್ದರು.

**

ಜಿಲ್ಲೆಯಲ್ಲಿ 3,800 ರೌಡಿಗಳು ಇದ್ದಾರೆ. ಕಳೆದ ವರ್ಷ 1,800 ಜನರನ್ನು ಹೊಸದಾಗಿ ರೌಡಿ ಪಟ್ಟಿಗೆ ಸೇರಿಸಲಾಗಿದೆ. ಠಾಣೆಗೆ ಬಂದು ಸಹಿ ಮಾಡುವಂತೆ ಸೂಚಿಸಲಾಗಿದೆ – ಎನ್.ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry