ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಮರುಲ್‌ ಪತ್ನಿ, ಬಾಗವಾನ ಪೈಪೋಟಿ ಅಂತಿಮ ಘಟ್ಟಕ್ಕೆ

ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌: ಖನ್ನೀಸಾ ಫಾತಿಮಾ ಬೇಗಂ ರೋಡ್‌ ಶೋ ಇಂದು
Last Updated 5 ಏಪ್ರಿಲ್ 2018, 9:28 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ ಮಾಜಿ ಸಚಿವ ದಿವಂಗತ ಖಮರುಲ್‌ ಇಸ್ಲಾಂ ಅವರ ಪತ್ನಿ ಖನ್ನೀಸಾ ಫಾತಿಮಾ ಬೇಗಂ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ ಬಾಗವಾನ ಅವರ ಮಧ್ಯೆ ಪೈಪೋಟಿ ತೀವ್ರಗೊಂಡಿದೆ.ಏತನ್ಮಧ್ಯೆ ಖನ್ನೀಸಾ ಫಾತಿಮಾ ಬೇಗಂ ಅವರು ಏ. 5ರಂದು ಬೆಂಗಳೂರಿನಿಂದ ನಗರಕ್ಕೆ ಬರುತ್ತಿದ್ದು, ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಲಿವೆ. ಇಲಿಯಾಸ ಅವರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದು, ಟಿಕೆಟ್‌ಗಾಗಿ ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಮುಂದಿನ ನಡೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.

ಖಮರುಲ್‌ ಇಸ್ಲಾಂ ಅವರು ಈ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದರು. ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಾಗ ತಮ್ಮ ಅನುಯಾಯಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು. ಖಮರುಲ್‌ ಇಸ್ಲಾಂ ಅವರ ನಿಧನದ ನಂತರ ಅವರ ಸ್ಥಾನಕ್ಕೆ ಕುಟುಂಬದವರನ್ನೇ ಅಂದರೆ ಅವರ ಪತ್ನಿ ಇಲ್ಲವೆ ಪುತ್ರ ಫರೋಜ್‌ ಉಲ್‌ ಇಸ್ಲಾಂ ರಾಜಕೀಯಕ್ಕೆ ಬರಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದರು. ಆದರೆ, ಅವರಿಬ್ಬರೂ ಬಹಿರಂಗವಾಗಿ ಯಾವುದೇ ನಿಲುವು ವ್ಯಕ್ತಪಡಿಸಿರಲಿಲ್ಲ.

‘ಖಮರುಲ್‌ ಇಸ್ಲಾಂ ಇದ್ದಾಗಲೇ ಈ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಮೇಲೆ ಇಲಿಯಾಸ ಬಾಗವಾನ ಕಣ್ಣಿಟ್ಟಿದ್ದರು. ಖಮರುಲ್‌ ಇಚ್ಛೆಗೆ ವಿರುದ್ಧವಾಗಿ ಬಾಗ
ವಾನ ಅವರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಖಮರುಲ್‌ ಅವರಿಗೆ ಇಲಿಯಾಸ ಪರ್ಯಾಯ ನಾಯಕ ಎಂದೇ ಬಿಂಬಿಸಲಾಗುತ್ತಿತ್ತು’ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.ಆರಂಭದಲ್ಲಿ ಖಮರುಲ್‌ ಕುಟುಂಬದವರು ಆಸಕ್ತಿ ವಹಿಸದ ಕಾರಣ ಟಿಕೆಟ್‌ ಗಿಟ್ಟಿಸಿ ಕೊಳ್ಳಲು ಕಾಂಗ್ರೆಸ್‌ ಪಕ್ಷದ ಮುಸ್ಲಿಂ ಮುಖಂಡರು ತೀವ್ರ ಕಸರತ್ತು ಆರಂಭಿಸಿದ್ದರು. ಖಮರುಲ್‌ ಅವರ ಶಿಷ್ಯ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್‌ ಅಸಗರ್‌ ಚುಲ್‌ಬುಲ್‌ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದರು. ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಹೋಯಿತು.‘ಖನ್ನೀಸಾ ಫಾತಿಮಾ ಬೇಗಂ ಅವರ ಮನವೊಲಿಸಲಾಗಿದ್ದು, ಅವರು ಸ್ಪರ್ಧೆಗೆ ಸಮ್ಮತಿಸಿದ್ದಾರೆ. ಅವರಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದೆ’ ಎಂದು ಅವರ ಬೆಂಬಲಿಗರು ಹಾಗೂ ಕೆಲ ಮುಖಂಡರು ಈಚೆಗೆ ಘೋಷಿಸಿದ ನಂತರ ಈ ಕ್ಷೇತ್ರದ ರಾಜಕೀಯ ಹೊಸ ತಿರುವು ಪಡೆದುಕೊಂಡಿತು.ಇಲಿಯಾಸ ಅವರ ಬೆಂಬಲಿಗರು ಸೋಮವಾರ ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಒತ್ತಡ ತಂತ್ರ ಅನುಸರಿಸಿದರು. ಮರುದಿನವೇ ಖನ್ನೀಸಾ ಫಾತಿಮಾ ಬೇಗಂ ಅವರು ‘ಕಾಂಗ್ರೆಸ್ ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಲು ಸಿದ್ಧ’ ಎಂದು ಹೇಳಿರುವ ವಿಡಿಯೊವನ್ನು ಅವರ ಬೆಂಬಲಿಗರು ಬಿಡುಗಡೆ ಮಾಡಿದರು.

‘ಮುಸ್ಲಿಂ ಮಹಿಳೆಯರು ರಾಜಕೀಯಕ್ಕೆ ಬರುವುದು ನಿಷಿದ್ಧ’ ಎಂದು ಕೆಲವರು ಬಹಿರಂಗವಾಗಿ ಅಪಸ್ವರ ತೆಗೆದರೆ, ‘ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಶೇಖ್‌ ಹಸೀನಾ, ಬೆನೆಜಿರ್‌ ಬುಟ್ಟೊ ಅವರೆಲ್ಲರೂ ಮುಸ್ಲಿಂ ಮಹಿಳೆಯರಲ್ಲವೇ? ಇದೆಲ್ಲ ವಿರೋಧಿಗಳ ಅಪಪ್ರಚಾರ ಅಷ್ಟೇ’ ಎಂದು ಖಮರುಲ್‌ ಇಸ್ಲಾಂ ಅವರ ಬೆಂಬಲಿಗರು ಖನ್ನೀಸಾ ಫಾತಿಮಾ ಬೇಗಂ ಅವರ ರಾಜಕೀಯ ಪ್ರವೇಶವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ: ಖನ್ನೀಸಾ ಫಾತಿಮಾ ಬೇಗಂ ಸ್ವಾಗತಕ್ಕೆ ಬೆಂಬಲಿಗರು ಮತ್ತು ಕಾರ್ಯಕರ್ತರು ಸಜ್ಜಾಗಿದ್ದಾರೆ.ಏ. 5ರಂದು ಸಂಜೆ 4 ಗಂಟೆಗೆ ಕಪನೂರ ಕೈಗಾರಿಕಾ ಪ್ರದೇಶದ ಬಳಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುತ್ತಿದೆ. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟು ಖಮರ್ ಕಾಲೊನಿ, ರೋಜಾ ಬಡಾವಣೆ ಮೂಲಕ ಖಾಜಾ ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡುವರು.ಆ ಬಳಿಕ ನ್ಯಾಷನಲ್ ಚೌಕ್‌, ಮುಸ್ಲಿಂ ಚೌಕ್‌, ನೆಹರೂ ಗಂಜ್, ಸೂಪರ್ ಮಾರ್ಕೆಟ್, ಕಪಡಾ ಬಜಾರ್, ಸಂತ್ರಾಸವಾಡಿ ಮೂಲಕ ಜಗತ್ ವೃತ್ತ ತಲುಪಿ, ಡಾ. ಬಿ.ಆರ್.ಅಂಬೇಡ್ಕರ್, ಬಸವಣ್ಣ ಹಾಗೂ ಡಾ. ಬಾಬು ಜಗಜೀವನರಾಂ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವರು. ಇದಾದ ನಂತರ ಶಹಾಬಜಾರ್, ಶೇಖ ರೋಜಾ, ಎಂಎಸ್‌ಕೆ ಮಿಲ್‌ ಮೂಲಕ ಸ್ಟೇಷನ್ ಬಜಾರ್ ಪ್ರದೇಶದಲ್ಲಿರುವ ಅವರ ನಿವಾಸ ತಲುಪುವರು.‘ಮೆರವಣಿಗೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಬೆಂಬಲಿಗರು, ಹಿತೈಷಿಗಳು ಮತ್ತು ಪಕ್ಷ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ’ ಎಂದು ಬುಧವಾರ ಇಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದ ಭೀಮರೆಡ್ಡಿ ಪಾಟೀಲ ತಿಳಿಸಿದರು.

**

ಜನರ ಆಶೀರ್ವಾದ ಹಾಗೂ ಸಹಕಾರದೊಂದಿಗೆ ಪಕ್ಷಕ್ಕಾಗಿ ದುಡಿಯುತ್ತೇನೆ. ಏ.5ರಂದು ಕಲಬುರ್ಗಿಗೆ ಬಂದು ಕಾರ್ಯಕರ್ತ ರೊಡನೆ ಸಮಾಲೋಚನೆ ನಡೆಸುತ್ತೇನೆ – ಖನ್ನೀಸಾ ಫಾತಿಮಾ ಬೇಗಂ.

**

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರ ಏಪ್ರಿಲ್‌ 12ರಿಂದ 15ರ ಅವಧಿಯಲ್ಲಿ ಆಗಲಿದೆ. ಅಲ್ಲಿಯವರೆಗೆ ನಾನು ಏನೂ ಮಾತನಾಡುವುದಿಲ್ಲ – ಇಲಿಯಾಸ ಬಾಗವಾನ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT