ಸೋಮವಾರ, ಡಿಸೆಂಬರ್ 9, 2019
17 °C
ಮುಕ್ತ ಬಾರ್‌ ತೆರೆಯಲು ಪರವಾನಗಿ ಅಗತ್ಯ, ₹ 11,500 ಸಾವಿರ ಶುಲ್ಕ

ಮದುವೆ ಸಮಾರಂಭದ ಮೇಲೂ ಕಣ್ಣು!

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಮದುವೆ ಸಮಾರಂಭದ ಮೇಲೂ ಕಣ್ಣು!

ಮಡಿಕೇರಿ: ಏಪ್ರಿಲ್‌, ಮೇ ಶುಭ ಸಮಾರಂಭಕ್ಕೆ ಸುಗ್ಗಿಯ ಕಾಲ. ಇದೇ ಹೊತ್ತಿನಲ್ಲಿ ವಿಧಾನಸಭೆ ಚುನಾವಣೆಯೂ ಘೋಷಣೆ ಆಗಿರುವುದು ಮದುವೆ, ನಿಶ್ಚಿತಾರ್ಥ, ಆರತಕ್ಷತೆ, ಗೃಹ ಪ್ರವೇಶ ಕಾರ್ಯಕ್ರಮಗಳ ಮೇಲೆ ಮಂಕು ಕವಿಯುವಂತೆ ಮಾಡಿದೆ.ಮಾರ್ಚ್‌ 27ರಿಂದ ಮೇ 20ರ ಅವಧಿಯಲ್ಲಿ ದಿನಾಂಕ ನಿಗದಿ ಮಾಡಿರುವವರಿಗೆ ಆತಂಕ ಆರಂಭವಾಗಿದೆ. ಅದಕ್ಕೆ ಕಾರಣ ನೀತಿ ಸಂಹಿತೆ ಭಯ. ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ. ಅದರ ಬಿಸಿ ಖಾಸಗಿ ಸಮಾರಂಭಕ್ಕೂ ತಟ್ಟಿದೆ.ಕೊಡಗಿನಲ್ಲಿ ಶುಭ ಸಮಾರಂಭಗಳಲ್ಲಿ ಬಂದ ಅತಿಥಿಗಳಿಗೆ ಮದ್ಯ ಪೂರೈಸಿ, ಸತ್ಕರಿಸುವುದು ಸಂಪ್ರದಾಯ. ಸಾಮಾನ್ಯವಾಗಿ ಹಗಲು ಅಥವಾ ರಾತ್ರಿಯ ಸಮಾರಂಭಗಳಲ್ಲಿ ಓಪನ್‌ ಬಾರ್‌ ತೆರೆದು ಅತಿಥಿಗಳಿಗೆ ಮದ್ಯ ನೀಡಲಾಗುತ್ತದೆ. ಈಗ ಅದರ ಮೇಲೆ ಚುನಾವಣಾ ಅಧಿಕಾರಿಗಳ ಕಣ್ಣು ಬಿದ್ದಿದೆ.

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಖಾಸಗಿ ಸಮಾರಂಭಕ್ಕೆ ನಿರ್ಬಂಧ ಇಲ್ಲ. ಆದರೆ, ‘ಅತಿಥಿ ಸತ್ಕಾರ’ಕ್ಕೆ ಮಾತ್ರ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಶುಭ ಸಮಾರಂಭ ನಡೆಸುವವರು ಪೊಲೀಸ್‌ ಠಾಣೆ, ಅಬಕಾರಿ ಇಲಾಖೆ, ಚುನಾವಣಾ ಶಾಖೆ ಎಂದೆಲ್ಲ ಓಡಾಡುತ್ತಿದ್ದಾರೆ.ಕೊಡಗಿನಲ್ಲಿ ಎರಡು ಕ್ಷೇತ್ರಗಳಿದ್ದು, ಪ್ರತ್ಯೇಕವಾಗಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಪ ವಿಭಾಗಾಧಿಕಾರಿ ರಮೇಶ್ ಪಿ. ಕೋನರೆಡ್ಡಿ ಅವರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ, ಕೃಷಿ ಇಲಾಖೆ ಉಪ ನಿರ್ದೇಶಕ ಕೆ. ರಾಜು ಅವರನ್ನು ವಿರಾಜಪೇಟೆ ಕ್ಷೇತ್ರಕ್ಕೆ ನೇಮಕ ಮಾಡಲಾಗಿದೆ. ಮದುವೆ ಸಮಾರಂಭ ಆಯೋಜಿಸಿರುವವರು ಆಹ್ವಾನ ಪತ್ರಿಕೆ ನೀಡಿ ಅನುಮತಿ ಪಡೆದುಕೊಳ್ಳುತ್ತಿದ್ದಾರೆ. ಬುಧವಾರ ಹತ್ತಕ್ಕೂ ಹೆಚ್ಚು ಮಂದಿ ಅನುಮತಿ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ನೂರಾರು ಅರ್ಜಿಗಳು : ಮದುವೆ ಸಮಾರಂಭದ ಹಾಲ್‌ಗಳಲ್ಲಿ ರಾತ್ರಿ 8ರಿಂದ 9ರ ತನಕ ಮುಕ್ತ ಬಾರ್‌ ವ್ಯವಸ್ಥೆ ಇರುತ್ತದೆ. ಅದಕ್ಕೂ ಅನುಮತಿ ಪಡೆಯುವ ಜತೆಗೆ, ₹ 11,500 ಪಾವತಿಸಿ ಪರವಾನಗಿ ಪಡೆದುಕೊಳ್ಳಬೇಕು. ಈಗಾಗಲೇ ಅರ್ಜಿಗಳು ಸಲ್ಲಿಕೆಯಾಗಿವೆ. ಪರಿಶೀಲಿಸಿ ಸಾಂದರ್ಭಿಕ ಪರವಾನಗಿ ಕೊಡಲಾಗುವುದು. ಪರವಾನಗಿ ಪಡೆದುಕೊಳ್ಳದಿದ್ದರೆ ಮದ್ಯ ಪೂರೈಸುವಂತಿಲ್ಲ. ಹಾಲ್‌ಗಳಲ್ಲಿ ನಿಯಮಕ್ಕಿಂತ ಹೆಚ್ಚಿನ ಮದ್ಯ ದಾಸ್ತಾನು ಮಾಡಿದ್ದರೆ ವಶಕ್ಕೆ ಪಡೆಯಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಎಚ್ಚರಿಸುತ್ತಾರೆ.

ಪರಿಶೀಲನೆ ಸಾಧ್ಯತೆ : ಎಂ.ಸಿ.ಸಿ (ಮಾದರಿ ನೀತಿ ಸಂಹಿತೆ) 54 ತಂಡ, ಸೆಕ್ಟರ್‌ ಅಧಿಕಾರಿಗಳು 41 ಮಂದಿ, 18 ಫ್ಲೈಯಿಂಗ್‌ ಸ್ಕ್ವಾಡ್‌ ಅನ್ನು ಜಿಲ್ಲಾಡಳಿತ ಚುನಾವಣಾ ಮೇಲುಸ್ತುವಾರಿಗೆ ನೇಮಕ ಮಾಡಿದೆ.

ವೈನ್ಸ್‌ ಅಂಗಡಿಗಳಿಗೆ ಎಚ್ಚರಿಕೆ : ನಿಯಮದಂತೆ ಮದ್ಯ ಮಾರಾಟ ಮಾಡಬೇಕು. 9.30ರ ಒಳಗೆ ವೈನ್ಸ್‌ ಅಂಗಡಿಗಳು ಬಾಗಿಲು ಬಂದ್‌ ಮಾಡಬೇಕು. ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಹೊರಗೆ ಕೊಂಡೊಯ್ಯಲು ಮದ್ಯ ನೀಡುವಂತಿಲ್ಲ.ಗ್ರಾಹಕರಿಗೆ ಬಾಕ್ಸ್‌ಗಟ್ಟಲೆ ಮದ್ಯವನ್ನೂ ನೀಡುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟಪ್ಪಣೆ ಮಾಡಿದೆ.

ಹೋಂಸ್ಟೇಗಳಿಗೆ ಮದ್ಯ ಪೂರೈಕೆ ಸ್ಥಗಿತ

ಮಡಿಕೇರಿ: ಮಾದರಿ ನೀತಿ ಸಂಹಿತೆ ಬಿಸಿ ಪ್ರವಾಸಿಗರಿಗೂ ತಟ್ಟಿದೆ. ಜಿಲ್ಲೆಯಲ್ಲಿ ಅಂದಾಜು 4 ಸಾವಿರ ಹೋಂಸ್ಟೇಗಳಿದ್ದು, ಅಲ್ಲಿ ವಾಸ್ತವ್ಯಕ್ಕೆ ಬರುವ ಪ್ರವಾಸಿಗರಿಗೆ ಮಾಲೀಕರು ಮದ್ಯ ಪೂರೈಸುವಂತಿಲ್ಲ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದು ಹೋಂಸ್ಟೇ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ.‘ಜಿಲ್ಲಾಡಳಿತವು ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕಬೇಕು. ಅದನ್ನು ಬಿಟ್ಟು ಚುನಾವಣೆ ನೆಪದಲ್ಲಿ ನೋಂದಾಯಿತ ಹೋಂಸ್ಟೇಗಳಿಗೆ ಕಡಿವಾಣ ಹಾಕುವುದು ಎಷ್ಟು ಸರಿ’ ಎಂದು ಮಾಲೀಕ ದೇವಯ್ಯ ಪ್ರಶ್ನಿಸುತ್ತಾರೆ.

 

ಪ್ರತಿಕ್ರಿಯಿಸಿ (+)