ಬಡ್ತಿ ಮೀಸಲಾತಿ ರದ್ಧತಿ ಪ್ರಕರಣ: ಸುಪ್ರೀಂ ಕೋರ್ಟ್ ಮರು ಪರಿಶೀಲನೆ ಮಾಡಲಿ: ಪ್ರೊ. ಸಿದ್ಧಲಿಂಗಯ್ಯ

7

ಬಡ್ತಿ ಮೀಸಲಾತಿ ರದ್ಧತಿ ಪ್ರಕರಣ: ಸುಪ್ರೀಂ ಕೋರ್ಟ್ ಮರು ಪರಿಶೀಲನೆ ಮಾಡಲಿ: ಪ್ರೊ. ಸಿದ್ಧಲಿಂಗಯ್ಯ

Published:
Updated:
ಬಡ್ತಿ ಮೀಸಲಾತಿ ರದ್ಧತಿ ಪ್ರಕರಣ: ಸುಪ್ರೀಂ ಕೋರ್ಟ್ ಮರು ಪರಿಶೀಲನೆ ಮಾಡಲಿ: ಪ್ರೊ. ಸಿದ್ಧಲಿಂಗಯ್ಯ

ತುಮಕೂರು: ದಲಿತರಿಗೆ ಬಡ್ತಿ ಮೀಸಲಾತಿ ರದ್ಧತಿ, ಜಾತಿ ನಿಂದನೆ ಪ್ರಕರಣಗಳಲ್ಲಿ ತಕ್ಷಣ ಆರೋಪಿಗಳನ್ಮು ಬಂಧಿಸಬಾರದು ಎಂಬ ಸುಪ್ರೀಂ ಕೋರ್ಟಿನ ನಿರ್ಧಾರಗಳು ದಲಿತ ಸಮಾಜಕ್ಕೆ ಮಾರಕ ಎಂದು ಸಾಹಿತಿ ಪ್ರೊ.ಸಿದ್ಧಲಿಂಗಯ್ಯ ಕಳವಳ ವ್ಯಕ್ತಪಡಿಸಿದರು.

ಗುರುವಾರ ತುಮಕೂರು ವಿಶ್ವವಿದ್ಯಾನಿಲಯ ಡಾ.ಬಾಬು ಜಗಜೀವನ ರಾಮ್ ಅಧ್ಯಯನ ಪೀಠ ಆಯೋಜಿಸಿದ್ದ ‘ಡಾ.ಜಗಜೀವನ ರಾಮ್ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಲಿತರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದವರೇ ಡಾ. ಜಗಜೀವನ ರಾಮ್ ಅವರು. ಆದರೆ, ಈಗ ದುರದೃಷ್ಟವಶಾತ್ ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಿದೆ. ಕನಿಷ್ಠ ಶೇ 18 ರಷ್ಟು ಬಡ್ತಿ ಮೀಸಲಾತಿಯನ್ನು ಕೊಡಲೇಬೇಕು. ಸುಪ್ರೀಂ ಕೋರ್ಟ್ ತನ್ನ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಬೇಕು. ಕೇಂದ್ರ ಸರ್ಕಾರವು ಈ ವಿಷಯ ಗಂಭೀರವಾಗಿ ಪರಿಗಣಿಸಿ ದಲಿತರಿಗೆ ಅನ್ಯಾಯ ಆಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಎಂಬುದಕ್ಕೆ ತಿಲಾಂಜಲಿ ಇಟ್ಟಂತಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿ ಬಂಧಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ಧಾರ ಜಾತಿ ನಿಂದನೆ ಕಾಯ್ದೆ(ಅಟ್ರಾಸಿಟಿ ಕಾಯ್ದೆ) ಸಡಿಲಗೊಳಿಸುವಂತಹ ಕ್ರಮವಾಗಿದೆ. ಕೋರ್ಟ್ ಈ ವಿಚಾರವನ್ನು ಮರು ಪರಿಶೀಲನೆ ಮಾಡಬೇಕು. ಇಲ್ಲದೇ ಇದ್ದರೆ ಲೋಕಸಭೆಯಲ್ಲೇ ತಿದ್ದುಪಡಿ ತಂದು ಕೋರ್ಟ್ ಆದೇಶ ಜಾರಿ ತಡೆಯಬೇಕು’ ಎಂದು ಒತ್ತಾಯ ಮಾಡಿದರು.

ಕಾಯ್ದೆ ದುರುಪಯೋಗ ಮಾಡಿಕೊಂಡರೆ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆ ದಿಶೆಯಲ್ಲಿ ಕ್ರಮ ಜರುಗಿಸಲಿ. ಅದರೆ, ಜಾತಿ ನಿಂದನೆ ಕಾಯ್ದೆಯನ್ನೇ ಸಡಿಲಗೊಳಿಸುವಂತಹದ್ದು ಸರಿಯಲ್ಲ. ಇದರಿಂದ ಇನ್ನಷ್ಟು ದೌರ್ಜನ್ಯಗಳು ದಲಿತರ ಮೇಲೆ ಹೆಚ್ಚಾಗುವ ಅಪಾಯವಿದೆ ಎಂದು ಹೇಳಿದರು.

ಡಾ.ಜಗಜೀವನ ರಾಮ್ ಅವರು ಶೋಷಿತ ವರ್ಗಗಳಲ್ಲಿ ಆತ್ಮವಿಶ್ವಾಸ ತುಂಬಿದ ಚೇತನ. ಹಸಿರು ಕ್ರಾಂತಿಯ ಹರಿಕಾರರು. ಪ್ರಧಾನಿ ಹುದ್ದೆ ಸ್ವಲ್ಪದರಲ್ಲಿಯೇ ಅವರ ಕೈ ತಪ್ಪಿದ್ದು ವಿಷಾದನೀಯ. ಕೃಷಿ, ರಕ್ಷಣೆ, ಕಾರ್ಮಿಕ, ರೈಲ್ವೆ ಹೀಗೆ ಅನೇಕ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದು ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರದು ಸಂಘರ್ಷ, ಕ್ರಾಂತಿಕಾರಿ ಮಾರ್ಗವಾದರೆ ಜಗಜೀವನ ರಾಮ್ ಅವರದು ಸಮನ್ವಯತೆ, ಸಂಧಾನದ  ಮಾರ್ಗಗಳಾಗಿವೆ ಎಂದು ಹೇಳಿದರು. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಬಹಳಷ್ಟು ಶ್ರಮಿಸಿದ್ದರು ಎಂದು ವಿವರಿಸಿದರು.

ಕವಿ ಕೆ.ಬಿ ಸಿದ್ದಯ್ಯ ಮಾತನಾಡಿ, ‘ಡಾ.ಅಂಬೇಡ್ಕರ್ ಮತ್ತು ಡಾ.ಜಗಜೀವನರಾಮ್ ಅವರು ಕತ್ತಲೆ ರಾಜ್ಯದಲ್ಲಿ ಕುರುಡನಿಗೆ ಸಿಕ್ಕ ಎರಡು ವಜ್ರಗಳು. ಈ ಎರಡೂ ಜ್ಯೊತಿಗಳನ್ನು ಹಿಡಿದು ದಲಿತರು ಮುನ್ಮಡೆಯಬೇಕು. ಇವುಗಳೇ ದಲಿತರಿಗೆ ದಾರಿದೀಪಗಳು ಎಂದು ತಿಳಿಸಿದರು.

ಕುಲಪತಿ ಪ್ರೊ ವೈ.ಎಸ್. ಸಿದ್ಧೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಜಿ. ಬಸವರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry