7ಕ್ಕೆ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಪ್ರವಾಸ

7
ಬೆಂಗಾವಲು ಪಡೆ ಸಿಬ್ಬಂದಿಯಿಂದ ಭದ್ರತೆಯ ಪರಿಶೀಲನೆ

7ಕ್ಕೆ ಜಿಲ್ಲೆಯಲ್ಲಿ ರಾಹುಲ್‌ ಗಾಂಧಿ ಪ್ರವಾಸ

Published:
Updated:

ಕೋಲಾರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆ ಭಾಗವಾಗಿ ಏ.7ರಂದು ನಗರಕ್ಕೆ ಭೇಟಿ ನೀಡಲಿರುವ ಕಾರಣ ಬೆಂಗಾವಲು ಪಡೆ ವಿಶೇಷ ಅಧಿಕಾರಿ ಕಮಲ್‌ ಮತ್ತು ಸಿಬ್ಬಂದಿಯು ಪಕ್ಷದ ಮುಖಂಡರೊಂದಿಗೆ ರೋಡ್‌ ಶೋ ಮಾರ್ಗ ಬುಧವಾರ ಪರಿಶೀಲಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ ಬೆಂಗಾವಲು ಪಡೆ ತಂಡವು ಬಂಗಾರಪೇಟೆ ವೃತ್ತ, ಕಾಲೇಜು ವೃತ್ತ, ಮೆಕ್ಕೆ ವೃತ್ತ, ಅಮ್ಮವಾರಿಪೇಟೆ, ಬಸ್ ನಿಲ್ದಾಣ ವೃತ್ತದಲ್ಲಿನ ಭದ್ರತೆ ಸ್ಥಿತಿಗತಿ ಅವಲೋಕಿಸಿದರು. ಬಳಿಕ ಕ್ಲಾಕ್‌ ಟವರ್‌ನಿಂದ ಗೋಕುಲ ಕಾಲೇಜುವರೆಗಿನ ರಸ್ತೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕ ಸಭೆ ಆಯೋಜಿಸುತ್ತಿಲ್ಲ. ರಸ್ತೆ ಅಥವಾ ಯಾವುದೇ ಸ್ಥಳದಲ್ಲಿ ವೇದಿಕೆ ಸಹ ನಿರ್ಮಿಸುತ್ತಿಲ್ಲ. ರಾಹುಲ್‌ ಗಾಂಧಿ ನಗರದಲ್ಲಿ ರೋಡ್‌ ಶೋ ನಡೆಸಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಒಂದು ಸ್ಥಳದಲ್ಲಿ ಭಾಷಣ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

‘ಕ್ಲಾಕ್‌ ಟವರ್‌ ಬಳಿ 7-8 ಮಂದಿ ನಿಲ್ಲಲು ಅವಕಾಶವಿರುವಂತೆ ಸಣ್ಣ ವೇದಿಕೆ ನಿರ್ಮಾಣಕ್ಕೆ ಅನುಮತಿ ನೀಡಬೇಕು’ ಎಂದು ಚಂದ್ರಾರೆಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಅವರಿಗೆ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಸೆಪಟ್‌, ‘ರಸ್ತೆಯಲ್ಲಿ ಪೆಂಡಾಲ್ ಅಥವಾ ವೇದಿಕೆ ಹಾಕುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದರೆ ರಸ್ತೆಯ ಪಕ್ಕದ ಆಲ್‍ ಅಮೀನ್ ಶಾಲೆ ಆವರಣದಲ್ಲಿ ವೇದಿಕೆಯ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಸಣ್ಣ ವೇದಿಕೆ: ‘ಪರೀಕ್ಷೆಗಳು ನಡೆಯುತ್ತಿವೆ. ಶಾಲಾ- ಕಾಲೇಜು ಆವರಣದಲ್ಲಿ ಸಭೆ ಸಮಾರಂಭ ನಡೆಸಿ ಗೊಂದಲದ ಸೃಷ್ಟಿಸುವ ಅಗತ್ಯವಿಲ್ಲ. ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 7-8 ಮಂದಿಗೆ ಮಾತ್ರ ಅವಕಾಶವಿರುವಂತೆ ಸಣ್ಣ ವೇದಿಕೆ ನಿರ್ಮಿಸುತ್ತೇವೆ. ರಸ್ತೆ ಮಧ್ಯೆ ದೊಡ್ಡ ವೇದಿಕೆ ನಿರ್ಮಿಸಿ ಶಾಮಿಯಾನ ಹಾಕುವುದಿಲ್ಲ’ ಎಂದು ಸಚಿವ ಕೆ.ಆರ್.ರಮೇಶ್‌ ಕುಮಾರ್ ಹೇಳಿದರು. ಇದಕ್ಕೆ ಎಸ್ಪಿ ಸೆಪಟ್‌ ಒಪ್ಪಿಗೆ ಸೂಚಿಸಿದರು.‘ರಾಹುಲ್‌ ಗಾಂಧಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಗೆ ಬರುತ್ತಾರೆ. ನಂತರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಾರೆ’ ಎಂದು ರಮೇಶ್‌ ಕುಮಾರ್‌ ವಿವರಿಸಿದರು.

‘ಬಳಿಕ ಬಂಗಾರಪೇಟೆ ಮಾರ್ಗವಾಗಿ ಕೆಜಿಎಫ್‌ಗೆ ತೆರಳಿ ಸಭೆ ನಡೆಸಿ, ಕೋಲಾರಕ್ಕೆ ಆಗಮಿಸುತ್ತಾರೆ. ಬಂಗಾರಪೇಟೆ ವೃತ್ತದಿಂದ ಕಾಲೇಜು ವೃತ್ತ, ಮೆಕ್ಕೆ ವೃತ್ತ, ಬಸ್‌ ನಿಲ್ದಾಣ ವೃತ್ತದ ಮಾರ್ಗವಾಗಿ ಕ್ಲಾಕ್‌ ಟವರ್‌ವರೆಗೆ ರೋಡ್‌ ಶೋ ನಡೆಸುತ್ತಾರೆ. ನಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ ತೆರಳುತ್ತಾರೆ’ ಎಂದು ಮಾಹಿತಿ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ವಿ.ಆರ್.ಸುದರ್ಶನ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ಅನಿಲ್‌ಕುಮಾರ್, ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ನಸೀರ್‌ ಅಹಮ್ಮದ್, ಮಾಜಿ ಸಚಿವ ನಿಸಾರ್‍ ಅಹಮ್ಮದ್, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಇದ್ದರು.

**

ಜಾಗ ಮತ್ತು ಸಮಯದ ಸಮಸ್ಯೆಯ ಕಾರಣಕ್ಕೆ ಕೋಲಾರದಲ್ಲಿ ಸಾರ್ವಜನಿಕ ಸಮಾವೇಶ ಹಮ್ಮಿಕೊಂಡಿಲ್ಲ. ಪರೀಕ್ಷೆಗಳು ನಡೆಯುತ್ತಿದ್ದು, ಶಾಲಾ ಕಾಲೇಜುಗಳ ಬಳಿ ಸಮಾವೇಶ ನಡೆಸಿದರೆ ಹೊಸ ವಿವಾದ ಸೃಷ್ಟಿಯಾಗುತ್ತದೆ. ಚುನಾವಣೆ ಪೂರ್ವದಲ್ಲಿ ಪಕ್ಷಕ್ಕೆ ಅಂತಹ ಸಮಸ್ಯೆ ಬೇಡ – ಕೆ.ಆರ್‌.ರಮೇಶ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry