ಭಾನುವಾರ, ಡಿಸೆಂಬರ್ 15, 2019
25 °C

ಕೊಡಗಿನ ಬೆಡಗಿಯ ಆತ್ಮಾವಲೋಕನ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಕೊಡಗಿನ ಬೆಡಗಿಯ ಆತ್ಮಾವಲೋಕನ

ದಿಶಾ ಅವರ ಸಿನಿಮಾ ಪಯಣ ಶುರುವಾಗಿದ್ದು 2011ರಲ್ಲಿ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಹುಡುಗರು’ ಸಿನಿಮಾದಲ್ಲಿ ಅವರು ಒಂದು ಸಣ್ಣ ಪಾತ್ರ ನಿಭಾಯಿಸಿದ್ದರು. ಆಗ ಅವರಿನ್ನೂ ಕಾಲೇಜಿನಲ್ಲಿ ಓದುತ್ತಿದ್ದರು. ಆ ಸಿನಿಮಾದ ನಂತರ ದಿಶಾ ಒಂದೆರಡು ವರ್ಷಗಳವರೆಗೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿಲ್ಲ. 2013ರಲ್ಲಿ ಬಿಡುಗಡೆಯಾದ ‘ಅಗಮ್ಯ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

‘ಮಳ್ಳಿ ಮತ್ತು ಆಶೀರ್ವಾದ ಸಿನಿಮಾಗಳಲ್ಲಿ ನಾನು ನಟಿಸಿದ ನಂತರ, ಅವುಗಳಲ್ಲಿನ ಕೆಲವು ಸಂಭಾಷಣೆಗಳು ಗಾಸಿಪ್‌ಗಳಿಗೆ ಆಹಾರವಾದವು. ಅದಾದ ನಂತರ ನಾನು ತುಸು ಚೂಸಿ ಆದೆ. ಉತ್ತಮ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’ ಎನ್ನುತ್ತಾರೆ ದಿಶಾ. ಅವರು ನಟಿಸಿರುವ ಚಿತ್ರ ‘ಸಾಲಿಗ್ರಾಮ’ ಚಿತ್ರೀಕರಣ ಪೂರ್ಣಗೊಂಡಿದೆಯಂತೆ, ಅದು ಶೀಘ್ರದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದರಲ್ಲಿ ದಿಶಾ ಅವರದ್ದು ನಾಯಕಿಯ ಪಾತ್ರ. ‘ಇದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಅಂಶಗಳು ಇರುವ ಸಿನಿಮಾ. ನನ್ನದು ಇದರಲ್ಲಿ ಹೋಮ್ಲಿ ಪಾತ್ರ’ ಎಂದರು.

‘ಟರ್ನಿಂಗ್‌ ಪಾಯಿಂಟ್‌’ ಸಿನಿಮಾದಲ್ಲಿ ಕೂಡ ಅವರು ಒಂದು ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇದರಲ್ಲಿ ಅವರಿಗೆ ಸಿಕ್ಕಿರುವುದು ನೆಗೆಟಿವ್‌ ಶೇಡ್‌ ಇರುವ ಪಾತ್ರ. ಸಿನಿಮಾ ರಂಗಕ್ಕೆ ಬಂದಿರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರೆ, ‘ಆಕಸ್ಮಿಕವಾಗಿ ಬಂದೆ. ಸಿನಿಮಾ ತಾರೆ ಆಗಬೇಕು ಎಂದು ಮೊದಲೇ ಬಯಸಿರಲಿಲ್ಲ’ ಎಂಬ ಉತ್ತರ ನೀಡುತ್ತಾರೆ ದಿಶಾ. ‘ಸಿನಿಮಾ ಬಗ್ಗೆ ನನಗೆ ಮೊದಲು ಅಷ್ಟೇನೂ ಆಸಕ್ತಿ ಇರಲಿಲ್ಲ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸಿಕ್ಕ ಒಂದು ಸಣ್ಣ ಅವಕಾಶ ಬಳಸಿಕೊಂಡು ನಟಿಯಾದೆ. ಆದರೆ ಈಗ ನಾನು ಈ ಕ್ಷೇತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ’ ಎನ್ನುವುದು ಅವರು ನೀಡುವ ವಿವರಣೆ.

ದಿಶಾ ಅವರು ತಮಗೆ ಇಂಥದ್ದೇ ಪಾತ್ರ ಆಗಬೇಕು, ಇಂಥದ್ದು ಆಗದು ಎಂಬ ಕಟ್ಟುಪಾಡುಗಳನ್ನು ಹೇರಿಕೊಂಡವರಲ್ಲ. ‘ನಾನು ಯಾವುದೇ ಪಾತ್ರ ಮಾಡಲು ಸಿದ್ಧ. ದೇವದಾಸ್‌ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ನಿಭಾಯಿಸಿದಂತಹ ಪಾತ್ರಗಳು ನನಗೆ ಹೆಚ್ಚು ಇಷ್ಟವಾಗುತ್ತವೆ. ಗ್ಲಾಮರಸ್‌ ಪಾತ್ರಗಳ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ’ ಎಂದು ಅವರು ಹೇಳುತ್ತಾರೆ.

ಇವರು ಅಭಿನಯಕ್ಕೆ ಸಂಬಂಧಿಸಿದಂತೆ ವಿಶೇಷ ತರಬೇತಿ ಪಡೆದವರಲ್ಲ. ಚಿತ್ರೀಕರಣ ನಡೆಯುವ ಜಾಗವೇ ಇವರ ಪಾಲಿನ ಕಲಿಕಾ ಕೇಂದ್ರ. ‘ನಾನು ನಟಿಸಿದ ಸಿನಿಮಾಗಳ ನಿರ್ದೇಶಕರು, ಸಿನಿಮಾ ತಂಡವರು ನಟನೆಯ ಬಗ್ಗೆ ಹೇಳಿಕೊಡುತ್ತಿದ್ದರು. ಅದೇ ನನಗೆ ಪಾಠವಾಯಿತು’ ಎಂದು ತಮ್ಮ ಕಲಿಕೆಯ ಬಗ್ಗೆ ದಿಶಾ ತಿಳಿಸುತ್ತಾರೆ.

ದುನಿಯಾ ಸೂರಿ, ಯೋಗರಾಜ್‌ ಭಟ್‌ ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡಬೇಕು. ದರ್ಶನ್‌, ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌ ಅವರಂತಹ ನಟರ ಜೊತೆ ನಟಿಸಬೇಕು ಎಂಬುದು ಇವರಲ್ಲಿರುವ ಆಸೆ.

‘ಬದಲಾಗಿದೆ ಟ್ರೆಂಡ್‌’: ‘ಕನ್ನಡ ಸಿನಿಮಾಗಳಲ್ಲಿ ಈಗ ಟ್ರೆಂಡ್‌ ಬದಲಾಗಿದೆ. ಈಗಿನ ಸ್ಕ್ರಿಪ್ಟ್‌ಗಳಲ್ಲಿ ಒಂದು ತೂಕ ಇರುತ್ತದೆ. ಸಿನಿಮಾಗಳಲ್ಲಿ ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ನಟಿಯಾದವಳು ಹೀರೊ ಜೊತೆ ನಟಿಸಿದರೆ ಸಾಕು ಎಂಬಂತಹ ಮನೋಭಾವ ಮೊದಲು ಇತ್ತು. ಆದರೆ ಈಗ ಅಂತಹ ಸ್ಥಿತಿ ಇಲ್ಲ. ಹಾಗಾಗಿ, ನನ್ನ ಪಾತ್ರವು ಸಿನಿಮಾ ವೀಕ್ಷಕರಿಗೆ ಎದ್ದು ಕಾಣುವಂತೆ ಇರಬೇಕು, ಎಲ್ಲರಿಗೂ ಇಷ್ಟವಾಗುವಂತಹ ಪಾತ್ರ ಅದಾಗಬೇಕು. ಅಂತಹ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ. ಆ ಪಾತ್ರ ಹೋಮ್ಲಿ, ಗ್ಲಾಮರಸ್‌, ನೆಗೆಟಿವ್‌ ಅಥವಾ ಪಾಸಿಟಿವ್‌... ಹೇಗೂ ಇರಬಹುದು’ ಎಂದು ದಿಶಾ ಹೇಳುತ್ತಾರೆ.

ಅವರು ಗಮನಿಸಿರುವ ಪ್ರಕಾರ ಈಗ ಕನ್ನಡದಲ್ಲಿ ನಾಯಕಿಯರಿಗೆ ಬಹಳಷ್ಟು ಅವಕಾಶಗಳು ಇವೆ. ಈಗ ಬರುತ್ತಿರುವ ಸಿನಿಮಾಗಳಲ್ಲಿ ಅಭಿನಯಕ್ಕೆ ದೊಡ್ಡ ಮಟ್ಟದ ಅವಕಾಶಗಳೂ ಇವೆ ಎನ್ನುವ ದಿಶಾ, ‘ನಾನು ಈ ಹಿಂದೆ ಕೆಲವು ತಪ್ಪು ಆಯ್ಕೆಗಳನ್ನು ಮಾಡಿದ್ದೇನೆ ಎಂಬುದು ನಿಜ. ನನಗೆ ಸಿನಿಮಾ ರಂಗದಲ್ಲಿ ಗಾಡ್‌ಫಾದರ್‌ ಇರಲಿಲ್ಲ. ಟ್ರೆಂಡ್‌ಗೆ ತಕ್ಕಂತೆ ಪರಿವರ್ತನೆ ತಂದುಕೊಳ್ಳುವುದನ್ನು ನಾನು ಕಲಿತಿದ್ದೇನೆ’ ಎಂದು ಆತ್ಮಾವಲೋಕನದ ಧಾಟಿಯಲ್ಲಿ ಮಾತನಾಡುತ್ತಾರೆ.

‘ಸಾಲಿಗ್ರಾಮ’ ಚಿತ್ರತಂಡ ತಮಗೆ ಒಳ್ಳೆಯ ಪಾಠಗಳನ್ನು ಕಲಿಸಿಕೊಟ್ಟಿದೆ ಎಂದು ಖುಷಿಯಿಂದ ಹೇಳಿಕೊಳ್ಳುವ ದಿಶಾ, ತಮಿಳು ಸಿನಿಮಾ ಉದ್ಯಮದಿಂದಲೂ ಒಂದಿಷ್ಟು ಅವಕಾಶಗಳು ತಮಗೆ ಬರುತ್ತಿವೆ ಎಂದರು.

ಪ್ರತಿಕ್ರಿಯಿಸಿ (+)