‘ಸಚಿವ ಸ್ಥಾನ ತಿರಸ್ಕರಿಸಿದ್ದ ಪುಟ್ಟಣ್ಣಯ್ಯ ರೈತರ ಜತೆಗಿದ್ದರು’

7

‘ಸಚಿವ ಸ್ಥಾನ ತಿರಸ್ಕರಿಸಿದ್ದ ಪುಟ್ಟಣ್ಣಯ್ಯ ರೈತರ ಜತೆಗಿದ್ದರು’

Published:
Updated:

ಪಾಂಡವಪುರ: ಕರ್ನಾಟಕದ ಇಬ್ಬರು ಮುಖ್ಯಮಂತ್ರಿಗಳು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನದ ಆಹ್ವಾನ ನೀಡಿದ್ದರೂ ಅದನ್ನು ತಿರಸ್ಕರಿಸಿ ರೈತರ ರಕ್ಷಣೆಗಾಗಿ ರೈತ ಚಳವಳಿಯನ್ನು ಜೀವಂತಗೊಳಿಸಿದ್ದರು ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ನಡೆದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪುಟ್ಟಣ್ಣಯ್ಯ ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಲಿಲ್ಲ. ಅವರು ಮಾಡಿದ್ದು, ರೈತರ ಹಾಗೂ ಜನಸಾಮಾನ್ಯರ ಪರವಾದ ಬದಲಾವಣೆಯ ರಾಜಕಾರಣ. ತಮ್ಮ ವಿಚಾರ, ಹೋರಾಟದಿಂದಾಗಿ ಸರ್ಕಾರಕ್ಕೆ ಲಗಾಮು ಹಾಕಿ ಜನಪರ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಸ್ವರಾಜ್ ಇಂಡಿಯಾದ ರಾಜಕಾರಣವು ಸಚಿವಸ್ಥಾನ ಪಡೆಯುವ ಅಧಿಕಾರದ ರಾಜಕಾರಣವಲ್ಲ. ಪ್ರಸ್ತುತ ಎಲ್ಲ ರಾಜಕೀಯ ಪಕ್ಷಗಳು ಕೇವಲ ಅಧಿಕಾರ ಗಳಿಸಿ ಲಾಭದಾಯಕ ರಾಜಕಾರಣ ಮಾಡುತ್ತಿವೆ. ಹಾಗಾಗಿ ಸ್ವರಾಜ್ ಇಂಡಿಯಾ ಸಮಗ್ರ ಬದಲಾವಣೆಗಾಗಿ ಪರ್ಯಾಯ ರಾಜಕಾರಣ ಹುಟ್ಟುಹಾಕಿದೆ. ರೈತ ನಾಯಕ ಪುಟ್ಟಣ್ಣಯ್ಯ ಅವರು ಇಂತಹ ಪರ್ಯಾಯ ರಾಜಕಾರಣದ ಕನಸು ಕಂಡಿದ್ದರು. ಇವರ ಕನಸನ್ನು ನನಸು ಮಾಡುವ ಹೊಣೆಗಾರಿಗೆ ರೈತ ಸಂಘದ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.

ರೈತ ನಾಯಕ ಪುಟ್ಟಣ್ಣಯ್ಯ ಅವರ ಚಿಂತನೆ, ಹೋರಾಟ, ರಾಜನೀತಿಯನ್ನು ಮುಂದುವರಿಸಲು ದರ್ಶನ್ ಪುಟ್ಟಣ್ಣಯ್ಯ ಉತ್ತರಾಧಿಕಾರಿಯಾಗಿ ಬಂದಿದ್ದಾರೆ. ವಿದೇಶದಲ್ಲಿದ್ದ ದರ್ಶನ್ ಈಗ ಅಪ್ಪನ ಹಾದಿ ತುಳಿದಿದ್ದಾರೆ. ದರ್ಶನ್ ಆಯ್ಕೆ ಎಲ್ಲೋ ಕುಳಿತು ಪಕ್ಷ ತೀರ್ಮಾನಿಸಿದ್ದಲ್ಲ. ರೈತ ಚಳವಳಿ ಕಾರ್ಯಕರ್ತರ, ಅಭಿಮಾನಿಗಳ, ಹಿತೈಷಿಗಳ ಹಾಗೂ ಮೇಲುಕೋಟೆ ಕ್ಷೇತ್ರದ ಜನರ ಆಯ್ಕೆಯಾಗಿದೆ. ದೇಶದ ಗಮನಸೆಳೆಯುತ್ತಿರುವ ದರ್ಶನ್ ಆಯ್ಕೆಯನ್ನು ಅಧಿಕ ಮತಗಳಿಂದ ಆಯ್ಕೆಮಾಡಬೇಕು ಎಂದು ಮನವಿ ಮಾಡಿದರು.

ಸ್ವರಾಜ್ ಇಂಡಿಯಾದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲೀಪಾಟೀಲ್, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್, ಬಡಗಲಪುರ ನಾಗೇಂದ್ರ, ಪಚ್ಚೆ ನಂಜುಂಡಸ್ವಾಮಿ, ಕೋಕಿಲಾ ಜ್ಞಾನೇಶ್, ಎ.ಎಲ್.ಕೆಂಪೂಗೌಡ, ಕೆ.ಟಿ.ಗೋವಿಂದೇಗೌಡ, ಪಿ.ನಾಗರಾಜು, ಎಚ್.ಎನ್.ವಿಜಯಕುಮಾರ್, ಕೋಟಿ ಶಂಕರೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry