ಶುಕ್ರವಾರ, ಡಿಸೆಂಬರ್ 6, 2019
25 °C
ಸ್ವರಾಜ್ ಇಂಡಿಯಾ ಪಕ್ಷದ ಕಚೇರಿಗೆ ಯೋಗೇಂದ್ರ ಯಾದವ್‌ ಚಾಲನೆ

ಹಣ–ಹೆಣ ರಾಜಕಾರಣದ ವಿರುದ್ಧ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣ–ಹೆಣ ರಾಜಕಾರಣದ ವಿರುದ್ಧ ಹೋರಾಟ

ಮಂಡ್ಯ: ‘ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಹಣ, ಹೆಣದ ಮೇಲೆ ರಾಜಕಾರಣ ಮಾಡುತ್ತಿವೆ. ಹೊಸ ಆಲೋಚನೆ, ದೃಷ್ಟಿಕೋನದೊಂದಿಗೆ ಸ್ವರಾಜ್‌ ಇಂಡಿಯಾ ಪಕ್ಷ ದೇಶದಾದ್ಯಂತ ಸ್ವಾರ್ಥ ರಾಜಕಾರಣದ ವಿರುದ್ಧ ಹೋರಾಟ ನಡೆಸುತ್ತದೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌ ಹೇಳಿದರು. ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತಂದಿದೆ. ಸಂವಿಧಾನಿಕ ತತ್ವಗಳಿಗೆ ಬೆದರಿಕೆ ಇದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‌ ಆಡಳಿತ ಪಕ್ಷದ ವೈಫಲ್ಯಗಳಿಗೆ ಪ್ರತಿರೋಧ ಒಡ್ಡಲು ವಿಫಲವಾಗಿದೆ. ರಾಜ್ಯದಲ್ಲಿ ಜೆಡಿಎಸ್‌ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ನಮ್ಮ ಪಕ್ಷ ಕರ್ನಾಟಕದಲ್ಲಿಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಮೇಲುಕೋಟೆ ಹಾಗೂ ಮದ್ದೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಯುವಜನರು, ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಯುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಹೊಸ ಆಲೋಚನೆ ಹಾಗೂ ದೃಷ್ಟಿಕೋನವನ್ನು ಮರು ಸ್ಥಾಪನೆ ಮಾಡಬೇಕಾಗಿದೆ. ಸ್ವರಾಜ್‌ ಇಂಡಿಯಾ ಪಕ್ಷ ರೈತ ಚಳವಳಿ, ದಲಿತ ಚಳವಳಿ ಹಾಗೂ ಭ್ರಷ್ಟಾಚಾರ ವಿರೋಧಿ ಚಳವಳಿಯ ಮಾರ್ಗದಲ್ಲಿ ನಡೆದುಬಂದಿದೆ. ಪಕ್ಷ ಈ ಮೂರು ಚಳವಳಿಗಳ ಸಂಗಮವಾಗಿದೆ. ರಾಜಕೀಯಕ್ಕೆ ಹಣ ಬಲ, ಬಾಹುಬಲ ಮೀರಿದ ಮರ್ಯಾದೆಯನ್ನು ತಂದುಕೊಡಬೇಕಾದ ಜವಾಬ್ದಾರಿ ಇದೆ. ರಾಜಕೀಯ ಪಕ್ಷಗಳಿಗೆ ಮಾದರಿ ನೀತಿ ಸಂಹಿತೆಯ ಅವಶ್ಯಕತೆ ಇದ್ದು ಅದನ್ನು ಸ್ವರಾಜ್‌ ಇಂಡಿಯಾ ಪಕ್ಷ ಅಳವಡಿಸಿಕೊಂಡಿದೆ’ ಎಂದು ಹೇಳಿದರು.

ರೈತರಿಗೆ ಮೂರು ಸಂಕಷ್ಟ: ‘ಇಡೀ ದೇಶದಲ್ಲಿ ರೈತರು ಮೂರು ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟ, ನೈಸರ್ಗಿಕ ಸಂಕಷ್ಟ ಹಾಗೂ ಉಳಿವಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಂದಾಗಿ ರೈತರು ದಿನೇದಿನೆ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ನೀರಾವರಿ ಪ್ರದೇಶ ಚೆನ್ನಾಗಿರುವ ಪ್ರದೇಶದಲ್ಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಂಜಾಬ್‌, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲೂ ರೈತರು ಜೀವ ಕಳೆದುಕೊಂಡಿದ್ದಾರೆ. ರೈತರ ಜೀವಕ್ಕೆ ಘನತೆ ತಂದುಕೊಡುವಲ್ಲಿ ರಾಜಕಾರಣಿಗಳು ಪ್ರಯತ್ನಿಸಬೇಕು’ ಎಂದು ಹೇಳಿದರು.

ಧರ್ಮ ಒಡೆಯುವುದು ಸರಿಯಲ್ಲ: ‘ಧರ್ಮ ಧರ್ಮಗಳ ನಡುವೆ ಒಡಕು ಉಂಟುಮಾಡುವುದು ರಾಷ್ಟ್ರದ್ರೋಹದ ಕೆಲಸವಾಗಿದೆ. ಅದರಲ್ಲೂ ಚುನಾವಣೆ ಸಮೀಪಿಸುವಾಗ ಮತಕ್ಕಾಗಿ ಈ ಕೆಲಸವನ್ನು ಎಂದಿಗೂ ಮಾಡಕೂಡದು. ರಾಜ್ಯದಲ್ಲಿ ನಡೆಯುತ್ತಿರುವ ಲಿಂಗಾಯತ–ವೀರಶೈವ ಪತ್ಯೇಕ ವಿಚಾರ ಹೊಸದಲ್ಲ. ಮೊದಲಿನಿಂದಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗ ಚುನಾವಣೆಯ ಲಾಭ ಪಡೆಯಲು ಪಕ್ಷಗಳು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ರಾಷ್ಟ್ರದ ವೈವಿಧ್ಯವನ್ನು ಕಾಪಾಡುವ ರಾಜಕೀಯ ಪಕ್ಷಗಳ ಅವಶ್ಯಕತೆ ಇದೆ. ಎಲ್ಲಾ ಧರ್ಮಗಳನ್ನು ಸಾಮರಸ್ಯ ತತ್ವದ ಮೇಲೆ ಕಾಣಬೇಕಾಗಿದೆ’ ಎಂದು ಹೇಳಿದರು.

‘ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ನಡೆದುಕೊಳ್ಳಬೇಕು. ಸ್ವರಾಜ್‌ ಇಂಡಿಯಾ ಪಕ್ಷದ ಉದ್ದೇಶ ಇದೇ ಆಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧವಾಗಿದ್ದು ಶೀಘ್ರ ಬಿಡುಗಡೆ ಮಾಡಲಾಗುವುದು. ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಅವರು ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡುವರು. ನಾವು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುತ್ತಿಲ್ಲ. ಸ್ಪರ್ಧೆ ಮಾಡುವ ಕೆಲವೇ ಕ್ಷೇತ್ರಗಳಲ್ಲಿ ಸಂಘಟಿತವಾಗಿ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲೀಪಾಟೀಲ, ಕಾರ್ಯಾಧ್ಯಕ್ಷ ಅಮ್ಜದ್‌ ಪಾಷಾ, ಉಪಾಧ್ಯಕ್ಷ ಕರುಣಾಕರ್‌, ರೈತಸಂಘದ ಮುಖಂಡ ಬಡಗಲಪುರ ನಾಗೇಂದ್ರ, ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹಾಜರಿದ್ದರು.

ಮದ್ದೂರು: ‘ರೈತರೇ ದೇಶವನ್ನು ಮುನ್ನೆಡೆಸುವ ಕಾಲ ಸನ್ನಿಹಿತವಾಗಿದೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದರು. ಪಟ್ಟಣದಲ್ಲಿ ಬುಧವಾರ ಸ್ವರಾಜ್ ಇಂಡಿಯಾ ಪಕ್ಷದ ಕಚೇರಿಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಈ ದೇಶದ ಬೆನ್ನೆಲುಬು ರೈತ. ಹೆಚ್ಚಿನ ಸಂಖ್ಯೆಯಲ್ಲಿರುವ ರೈತರೇ ಆಳ್ವಿಕೆ ನಡೆಸುವ ಪರಿಸ್ಥಿತಿ ಬರಬೇಕಿದೆ. ದೇಶದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಿದರೆ ಸಾಲದು. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕಾನೂನು ಬದ್ಧವಾಗಿ ದೊರಕಬೇಕು. ರೈತರ ಸಮಸ್ಯೆಗಳನ್ನು ಸದನದಲ್ಲಿ ಸರ್ಕಾರಕ್ಕೆ ಮನದಟ್ಟು ಮಾಡುವ ರೈತ ಪ್ರತಿನಿಧಿಗಳು ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ಸ್ವರಾಜ್‌ ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದೆ’ ಎಂದರು.

‘ಮೇಲುಕೋಟೆ ಕ್ಷೇತ್ರದಿಂದ ದರ್ಶನ್‌ ಪುಟ್ಟಣ್ಣಯ್ಯ ಕಣಕ್ಕಿಳಿದಿದ್ದಾರೆ. ಅದರಂತೆ ಮದ್ದೂರು ವಿಧಾನ ಸಭಾ ಕ್ಷೇತ್ರದಿಂದ ಸೋಂಪುರ ಲಿಂಗೇಗೌಡ ಅವರನ್ನು ಪಕ್ಷದ ಸ್ಪರ್ಧಿಯಾಗಿ ಕಣಕ್ಕಿಳಿಸುತ್ತಿದ್ದೇವೆ. ಇವರನ್ನು ಗೆಲ್ಲಿಸುವ ಮೂಲಕ ರೈತ ಕುಲ ಆತ್ಮಾಭಿಮಾನ ಪ್ರದರ್ಶಿಸಬೇಕು’ ಎಂದು ಮನವಿ ಮಾಡಿದರು.‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಿಂದೂ ಹಾಗೂ ಮುಸ್ಲಿಂ ಜನಾಂಗಗಳು ನನ್ನ ಎರಡು ಕಣ್ಣುಗಳು ಎಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಓಟ್‌ ಬ್ಯಾಂಕ್‌ಗಾಗಿ ಈ ಕೋಮುಗಳ ನಡುವೆ ಸಂಘರ್ಷ ಹಚ್ಚಿದ್ದಾರೆ. ಇಂತಹ ಯತ್ನಗಳನ್ನು ಪ್ರಜ್ಞಾವಂತ ಮತದಾರರು ವಿರೋಧಿಸಿ ಕೋಮುವಾದಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕರೆ ನೀಡಿದರು.

ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಸಾಹಿತಿ ದೇವನೂರು ಮಹಾದೇವ ಮಾತನಾಡಿ, ‘ಇಂದು ಮಂಡ್ಯ ಜಿಲ್ಲೆಯಲ್ಲಿ ಸ್ವರಾಜ್‌ ಪಕ್ಷದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಲು ಚಿಕ್ಕ ಬೀಜವನ್ನು ಬಿತ್ತಿದ್ದೇವೆ. ಈ ಬೀಜ ಗಿಡವಾಗಿ ಮುಂದೊಂದು ದಿನ ದೇಶದಲ್ಲಿ ಹೆಮ್ಮರವಾಗಿ ಬೆಳೆಯುವುದು ನಿಶ್ಚಿತ. ಜನರಿಂದ ಜನರಿಗೋಸ್ಕರ ಎಂಬ ರಾಜಕಾರಣ ಈ ಹಿಂದೆ ಇತ್ತು. ಆದರೆ, ಇದೀಗ ಹಣದಿಂದ, ಹಣಕ್ಕೋಸ್ಕರ ರಾಜಕಾರಣ ಎಂಬ ಹೊಸ ಸಿದ್ಧಾಂತ ಚಾಲ್ತಿಯಲ್ಲಿದೆ. ಇಂತಹ ಸಂಪತ್ತಿನ ಎದುರು ಸವಾಲು ಹಾಕಿ ಲಿಂಗೇಗೌಡರಂತಹ ಯುವಕರು ಗೆದ್ದು ಬರಲಿ ಎಂಬುದು ನನ್ನ ಆಶಯವಾಗಿದೆ’ ಎಂದರು.

ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ಲಿಂಗೇಗೌಡ ಮಾತನಾಡಿ, ‘ಮದ್ಯ, ಹಣ ಇನ್ನಿತರ ಆಮಿಷ ಮುಕ್ತ ಚುನಾವಣೆ ಸಾಕಾರಗೊಳ್ಳಲಿ ಎಂಬ ಉದ್ದೇಶದಿಂದ ಈ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದೇನೆ. ಹೋದಲ್ಲೆಲ್ಲಾ ಯುವಜನರು, ಕೂಲಿಕಾರ್ಮಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ’ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎ.ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್‌, ಸ್ವರಾಜ್ ಇಂಡಿಯಾ ಸಂಚಾಲಕ ಅಮ್ಜದ್ ಪಾಷ, ರೈತ ಮುಖಂಡರಾದ ಲಿಂಗಾಪ್ಪಾಜಿ, ವೈ. ರಾಮಕೃಷ್ಣಯ್ಯ, ಸತ್ಯಪ್ಪ, ರಾಮಣ್ಣ ಹಾಜರಿದ್ದರು.

**

ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಲು ಇಂದು ಸ್ವರಾಜ್‌ ಇಂಡಿಯಾ ಎಂಬ ಚಿಕ್ಕ ಬೀಜವನ್ನು ಬಿತ್ತಿದ್ದೇವೆ. ಈ ಬೀಜ ಮುಂದೊಂದು ದಿನ ಗಿಡವಾಗಿ ಹೆಮ್ಮರವಾಗಿ ಬೆಳೆಯುವುದು ನಿಶ್ಚಿತ – ದೇವನೂರು ಮಹಾದೇವ, ಸಾಹಿತಿ.

**

ಪ್ರತಿಕ್ರಿಯಿಸಿ (+)