ಭಾನುವಾರ, ಡಿಸೆಂಬರ್ 8, 2019
21 °C
ಸಹರಾ ಇಂಡಿಯಾ ಬ್ಯಾಂಕ್‌ನಿಂದ ಕೋಟ್ಯಂತರ ರೂಪಾಯಿ ವಂಚನೆ; ಗ್ರಾಹಕರ ಆರೋಪ

ಅವಧಿ ಮುಗಿದರೂ ಹಣ ನೀಡದ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಧಿ ಮುಗಿದರೂ ಹಣ ನೀಡದ ಬ್ಯಾಂಕ್‌

ಲಿಂಗಸುಗೂರು: ಸಹರಾ ಇಂಡಿಯಾ ಗ್ರೂಪ್ಸ್‌ನ ಲಿಂಗಸುಗೂರು ಶಾಖೆಯಲ್ಲಿ ಠೇವಣಿ, ಆರ್‌ಡಿ ಇತರೆ ಖಾತೆಗಳಲ್ಲಿ ಹಣ ಪಾವತಿಸಿದ ಗ್ರಾಹಕರಿಗೆ ಅವಧಿ ಮುಗಿದರೂ ಹಣ ಮರುಪಾವತಿಸದೆ ವಂಚನೆ ಮಾಡಿದ್ದಾರೆ ಎಂದು ಬುಧವಾರ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಸಾವಿರಾರು ಶಾಖೆ ಹೊಂದಿರುವ ಸಹರಾ ಇಂಡಿಯಾ, ಕಳೆದ 15 ವರ್ಷಗಳ ಹಿಂದೆ ಲಿಂಗಸುಗೂರಿನಲ್ಲಿ ಶಾಖೆ ಆರಂಭ ಮಾಡಿತ್ತು. ನಿಗದಿತ ಠೇವಣಿ, ಮಾಸಿಕ ಆರ್‌ಡಿ, ನಿತ್ಯ ಪಿಗ್ನಿ ತುಂಬಲು ಏಜೆಂಟರು (ಮಧ್ಯವರ್ತಿಗಳು) ಕಮಿಷನ್‌ ಆಧಾರದ ಮೇಲೆ ಕೆಲಸ ಮಾಡುತ್ತ ಬಂದಿದ್ದಾರೆ. ಒಂದು ವರ್ಷದಿಂದ ಗ್ರಾಹಕರ ಹಣ ಮರುಪಾವತಿಸಲು ಮೀನಮೇಷ  ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಹುತೇಕ ಗ್ರಾಹಕರು ₹ 1ಲಕ್ಷದಿಂದ ₹ 15ಲಕ್ಷದ ಹಣದಷ್ಟು ಠೇವಣಿ ಇರಿಸಿದ್ದಾರೆ. ಈಗಾಗಲೆ ಕೋಟ್ಯಂತರ ಹಣ ಠೇವಣಿ ಅವಧಿ ಮುಕ್ತಾಯಗೊಂಡಿದ್ದು, ನಿತ್ಯ ನೂರಾರು ಗ್ರಾಹಕರು ಬಾಂಡ್‌, ಪಾಸ್‌ಬುಕ್‌ ಸಮೇತ ಶಾಖೆಗೆ ಬಂದು ಹೋಗುತ್ತಿದ್ದಾರೆ. ನಿತ್ಯ ಬರುವ ಗ್ರಾಹಕರಿಗೆ ಹಣ ಕಟ್ಟುವುದಿದ್ದರೆ ಕಟ್ಟಿ ಇಲ್ಲದಿದ್ದರೆ ಅವಧಿ ಮುಗಿದ ಹಣ ನೀಡಲು ಆಗುವುದಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಬುಧವಾರ ಶಾಖೆಯಲ್ಲಿ ಬಾಂಡ್‌ ಸಮೇತ ಹಾಜರಿದ್ದ ಶರೀಫಾ ಬಿ ₹ 16 ಲಕ್ಷ, ರುಶಿಯಾಬೇಗಂ ₹ 1 ಲಕ್ಷ, ಸಾಯಿಬಾಬ ₹ 1.09 ಲಕ್ಷ, ಬಾಲಮಂಜೂರಿ ₹ 56 ಸಾವಿರ, ವೀರಯ್ಯ ಹಟ್ಟಿ ₹ 80 ಸಾವಿರ, ನರಸನಗೌಡ ₹ 5 ಲಕ್ಷ, ಜಗದೀಶ ಜಾಲಹಳ್ಳಿ ₹ 1ಲಕ್ಷ ಹಣ ಪಾವತಿಸುವಂತೆ ಮನವಿ ಮಾಡಿ ಕೊಂಡರೆ, ನಿಮಗೆ 2019ರ ನಂತರವೆ ಹಣ ನೀಡುತ್ತೇವೆ. ಏನಾದರು ಮಾಡಿಕೊಳ್ಳಿ ಎಂದು ಅಧಿಕಾರಿ ಹಾರಿಕೆ ಉತ್ತರ ನೀಡಿದರು.

ಶಾಖೆಯಲ್ಲಿ ವಿವಿಧ ಖಾತೆಗಳಲ್ಲಿ ಲಕ್ಷಾಂತರ ಹಣ ಹಾಕಿದ್ದು ಅವಧಿ ಮುಗಿದಿದ್ದು ಬಾಂಡ್‌ ಕಟ್ಟಳೆ ಆಧರಿಸಿ ಹಣ ನೀಡುವಂತೆ ಕೇಳಿದಾಗ ಬ್ಯಾಂಕ್‌ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ದ್ದಲ್ಲದೇ ಗ್ರಾಹಕರ ಜತೆ ವಾಗ್ವಾದಕ್ಕೆ ಇಳಿದರು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ವಾಗ್ವಾದ ಮಾಡಿದರೆ ಹಣ ವಾಪಸ್‌ ನೀಡಲ್ಲ ಎಂದು ಖಡಕ್‌ ಉತ್ತರ ನೀಡಿದ್ದರಿಂದ ಗ್ರಾಹಕರು ಕಣ್ಣೀರಿಟ್ಟು ಶಾಪ ಹಾಕುತ್ತಿರುವುದು ಕಂಡು ಬಂತು.

ಏಜೆಂಟ್‌ ವಿರುಪಾಕ್ಷಪ್ಪ ಹೊನ್ನಳ್ಳಿ ಮಾತನಾಡಿ, ‘ಕಳೆದ 10 ವರ್ಷಗಳ ಅವಧಿಯಲ್ಲಿ ವಿವಿಧ ಗ್ರಾಹಕರಿಂದ ಸಂಗ್ರಹಿಸಿ ಅಂದಾಜು ₹30 ಲಕ್ಷದಷ್ಟು ಹಣ ಠೇವಣಿ ಇಟ್ಟಿದ್ದೇನೆ. ಅವಧಿ ಮುಗಿದರೂ ನೀಡದಕ್ಕೆ ತಾವೇ ಜಮೀನು ಮಾರಿ ₹ 10 ಲಕ್ಷ ಹಣ ಗ್ರಾಹಕರಿಗೆ ವಾಪಸ್‌ ನೀಡಿದ್ದೇನೆ. ಏಜೆಂಟರಾಗಿ ಕೆಲಸ ಮಾಡಿದ ತಪ್ಪಿಗೆ ಆಸ್ತಿ ಕಳೆದುಕೊಳ್ಳುವಂತಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಸಹರಾ ಇಂಡಿಯಾದ ಸಿಂಧನೂರು ಶಾಖೆ ವ್ಯವಸ್ಥಾಪಕ ವಿಜಯಕುಮಾರ ಮಾತನಾಡಿ, ‘ಗ್ರಾಹಕರು ತಾವು ಹಣ ನೀಡುವವರೆಗೆ ಶಾಂತವಾಗಿರಬೇಕು. ಅವಧಿ ಮುಗಿದರೂ ಏನು ಮಾಡಲಾಗದು. ಸೆಬಿ ಸಂಸ್ಥೆಯಲ್ಲಿ ನೂರಾರು ಕೋಟಿ ಹಣ ಇಟ್ಟಿದ್ದೇವೆ. ಪ್ರಕರಣ ಮುಗಿದಾಕ್ಷಣ ಹಣ ಬಿಡುಗಡೆಯಾದರೆ, ತಮಗೆ ಬಾಂಡ್‌ ಆಧಾರಿತ ಹಣ ವಾಪಸ್‌ ನೀಡಲಾಗುವುದು’ ಎಂದು ಹಾರಿಕೆ ಉತ್ತರ ನೀಡಿದರು.

**

ಮಹಿಳೆಯರು ಗುಂಪು ಕಟ್ಟಿಕೊಂಡು ಉಳಿತಾಯ ಮಾಡಿ ಲಕ್ಷಾಂತರ ಹಣ ತುಂಬಿದ್ದೇವೆ. ಈ ಹಣ ವಾಪಸ್‌ ಬರದಿದ್ದರೆ ಆತ್ಮಹತ್ಯೆ ಯೊಂದೇ ಮುಂದಿರುವ ದಾರಿ – ಹನುಮಂತಿ, ಸಹರಾ ಇಂಡಿಯಾ ಗ್ರಾಹಕಿ.

**

ಬಿ.ಎ. ನಂದಿಕೋಲಮಠ

ಪ್ರತಿಕ್ರಿಯಿಸಿ (+)