ಭಾನುವಾರ, ಡಿಸೆಂಬರ್ 15, 2019
25 °C
ಮಾಗಡಿಯ ಕೋಟೆ ಮೈದಾನದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಅದ್ಧೂರಿ ಕಾರ್ಯಕ್ರಮ

ಜೆಡಿಎಸ್ ನಿಲುವು ಸ್ಪಷ್ಪಪಡಿಸಿ: ರಾಹುಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್ ನಿಲುವು ಸ್ಪಷ್ಪಪಡಿಸಿ: ರಾಹುಲ್‌

ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ನಡುವೆ ಸಂಘರ್ಷ ನಡೆದಿದ್ದು, ಜೆಡಿಎಸ್ ಯಾರ ಪರ ಎಂದು ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪುನರುಚ್ಚರಿಸಿದರು.ಇಲ್ಲಿನ ಕೋಟೆ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು.

ಜೆಡಿಎಸ್‌ನಲ್ಲಿನ‘ಎಸ್’ಎಂದರೆ ಸಂಘ ಪರಿವಾರ ಎಂಬಂತೆ ಆಗಿದೆ. ಅದು ಬಿಜೆಪಿಯ ಬಿ ಟೀಮ್‌ ಎಂಬುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಜೆಡಿಎಸ್ ವರಿಷ್ಠರು ರಾಜ್ಯದ ಜನರಿಗೆ ಸ್ಪಷ್ಟ ಸಂದೇಶ ನೀಡಬೇಕು ಎಂದರು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ‘ಗಬ್ಬರ್‌ ಸಿಂಗ್ ಕೀ ಟ್ಯಾಕ್ಸ್’ ಎಂಬಂತೆ ಆಗಿದೆ. ಸಣ್ಣ ಉದ್ಯಮಿಗಳಿಗೆ, ರೈತರಿಗೆ, ಇಲ್ಲಿನ ರೇಷ್ಮೆ ಬೆಳೆಗಾರರು, ಗೊಂಬೆ ತಯಾರಿಕರಿಗೆ ಇದರಿಂದ ತೊಂದರೆ ಆಗಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತರುವಾಯ ಅದನ್ನು ಬದಲಿಸಲಾಗುವುದು ಎಂದರು.

ಉದ್ಯಮಿಗಳ ₹2.5 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ನಿರಾಕರಿಸಿದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ₹8 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನೀರಾವರಿ ಯೋಜನೆಗಳಿಗೆ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ವ್ಯಯಿಸಿದ್ದೇವೆ. ಉಚಿತ ಅಕ್ಕಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಇಂದಿರಾ ಕ್ಯಾಂಟೀನ್‌ ಮೊದಲಾದ ಜನಪ್ರಿಯ ಯೋಜನೆಗಳ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.

ದೇಶದ ಸೈನಿಕರು ನಮ್ಮಲ್ಲಿ ಹಣ, ಆಯುಧ ಇಲ್ಲ ಎನ್ನುತ್ತಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ರಫಲ್‌ ಯುದ್ಧ ವಿಮಾನಗಳ ಖರೀದಿ ಗುತ್ತಿಗೆ

ಯನ್ನು ಎಚ್‌ಎಎಲ್‌ನಿಂದ ಕಿತ್ತುಕೊಂಡು ತಮ್ಮ ಆಪ್ತರಿಗೆ ಕೊಡುತ್ತಾರೆ. ₹45 ಕೋಟಿ ಸಾವಿರ ಅನುಕೂಲ ಮಾಡಿಕೊಡುತ್ತಾರೆ. ಕಪ್ಪು ಹಣ ವಾಪಸ್ ತರುವ ಭರವಸೆಗಳು ಹುಸಿಯಾಗಿದೆ. ನೀರವ್‌ ಮೋದಿ ₹30 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗುತ್ತಾರೆ. ಇದಕ್ಕೆ ಮೋದಿ ಸಹಕಾರವೂ ಇದೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್‌ ವಿರುದ್ಧ ಕಿಡಿ: ಬಿಜೆಪಿ, ಆರ್‌ಎಸ್‌ಎಸ್‌ ನವರು ರಾಜ್ಯದಲ್ಲಿ ಕೋಮು ಭಾವ ಬಿತ್ತುತ್ತಿದ್ದಾರೆ. ಚಡ್ಡಿ ಧರಿಸಿ, ಲಾಠಿ ಹಿಡಿದು, ದೇಶದ ಜನರಿಗೆ ಸುಳ್ಳನ್ನು ಪ್ರಚಾರ ಮಾಡುವ ಕಲೆಯನ್ನು ಕಲಿಸಿಕೊಡುತ್ತಿದ್ದಾರೆ ಎಂದರು.ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಧುಗೌಡ, ಬಿ.ಕೆ. ಹರಿಪ್ರಸಾದ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ಸಂಸದ ಡಿ.ಕೆ. ಸುರೇಶ್‌, ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರವಿ, ಸಿ.ಎಂ. ಲಿಂಗಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಗಂಗಾಧರ್, ಸಯ್ಯದ್‌ ಜಿಯಾವುಲ್ಲಾ, ಮಹಿಳಾ ಘಟಕದ ಪಾರ್ವತಮ್ಮ, ಜಿ.ಪಂ. ಉಪಾಧ್ಯಕ್ಷೆ ದಿವ್ಯಾ ಗಂಗಾಧರ್‌, ಕಲ್ಪನಾ ಶಿವಣ್ಣ, ಇಕ್ಬಾಲ್ ಹುಸೇನ್‌, ಚಂದ್ರಶೇಖರ್, ಗಾಣಕಲ್ ನಟರಾಜು, ವಿಜಯ್‌ದೇವ್‌, ತಾ.ಪಂ.ಅಧ್ಯಕ್ಷ ಶಿವರಾಜು, ಚಿಗಳೂರು ಗಂಗಾಧರ್‌, ಚಂದ್ರೇಗೌಡ, ಬಿ.ವಿ. ಜಯರಾಮು, ಚೇತನ್‌ಕುಮಾರ್, ಬ್ಯಾಟಪ್ಪ, ಬಿ.ಎಸ್. ಕುಮಾರ್‌, ರಾಂಪುರ ನಾಗೇಶ್‌ ವೇದಿಕೆಯಲ್ಲಿ ಇದ್ದರು.‌ ಸಂಭಾವ್ಯ ಅಭ್ಯರ್ಥಿ ಎಚ್‌.ಸಿ. ಬಾಲಕೃಷ್ಣ ಸ್ವಾಗತಿಸಿದರು.

ಸ್ಥಳೀಯ ನಾಯಕರ ನೆನೆದ ರಾಹುಲ್

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಸ್ಥಳೀಯ ನಾಯಕರು, ಮಹನೀಯರನ್ನು ನೆನೆದರು.ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅದರ ನಿರ್ಮಾತೃ ಕೆಂಪೇಗೌಡರು ಕಾರಣ. ಎಲ್ಲ ಜಾತಿ, ಧರ್ಮಗಳ ಜನರು ಒಗ್ಗೂಡಿ ಬೆಳೆಯಬಹುದು ಎನ್ನುವುದನ್ನು ಈ ನಗರಿ ತೋರಿಸಿಕೊಟ್ಟಿದೆ. ಸಾಲುಮರದ ತಿಮ್ಮಕ್ಕ ಜಗತ್ತಿನ ಜನರಿಗೆ ಪರಿಸರ ಸಂರಕ್ಷಣೆ‌ ಪಾಠ ಹೇಳಿಕೊಟ್ಟಿದ್ದಾರೆ. ಇಲ್ಲಿನವರೇ ಆದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಶ್ರೀಗಳು ಜಾತಿ–ಧರ್ಮಗಳನ್ನು ಮೀರಿ ಬದುಕಿದ್ದಾರೆ. ಈ ಮಹನೀಯರ ವಿಚಾರಧಾರೆಗಳೇ ಕಾಂಗ್ರೆಸ್‌ನ ಸಿದ್ಧಾಂತವೂ ಆಗಿದೆ ಎಂದು ಬಣ್ಣಿಸಿದರು.

ಜನಸಾಗರ

ಕೋಟೆ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಜನಸಾಗರ ಹರಿದು ಬಂದಿತ್ತು. ಮಾಗಡಿ ಹಾಗೂ ರಾಮನಗರ ತಾಲ್ಲೂಕಿನಿಂದ ಹಳ್ಳಿಗಳಿಂದ ನೂರಾರು ಬಸ್‌ಗಳಲ್ಲಿ ಜನರು ಸಮಾವೇಶಕ್ಕೆ ಬಂದಿದ್ದರು. ಸಂಜೆ 5ರಿಂದಲೇ ಮೈದಾನದಲ್ಲಿ ಜನ ಸೇರ ತೊಡಗಿದ್ದರು. ಕಾರ್ಯಕ್ರಮ ಮುಗಿಯುವ ವೇಳೆಗೆ ರಾತ್ರಿ ಒಂಭತ್ತಾಗಿತ್ತು. ಸುಮಾರು 30ಸಾವಿರ ವ್ಯವಸ್ಥೆ ಕಲ್ಪಿಸಿದ್ದಾಗಿ ಆಯೋಜಕರು ತಿಳಿಸಿದರು. ಕೋಟೆಯನ್ನು ಕಾಂಗ್ರೆಸ್‌ ಬಾವುಟಗಳಿಂದ ಅದ್ಧೂರಿಯಾಗಿ ಸಿಂಗರಿಸಲಾಗಿತ್ತು. ಸುತ್ತಲೂ ಪೊಲೀಸರು ಬಿಗಿ ಭದ್ರತೆ ಒದಗಿಸಲಾಗಿತ್ತು.

ಪ್ರತಿಕ್ರಿಯಿಸಿ (+)