ಡಿಕೆಶಿ ಎದುರು ನಿಲ್ಲುವವರು ಯಾರು?

7
ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರ: ಉಳಿದ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ

ಡಿಕೆಶಿ ಎದುರು ನಿಲ್ಲುವವರು ಯಾರು?

Published:
Updated:

ರಾಮನಗರ: ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಗೆಲುವಿನ ಓಟಕ್ಕೆ ಈ ಬಾರಿಯ ಲಗಾಮು ಹಾಕುವವರು ಯಾರು ಎಂಬ ಕುತೂಹಲ ಮೂಡಿದೆ.ಡಿಕೆಶಿ ಅವರಿಗೆ ಈ ಬಾರಿ ಟಿಕೆಟ್‌ ದೊರೆಯುವುದರಲ್ಲಿ ಅನುಮಾನವಿಲ್ಲ. ಆದರೆ, ಅವರ ಪ್ರತಿಸ್ಪರ್ಧಿ ಯಾರು ಎಂಬುದು ಇನ್ನು ಖಾತ್ರಿಯಾಗಿಲ್ಲ. ಜೆಡಿಎಸ್‌ ಹಾಗೂ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.ದಶಕಗಳಿಂದಲೂ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ (ಹಿಂದಿನಜನತಾದಳ) ನಡುವೆ ತೀವ್ರ ಹಣಾಹಣಿ ನಡೆಯುತ್ತಲೇ ಬಂದಿದೆ. ಬಿಜೆಪಿಗೆ ಇಲ್ಲಿ ಇನ್ನೂ ನೆಲೆ ಕಂಡುಕೊಳ್ಳಲು ಆಗಿಲ್ಲ. ಕನಕಪುರ ತಾಲ್ಲೂಕು ಈಹಿಂದೆ ಕನಕಪುರ ಹಾಗೂ ಸಾತನೂರು ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡನೆ ಆಗಿತ್ತು. 2008ರ ಕ್ಷೇತ್ರ ಪುನರ್‌ವಿಂಗಡನೆ ಬಳಿಕ ಸಾತನೂರು ಕ್ಷೇತ್ರ ಕೈಬಿಟ್ಟು, ಕನಕಪುರ ವಿಧಾನಸಭಾ ಕ್ಷೇತ್ರ ಉಳಿದುಕೊಂಡಿತು. ಕನಕಪುರ ಕ್ಷೇತ್ರದಲ್ಲಿ ಪಿಜಿಆರ್ ಸಿಂಧ್ಯಾ ಪ್ರಬಲರಾಗಿದ್ದರೆ, ಸಾತನೂರಿನಲ್ಲಿ ಡಿಕೆಶಿ ಗೆಲ್ಲುತ್ತಲೇ ಬಂದಿದ್ದರು. ಈ ಎರಡೂ ಕ್ಷೇತ್ರಗಳ ಸಮ್ಮಿಲನದ ಬಳಿಕ ಕಾಂಗ್ರೆಸ್‌ ಕೈಗೆ ರಾಜಕೀಯ ಹಿಡಿತ ಸಿಕ್ಕಿದೆ. ಇಲ್ಲಿನ ತಾಲ್ಲೂಕು ಪಂಚಾಯಿತಿ, ನಗರಸಭೆ ಕಾಂಗ್ರೆಸ್‌ ಆಡಳಿತದಲ್ಲಿದೆ. ಜಿಲ್ಲಾ ಪಂಚಾಯಿತಿ ಎಂಟು ಕ್ಷೇತ್ರಗಳಲ್ಲಿಯೂ ಕೈ ಪಾಳಯದ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಕನಕಪುರ ತಾಲ್ಲೂಕಿನ ಇಬ್ಬರು ಪ್ರಭಾವಿ ರಾಜಕಾರಣಿಗಳಾದ ಡಿಕೆಶಿ ಹಾಗೂ ಸಿಂಧ್ಯಾ ನಡುವೆ ಇಲ್ಲಿ 2013ರ ಚುನಾವಣೆಯಲ್ಲಿ ನೇರ ಹಣಾಹಣಿ ಏರ್ಪಟ್ಟಿತ್ತು. ಶಿವಕುಮಾರ್ 31,424 ಮತಗಳ ಭಾರಿ ಅಂತರದಿಂದ ಗೆಲುವು ಪಡೆದಿದ್ದರು.

2008ರ ಚುನಾವಣೆಯಲ್ಲಿ ಡಿಕೆಶಿಗೆ ತೀವ್ರ ಪೈಪೋಟಿ ಒಡ್ಡಿದ್ದ ಡಿ.ಎಂ.ವಿಶ್ವನಾಥ್‌ ಹೆಸರು ಜೆಡಿಎಸ್‌ನಿಂದ ಮತ್ತೊಮ್ಮೆ ಕೇಳಿ ಬರುತ್ತಿದೆ. ಅಂದಿನ ಚುನಾವಣೆಯಲ್ಲಿ ವಿಶ್ವನಾಥ್‌ 7,179 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಮೊದಲ ಪಟ್ಟಿಯಲ್ಲಿಯೇ ಅವರ ಹೆಸರು ಇರುವ ನಿರೀಕ್ಷೆ ಇತ್ತು. ಆದರೆ, ಹಣಕಾಸಿನ ಕೊರತೆಯಿಂದಾಗಿ ಚುನಾವಣೆ ಎದುರಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಜೆಡಿಎಸ್‌ನ ಕಾರ್ಯಕರ್ತರ ಒಳಗೆ ಅಸಮಾಧಾನ ಇದ್ದು, ಬೇರೆಯವರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಡವೂ ಕೇಳಿ ಬಂದಿದೆ.

1985ರ ವಿಧಾನಸಭೆ ಚುನಾವಣೆಯಲ್ಲಿ ತನ್ನ 23ನೇ ವಯಸ್ಸಿನಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಎಚ್.ಡಿ. ದೇವೇಗೌಡರ ವಿರುದ್ಧ ಸ್ಪರ್ಧೆಗೆ ಇಳಿದು ಪರಾಭವಗೊಂಡಿದ್ದ ಶಿವಕುಮಾರ್‌, 1989ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದವರು. ತದನಂತರದಲ್ಲಿ ಶಾಸಕರಾಗಿ, ಸಚಿವರಾಗಿ ಹತ್ತಾರು ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಡಿ.ಕೆ.ಶಿ ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಭರಪೂರ ಅನುದಾನ ತಂದಿದ್ದಾರೆ. ನರೇಗಾ

ಅನುದಾನ ಬಳಕೆಯಲ್ಲಿ ಕನಕಪುರ ತಾಲ್ಲೂಕು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇಂಧನ ಸಚಿವರಾಗಿ ತಮ್ಮದೇ ಇಲಾಖೆ ಹೈವೋಲ್ಟೇಜ್‌ ಡಿಸ್ಟ್ರಿಬ್ಯುಷನ್ ಸಿಸ್ಟಂ (ಎಚ್‌ವಿಡಿಎಸ್‌), ಸೌರಶಕ್ತಿ ಆಧಾರಿತ ‘ಸೂರ್ಯ ರೈತ’, ಸೋಲಾರ್ ಪಾರ್ಕ್‌ ಸೇರಿದಂತೆ ಹಲವು ಪ್ರಥಮ ಪ್ರಯತ್ನಗಳು ಇಲ್ಲಿ ಅನುಷ್ಠಾನಗೊಂಡಿವೆ. ಕನಕಪುರ ಪಟ್ಟಣಕ್ಕೆ ಹೊಸ ಬಸ್‌ ನಿಲ್ದಾಣ , ತಾಲ್ಲೂಕು ಕಚೇರಿ ಸಹಿತ ಹತ್ತಾರು ಭವನಗಳು ನಿರ್ಮಾಣಗೊಂಡಿವೆ. ಚುನಾವಣೆ ಹೊಸ್ತಿಲಲ್ಲಿ ಕೆರೆ ತುಂಬಿಸುವ ಯೋಜನೆ, 229 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ದೊರೆತಿದೆ.

ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ಮುಂದುವರಿಯುತ್ತಲೇ ಇದ್ದು, ನಿಯಂತ್ರಿಸಲು ಸಾಧ್ಯವಾಗಿಲ್ಲ. ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳು ನಡೆದಿದ್ದರೂ ಅದರ ಗುಣಮಟ್ಟದ ಬಗ್ಗೆ ಅನುಮಾನವಿದೆ. ಸಚಿವರ ಆಪ್ತರಿಗೆ ಗುತ್ತಿಗೆ ಕಾಮಗಾರಿಗಳು ದೊರೆಯುತ್ತಿವೆ ಎಂಬ ಆರೋಪಗಳು ಇವೆ. ನರೇಗಾ ಕಾಮಗಾರಿಯಲ್ಲೂ ಸಾಕಷ್ಟು ಅಕ್ರಮಗಳು ಬಯಲಾಗಿವೆ. ಕಳೆದ ವರ್ಷ ಡಿಕೆಶಿ ಹಾಗೂ ಕುಟುಂಬದವರ ಮೇಲೆ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಗಳಿಕೆ ವಿಚಾರವೂ ಚುನಾವಣೆ ಸಂದರ್ಭ ಎದುರಾಳಿಗಳ ದಾಳವಾಗುವ ಸಾಧ್ಯತೆ ಇದೆ.

ಜಾತಿ ಸಮೀಕರಣ: ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದಲಿತರು, ಮುಸ್ಲಿಮರೂ ನಿರ್ಣಾಯಕರಾಗಿದ್ದಾರೆ. ಲಿಂಗಾಯತ, ಕುರುಬ, ತಿಗಳ ಹಾಗೂ ಬೆಸ್ತ ಸಮುದಾಯಗಳಿಗೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ.

ನಂದಿನಿ ಗೌಡ ಅವರಿಗೆ ಸಿಗುತ್ತಾ ಟಿಕೆಟ್‌?

ಬಿಜೆಪಿಯಿಂದ ನಂದಿನಿ ಗೌಡ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಅವರಿಗೆ ಪಕ್ಷವು ಮನ್ನಣೆ ನೀಡುತ್ತದೆಯೇ ಎನ್ನುವ ಕುತೂಹಲವಿದೆ.ಈ ಮೊದಲು ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಆಗಿದ್ದ ನಂದಿನಿ ಅಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಲೇ ಬಿಜೆಪಿ ಸೇರಿದ್ದರು. ಆಗಿನಿಂದ ಪಕ್ಷದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಕೆಲವು ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದೆ. ಈಚೆಗೆ ಚನ್ನಪಟ್ಟಣದಲ್ಲಿ ನಡೆದ ಅಮಿತ್‌ ಶಾ ಕಾರ್ಯಕ್ರಮದಲ್ಲಿ ನಂದಿನಿ ಮುಖ್ಯ ವೇದಿಕೆಯಲ್ಲಿಯೇ ಕಾಣಿಸಿಕೊಂಡಿರುವುದು ಕುತೂಹಲ ಕೆರಳಿಸಿದೆ.ಕನಕಪುರದಲ್ಲಿ ಜೆಡಿಎಸ್‌ ತನ್ನದೇ ಆದ ಕಾರ್ಯಕರ್ತರ ಪಡೆ ಹೊಂದಿದೆ. ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಿದ್ದೇ ಆದಲ್ಲಿ ಪೈಪೋಟಿ ನೀಡುವುದು ಖಚಿತವಾಗಿದೆ. ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಿ, ಒಗ್ಗಟ್ಟಿನಿಂದ ಪ್ರಚಾರ ಮಾಡಿದಲ್ಲಿ ಪಕ್ಷಕ್ಕೆ ಧನಾತ್ಮಕ ಫಲಿತಾಂಶ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

**

ಡಿ.ಕೆ.ಶಿ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಪೊಳ್ಳು ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದ್ದಾರೆ – ಅಚ್ಚಲು ಶಿವರಾಜು, ಸಾಮಾಜಿಕ ಹೋರಾಟಗಾರ.

**

ಡಿ.ಕೆ. ಶಿವಕುಮಾರ್‌ ಅವರು ರಾಜ್ಯದಲ್ಲಿ ಯಾವ ಶಾಸಕರು ಮಾಡದಷ್ಟು ಅಭಿವೃದ್ಧಿ ಕೆಲಸವನ್ನು ಕನಕಪುರ ಕ್ಷೇತ್ರದಲ್ಲಿ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ – ಚಂದ್ರಶೇಖರ್‌, ಯುವ ಮುಖಂಡ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry