ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮ ತಡೆಗೆ ಸಹಕರಿಸಿ 

ಬ್ಯಾಂಕ್‌ ವ್ಯವಸ್ಥಾಪಕರು, ರಾಜಕೀಯ ಮುಖಂಡರ ಸಭೆ
Last Updated 5 ಏಪ್ರಿಲ್ 2018, 12:12 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿ ಚುನಾವಣೆ ನಡೆಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ. ರಾಜಕೀಯ ಪಕ್ಷಗಳು ಮಾದರಿ ಚುನಾವಣಾ ನೀತಿಸಂಹಿತೆಯನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಚುನಾವಣಾ ಅಧಿಕಾರಿ ಬಿ. ರಾಮಾಂಜನಯ್ಯ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಕರೆದಿದ್ದ ಬ್ಯಾಂಕ್‌ ವ್ಯವಸ್ಥಾಪಕರು,ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 260 ಮತಗಟ್ಟೆ ಸ್ಥಾಪಿಸಲಾಗಿದೆ. ಮರೆನಡು ಪಾಳ್ಯ, ಹಂದನಕೆರೆ,ಬುಕ್ಕಾಪಟ್ಟಣ ಹೋಬಳಿ ಕಂಚಿಗಾನಕೆರೆ, ಚಿಕ್ಕನಾಯಕನಹಳ್ಳಿ ಮತಗಟ್ಟೆ ಸಂಖ್ಯೆ 213 ಹಾಗೂ 226ರಲ್ಲಿ 1300ಕ್ಕೂ ಮತಗಳಿವೆ. ಇವುಗಳನ್ನು ಮಾದರಿ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 13 ಕಷ್ಟಕರ ಮತಗಟ್ಟೆಗಳಿವೆ ಎಂದು ವಿವರ ನೀಡಿದರು.

₹ 50 ಸಾವಿರಕ್ಕಿಂತ ಹೆಚ್ಚು ಹಣ ವಿನಿಮಯ, ₹ 2 ಲಕ್ಷಕ್ಕಿಂತ ಅಧಿಕ ಹಣ ಪಡೆಯುವುದು ಹಾಗೂ ಕಟ್ಟುವುದು ಸೇರಿದಂತೆ ಎಟಿಎಂ ವ್ಯವಹಾರ, ಆರ್‌ಟಿಜಿಎಸ್‌ ಮತ್ತು ನೆಫ್ಟ್‌ ವ್ಯವಹಾರಗಳ ಮೇಲೂ ಕಣ್ಣು ಇಡಲಾಗುತ್ತಿದೆ. ಸಹಕಾರಿ ಬ್ಯಾಂಕ್‌ಗಳ ವ್ಯವಹಾರಗಳ ಬಗ್ಗೆ ನಿಗಾ ಇಡಲಾಗುವುದು. ₹ 2 ಲಕ್ಷಕ್ಕೂ ಮೇಲ್ಪಟ್ಟು ಹಣ ಪಡೆದರೆ ವಾಣಿಜ್ಯ ತೆರಿಗೆ ಮತ್ತು ₹ 10 ಲಕ್ಷಕ್ಕೂ ಮೀರಿದ ವ್ಯವಹಾರ ನಡೆದರೆ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಲಿದೆ ಎಂದರು.

ರಾಜಕೀಯ ಪಕ್ಷಗಳ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಸಭೆ ಸಮಾರಂಭ, ಫ್ಲೆಕ್ಸ್‌ ಅಳವಡಿಕೆಗೆ ಅನುಮತಿ ಕಡ್ಡಾಯ. ಸಮಾರಂಭಗಳಲ್ಲಿ ಊಟ, ಉಪಾಹಾರ ನೀಡುವಂತಿಲ್ಲ. ನೀರು, ಮಜ್ಜಿಗೆ ನೀಡಲು ಅಭ್ಯಂತರ ಇಲ್ಲ. ರಾತ್ರಿ 10ರಿಂದ ಬೆಳಗಿನ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ನಾಟಕ, ವಾರ್ಷಿಕೋತ್ಸವ ಸೇರಿದಂತೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಮೊದಲು ಚುನಾವಣಾ ಆಯೋಗದ ಅನುಮತಿ ಪಡೆಯುವುದು ಖಡ್ಡಾಯ ಎಂದು ತಿಳಿಸಿದರು.

ಜಾಗೃತಿ ಕಾರ್ಯಕ್ರಮ: ಏ. 5ರಿಂದ 10ರ ವರೆಗೆ ಚಿಕ್ಕನಾಯಕನಹಳ್ಳಿ ಹಾಗೂ 28 ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ವಿವಿ ಪ್ಯಾಟ್ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಾಲ್ಲೂಕು ಪಂಚಾಯ್ತಿ ಇಒ ಕೃಷ್ಣಾನಾಯಕ್ ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್ ತಿಮ್ಮಪ್ಪ, ಪ್ರೊಬೇಷನರಿ ತಹಶೀಲ್ದಾರ್ ಶಿವರಾಜ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಸದಸ್ಯೆ ಚೇತನಾ, ಬಿಜೆಪಿ ಮುಖಂಡ ಬರಗೂರು ಬಸವರಾಜು, ಕಾಂಗ್ರೆಸ್ ಮುಖಂಡ ಶ್ರೀಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT