ಅವಲೋಕನ, ಸಂವಹನ ಕೌಶಲ ಮುಖ್ಯ

7
ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ, ಕುಲಪತಿಗೆ ಸನ್ಮಾನ

ಅವಲೋಕನ, ಸಂವಹನ ಕೌಶಲ ಮುಖ್ಯ

Published:
Updated:

ತುಮಕೂರು: ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಅವಲೋಕನ, ಸಂವಹನ ಕೌಶಲ ಮತ್ತು ನೈತಿಕ ತಳಹದಿ ಮುಖ್ಯವಾಗಿದೆ ಎಂದು ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು.ತುಮಕೂರು ವಿ.ವಿಯ ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ, ಕುಲಪತಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸಮಾಜವು ಅನೇಕ ಸಾಮಾಜಿಕ ಪಿಡುಗುಗಳಿಂದ ಕೂಡಿದೆ. ಸಮಾಜ ಕಾರ್ಯಕರ್ತರ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ವೇಗವಾಗುತ್ತಿರುವ ಜೀವನ ಶೈಲಿ ಮತ್ತು ಜಾಗತೀಕರಣಗೊಳ್ಳುತ್ತಿರುವ ಸಾಮಾಜಿಕ ಸನ್ನಿವೇಶಗಳಲ್ಲಿ ಸಮಾಜ ಕಾರ್ಯಕರ್ತರ ಜವಾಬ್ದಾರಿಯೂ ಹೆಚ್ಚಿದೆ ಎಂದು ಹೇಳಿದರು.

ಕೌಶಲಯುತ ಯುವ ಸಮಾಜ ಕಾರ್ಯಕರ್ತರನ್ನು ತರಬೇತುಗೂಳಿಸುವ ನಿಟ್ಟಿನಲ್ಲಿ ಸಮಾಜಕಾರ್ಯ ವಿಭಾಗದ ಅಧ್ಯಾಪಕರ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.ಕುಲಪತಿ ಅವರನ್ನು ಸನ್ಮಾನಿಸಿ ಮಾತನಾಡಿದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಬಿ.ರಮೇಶ್, ‘ವೈ.ಎಸ್. ಸಿದ್ದೇಗೌಡ ಅವರು ಸಮಾಜ ಕಾರ್ಯ ವಿಭಾಗದಿಂದ ಮೊದಲ ಕುಲಪತಿಯಾಗಿ ನೇಮಕಗೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. ಪ್ರೊ. ವೈ.ಎಸ್.ಎಸ್‌ ಶಿಸ್ತು, ವೇಗ, ಗುಣಮಟ್ಟ ಮತ್ತು ಪಾರದರ್ಶಿಕ ಆಡಳಿತಕ್ಕೆ ಹೆಸರಾದವರು. ಅವರ ನಾಯಕತ್ವದಲ್ಲಿ ತುಮಕೂರು ವಿ.ವಿ ದೇಶದ ಉನ್ನತ ಶಿಕ್ಷಣದ ಭೂಪಟದಲ್ಲಿ ಮಹತ್ತರ ಸ್ಥಾನ ವನ್ನು ಪಡೆಯಲಿದೆ’ ಎಂದು ಹೇಳಿದರು.ವಿಶ್ವವಿದ್ಯಾನಿಲಯದ ಎಲ್ಲ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಕುಲಪತಿ ಅವರೊಡನೆ ಕೈಜೋಡಿಸಿ ಶ್ರಮಿಸುವ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ್ ಮಾತನಾಡಿ, ’ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗವು ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿಭಾಗವಾಗಿದೆ. ಈ ಶ್ರೇಷ್ಠತೆಯು ಹಿಂದೆ ಪ್ರೊ.ವೈ.ಎಸ್.ಸಿದ್ದೇಗೌಡ ಅವರ ಕಾಣಿಕೆಯಿದೆ. ಕಳೆದ 11 ವರ್ಷಗಳಿಂದ ನಮ್ಮ ವಿಭಾಗದ ಅನೇಕ ಸಾಧನೆಗಳ ಹಿಂದೆ ಅವರ ದೂರದೃಷ್ಟಿಯಿದೆ. ಅವರ ಅನೇಕ ಸಲಹೆ, ಸೂಚನೆಗಳನ್ನು ವಿಭಾಗ ಪಾಲಿಸಿಕೊಂಡು ಬಂದಿದೆ’ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಬಿ.ಎಸ್.ಗುಂಜಾಳ್  ಮಾತನಾಡಿ, ’ಸಮಾಜಕಾರ್ಯ ವಿಭಾಗ ಹಲವಾರು ವಿನೂತನ ಕಾರ್ಯಕ್ರಮದ ಮೂಲಕ ಉತ್ತಮ ಕೆಲಸಗಳನ್ನು ಮಾಡುತ್ತಿದೆ’ ಎಂದರು.

ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಯು.ಲೋಕೇಶ್ ವಂದಿಸಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮನೋಹರ್ ಮತ್ತು ಸಿ.ಸಿ. ಪಾವಟೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry