ಮಧ್ವರಾಜ್ ಕುಟುಂಬ ಸದಸ್ಯರೇ ಆರು ಬಾರಿ ಆಯ್ಕೆ

5
ಉಡುಪಿ ವಿಧಾನಸಭಾ ಕ್ಷೇತ್ರ: ತಾಯಿ–ಮಗ ಸಚಿವರಾಗಿ ಕೆಲಸ

ಮಧ್ವರಾಜ್ ಕುಟುಂಬ ಸದಸ್ಯರೇ ಆರು ಬಾರಿ ಆಯ್ಕೆ

Published:
Updated:

ಉಡುಪಿ: ಒಂದೇ ಕುಟುಂಬದ ಮೂವರು ಸದಸ್ಯರನ್ನು ತಮ್ಮ ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡ ಕ್ಷೇತ್ರ ಉಡುಪಿ. ದಿ. ಮಲ್ಪೆ ಮಧ್ವರಾಜ್, ಅವರ ಪತ್ನಿ ಮನೋರಮಾ ಮಧ್ವರಾಜ್ ಹಾಗೂ ಪುತ್ರ ಹಾಲಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಸಚಿವರಾಗಿ ಸಹ ಕೆಲಸ ಮಾಡಿದ್ದಾರೆ.ಹಿರಿಯ ರಾಜಕಾರಣಿ ದಿ. ಡಾ. ವಿ.ಎಸ್. ಆಚಾರ್ಯ ಅವರು ಸಹ ಉಡುಪಿ ಕ್ಷೇತ್ರದಿಂದ ಒಮ್ಮೆ ಆಯ್ಕೆಯಾಗಿದ್ದರು. ಅವರು ಸಹ ಸಚಿವರಾಗಿ ಕೆಲಸ ಮಾಡಿದ್ದಾರೆ. ಉಡುಪಿಯ ಕ್ಷಿಪ್ರಗತಿಯ ಪ್ರಗತಿಗೆ ಆಚಾರ್ಯ ಅವರು ಮಹತ್ವದ ಕೊಡುಗೆ ನೀಡದ್ದಾರೆ ಎಂದು ಉಡುಪಿಯ ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅವರಿಗೆ ಸಾಥ್ ನೀಡಿದವರು ಮಾಜಿ ಶಾಸಕ ಕೆ. ರಘುಪತಿ ಭಟ್. ಅವರು ಸಹ ಸತತ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ದಿ. ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು (ಕೆಸಿಪಿ) ಸಹ ಉಡುಪಿ ಕ್ಷೇತ್ರದ ಜನರು ಒಮ್ಮೆ ಗೆಲ್ಲಿಸಿರುವುದನ್ನು ಗಮನಿಸಬಹುದು. ಯು.ಆರ್. ಸಭಾಪತಿ ಅವರು ಕೆಸಿಪಿಯಿಂದ ನಿಂತು ಜನರ ಆಶೀರ್ವಾದ ಪಡೆದಿದ್ದರು.

ಒಬ್ಬನೇ ಅಭ್ಯರ್ಥಿ ಸತತ ಮೂರು ಬಾರಿ ಆಯ್ಕೆಯಾದ ಉದಾಹರಣೆ ಈ ಕ್ಷೇತ್ರದಲ್ಲಿ ಇಲ್ಲ. ಮನೋರಮಾ ಮಧ್ವರಾಜ್ ಅವರು 1972 ಹಾಗೂ 1978ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 1983ರಲ್ಲಿ ಬಿಜೆಪಿ ಅಭ್ಯರ್ಥಿ ವಿ.ಎಸ್. ಆಚಾರ್ಯ ಅವರ ವಿರುದ್ಧ ಪರಾಭವಗೊಂಡಿದ್ದರು. 1985 ಮತ್ತು 1989ರ ಚುನಾವಣೆಯಲ್ಲಿ ಅವರು ಮತ್ತೆ ಸತತ ಎರಡು ಬಾರಿ ಆಯ್ಕೆಯಾಗಿದ್ದರು. ಸಭಾಪತಿ ಅವರು ಸಹ 1994 ಮತ್ತು 1999ರಲ್ಲಿ ಎರಡು ಬಾರಿ ಆಯ್ಕೆಯಾದರೂ ಆ ನಂತರದ ಚುನಾವಣೆಯಲ್ಲಿ ಪರಾಭಗೊಂಡಿದ್ದರು. ರಘುಪತಿ ಭಟ್ ಅವರು 2004 ಮತ್ತು 2008ರ ಚುನಾವಣೆಯಲ್ಲಿ ಜಯಶಾಲಿಯಾಗಿದ್ದರು. ಆದರೆ ‘ಸಿ.ಡಿ’ ವಿವಾದದಿಂದಾಗಿ ಅವರು ಮೂರನೇ ಬಾರಿಗೆ ಸ್ಪರ್ಧಿಸಲು ಆಗಲಿಲ್ಲ. ಆದ್ದರಿಂದ ಹಾಟ್ರಿಕ್ ಸಾಧಿಸಿದವರು ಈ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ.

ಕಡೆಗೋಲು ಕೃಷ್ಣನ ಊರು ಎಂದೇ ಉಡುಪಿ ಪ್ರಸಿದ್ಧ, ದೇಶ, ವಿದೇಶಗಳ ಪ್ರವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಮಲ್ಪೆಯ ಕಡಲ ಕಿನಾರೆ, ಸೌಂದರ್ಯವನ್ನೇ ಹಾಸಿ ಹೊದ್ದಿರುವ ಸೇಂಟ್ ಮೇರಿಸ್ ದ್ವೀಪ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕೆಲಸ ಆರಂಭವಾಗಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಫಲಕೊಟ್ಟಿಲ್ಲ ಎಂಬ ಭಾವನೆ ಜನರಲ್ಲಿದೆ. ವಿಶ್ವದಲ್ಲೇ ಹೆಸರು ಗಳಿಸಿರುವ ಮಣಿಪಾಲ್ ವಿಶ್ವವಿದ್ಯಾಲಯ ಸಹ ಇಲ್ಲಿದೆ.

ಮೀನುಗಾರರ ಒಲವಿಗೆ ಮಹತ್ವ

ಮೀನುಗಾರಿಕೆ, ಕೃಷಿ, ತೋಟಗಾರಿಕೆ ಪ್ರಮುಖ ಕಸುಬಾಗಿದೆ. ಮೀನುಗಾರಿಕೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಾಲಿ ಶಾಸಕ ಪ್ರಮೋದ್ ಮಧ್ವರಾಜ್ ಅವರೇ ಮೀನುಗಾರಿಕೆ ಸಚಿವರಾದರೂ ಯಾವೊಂದು ಸಮಸ್ಯೆಗೂ ಖಚಿತ ಎನ್ನುವಂತಹ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಳೆದ ಬಾರಿ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋದರೂ, ಉಡುಪಿ ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿನ ಹಣಾಹಣಿಯ ಕ್ಷೇತ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry