ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಶಮನಕ್ಕೆ ಮುಖಂಡರಿಗೆ ಬುಲಾವ್‌

ಬಿರುಸುಗೊಂಡ ಬಣ ರಾಜಕಾರಣ; ಜಿಲ್ಲಾ ಬಿಜೆಪಿ ಘಟಕ ಹೈರಾಣ-: ನಡಹಳ್ಳಿ– ಯತ್ನಾಳ ಸೇರ್ಪಡೆ ಗೊಂದಲ
Last Updated 5 ಏಪ್ರಿಲ್ 2018, 12:37 IST
ಅಕ್ಷರ ಗಾತ್ರ

ವಿಜಯಪುರ: ತಾರಕಕ್ಕೇರಿರುವ ವಿಜಯಪುರ ಜಿಲ್ಲಾ ಬಿಜೆಪಿ ಬಣ ರಾಜಕಾರಣ, ಬಂಡಾಯದ ಬಿಸಿಯನ್ನು ತಣ್ಣಗಾಗಿಸುವ ಯತ್ನಕ್ಕೆ ಕೈ ಹಾಕಿರುವ ಕಮಲ ಪಾಳೆಯ, ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳ ಮುಖಂಡರನ್ನು ಗುರುವಾರ (ಏಪ್ರಿಲ್‌ 5) ಬೆಂಗಳೂರಿಗೆ ಬರುವಂತೆ ಬುಲಾವ್‌ ನೀಡಿದೆ.ರಾಜ್ಯ ಬಿಜೆಪಿ ವರಿಷ್ಠರು ಎಲ್ಲ ಜಿಲ್ಲೆಗಳ ವಿಧಾನಸಭಾ ಕ್ಷೇತ್ರವಾರು ಮಾಹಿತಿ ಸಂಗ್ರಹಿಸುತ್ತಿದ್ದು, ಈ ಪಾಳಿ ಪ್ರಕಾರವೇ ವಿಜಯಪುರ ಜಿಲ್ಲೆಯ ಸಭೆ ಗುರುವಾರ ನಿಗದಿಯಾಗಿತ್ತು. ಈ ಸಭೆಗೂ ಮುನ್ನಾ ದಿನವೇ ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸೇರ್ಪಡೆ ತೀವ್ರ ಅಸಮಾಧಾನ ಸೃಷ್ಟಿಸಿದೆ.ವಿಜಯಪುರ ಜಿಲ್ಲೆಯ ಪಕ್ಷದ ಪದಾಧಿಕಾರಿಗಳು, ಮಾಜಿ ಶಾಸಕರು, ಸಚಿವರು, ಟಿಕೆಟ್‌ ಆಕಾಂಕ್ಷಿತರು, ಮಹಾ ನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರ ಸಭೆ ಬೆಂಗಳೂರಿನ ಯಲಹಂಕದ ಬಳಿಯಿರುವ ರೆಸಾರ್ಟ್‌ ವೊಂದರಲ್ಲಿ ನಡೆಯಲಿದೆ ಎಂಬುದು ತಿಳಿದು ಬಂದಿದೆ.

‘ರಾಜ್ಯದಲ್ಲಿ ಈ ಬಾರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇ ಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಶಯದಂತೆ ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ಅಹೋರಾತ್ರಿ ಶ್ರಮಿಸುತ್ತಿದ್ದೆವು. ವಿಜಯಪುರ ಜಿಲ್ಲೆಯ ಪಕ್ಷದ ಪದಾಧಿಕಾರಿಗಳ ಸಭೆ ಗುರುವಾರ ನಡೆಯಲಿದೆ ಎಂಬುದು ಗೊತ್ತಿದ್ದರೂ; ಬಿಎಸ್‌ವೈ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮನ್ನು ಹೃದಯಹೀನರನ್ನಾಗಿಸಿ ಯಂತ್ರ ಮಾನ ವರನ್ನಾಗಿಸಿಕೊಂಡಿದ್ದಾರೆ’ ಎಂದು ಸಭೆಗೆ ತೆರಳುತ್ತಿರುವ ಮುಖಂಡರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ಧಾಂತ ಮುಕ್ತ ಬಿಜೆಪಿ; ಟೀಕೆ ‘ಕಾಂಗ್ರೆಸ್‌ ಮುಕ್ತ ಭಾರತಕ್ಕಾಗಿ, ಸಿದ್ಧಾಂತ ಮುಕ್ತ ಬಿಜೆಪಿಯನ್ನು ಮಾಡುವ ಯತ್ನ ರಾಜ್ಯದಲ್ಲಿ ನಡೆದಿದೆ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಸಾಮರ್ಥ್ಯ ಲೆಕ್ಕಕ್ಕಿಲ್ಲದಾಗಿದೆ. ನಮ್ಮನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂದು ಬಿಜೆಪಿಯ ಸಿದ್ಧಾಂತ, ತತ್ವಗಳನ್ನೇ ಗಾಳಿಗೆ ತೂರುತ್ತಿದ್ದಾರೆ.ಪಕ್ಷ ನಿಷ್ಠೆಯಿಂದ ಸಭೆಗೆ ತೆರಳುತ್ತಿರುವೆ. ಯಾವ ಅಭಿಪ್ರಾಯ ವ್ಯಕ್ತಪಡಿಸಲ್ಲ. ಹೇಳಿಕೊಳ್ಳಲು ಏನು ಉಳಿದಿಲ್ಲ. ದೇವರಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸೇರ್ಪಡೆ ಸಮಯವೂ ಇದೇ ರೀತಿ ವರ್ತಿಸಿದರು. ಈಗಲೂ ಪುನಾರಾವರ್ತನೆ ಮಾಡಿದ್ದಾರೆ. ಉಳಿದ ಆರು ಕ್ಷೇತ್ರಗಳಲ್ಲೂ ಇದೇ  ನೀತಿ ಅನುಸರಿಸಲಿ. ನಮಗೇನು ಬೇಸರವಿಲ್ಲ. ದಶಕದಿಂದ ಮನೆ ಬಿಟ್ಟು ಪಕ್ಷ, ಆರ್‌ಎಸ್‌ಎಸ್‌ ಎಂದು ಹೇಳಿಕೊಂಡು ಓಡಾಡಿದರ ಫಲವಿದು’ ಎಂದು ವಿಜಯಪುರ ನಗರ ಮಂಡಲದ ಪ್ರಮುಖ ಪದಾಧಿಕಾರಿಯೊಬ್ಬರು ಅಸಹಾಯಕರಾಗಿ ಹೇಳಿದರು.

‘ರಾಜ್ಯದ ಪ್ರಮುಖ ಬಿಜೆಪಿ ನಾಯಕರಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿಯೂ ಒಬ್ಬರಾಗಿದ್ದಾರೆ. ಪ್ರಭಾವಿ ದಲಿತ ಮುಖಂಡರು. ಜಿಲ್ಲೆಯ ಕಾರ್ಯಕರ್ತ ಪಡೆ ಏಳೆಂಟು ವರ್ಷದಿಂದ ಅವರ ಬೆನ್ನಿಗಿದೆ. ಮೂಲ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದ್ದರೂ; ಮೌನಕ್ಕೆ ಶರಣಾಗಿದ್ದಾರೆ.ಇನ್ನು ದಶಕದಿಂದ ಶಾಸಕರಾಗಿರುವ ರಮೇಶ ಭೂಸನೂರ ಅವರೇ ಬಿಜೆಪಿ ಯಿಂದ ಹೊರಹೋಗುವ ಆಲೋಚನೆಯಲ್ಲಿದ್ದಾರೆ.ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಅವರು ಸಂಘದ ಸೂಚನೆ ಪಾಲಿಸುವೆ ಎಂದಷ್ಟೇ ಹೇಳುತ್ತಾರೆ.

ಜಿಲ್ಲೆಯಲ್ಲಿ ಸದ್ಯ ಅಧಿಕಾರ ಇರುವುದು ಈ ಮೂವರಿಗೆ. ಸಂಕಷ್ಟದ ಸಂದರ್ಭದಲ್ಲೂ ಪಕ್ಷ ತೊರೆಯದೆ ನಿಷ್ಠೆಯಿಂದ ಸಂಘಟನೆಗಾಗಿ ಶ್ರಮಿಸಿದ್ದರ ಫಲ ನಾವಿಂದು ಬೀದಿಯಲ್ಲಿ ಇರಬೇಕಿದೆ. ಬಿಜೆಪಿ 150 ಮಿಷನ್‌ಗಾಗಿ ತನ್ನ ತತ್ವ, ಸಿದ್ಧಾಂತವನ್ನೇ ಬಲಿ ಕೊಟ್ಟಿದೆ’ ಎಂದು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮುಖಂಡರೊಬ್ಬರು ಕಣ್ಣೀರಿಟ್ಟರು.

**

ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಎಲ್ಲರೂ ಭಾಗಿಯಾಗಲಿದ್ದೇವೆ. ಅಸಮಾಧಾನ, ಅತೃಪ್ತಿ, ಬಂಡಾಯವನ್ನು ವರಿಷ್ಠರು ತಣಿಸಲಿದ್ದಾರೆ – ವಿಠ್ಠಲ ಕಟಕದೊಂಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ಅಧಿಕಾರದ ಆಸೆಗಾಗಿ ಬಿಜೆಪಿ ವರಿಷ್ಠರು ಸಿದ್ಧಾಂತಗಳನ್ನೇ ಗಾಳಿಗೆ ತೂರಿದ್ದಾರೆ. ಎಂದೂ ಒಗ್ಗೂಡಿಸುವ ಯತ್ನ ನಡೆಸದೆ, ನಮ್ಮಲ್ಲೇ ಒಡೆದಾಳುವ ನೀತಿ ಅನುಸರಿಸಿದ್ದಾರೆ – ಅಯ್ಯನಗೌಡ ಪಾಟೀಲ, ಮುಖಂಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT