ಭಾನುವಾರ, ಡಿಸೆಂಬರ್ 15, 2019
20 °C

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ರಂಗಜಾಗೃತಿ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ರಂಗಜಾಗೃತಿ

ಪ್ರಯೋಗಶೀಲತೆಗೆ ಹೆಸರಾಗಿರುವ ರಂಗಭೂಮಿಯಲ್ಲಿ ಸದಾ ಒಂದಿಲ್ಲೊಂದು ಹೊಸ ಪ್ರಯೋಗಗಳು ಗಮನಸೆಳೆಯುತ್ತಿರುತ್ತವೆ. ಸದ್ಯ ಇಂತಹದೇ ಒಂದು ಹೊಸಪ್ರಯೋಗದಲ್ಲಿ ‘ಯೂ ಅ್ಯಂಡ್‌ ಥಿಯೇಟರ್‌’ ರಂಗತಂಡ ನಿರತವಾಗಿದೆ. ಈ ತಂಡದ ಸ್ಥಾಪಕ ಮತ್ತು ನಿರ್ದೇಶಕ ಅಭಿಶಿತ್‌ ‘ಯೂತ್ ಮಾಬ್‌’ ಮೂಲಕ ರಂಗಜಾಗೃತಿ ಮೂಡಿಸುತ್ತಿದ್ದಾರೆ. ಬೀದಿನಾಟಕಗಳಿಗಿಂತ ಕೊಂಚ ಭಿನ್ನ ಎನಿಸುವ ಈ ವಿಧವನ್ನು ಬೀದಿನಾಟಕದ ಒಂದು ಬಗೆ ಎಂದು ಕರೆಯುವುದೇ ಸೂಕ್ತ.

ಇದೇ ವರ್ಷ ಜನವರಿ 11 ರಂದು ಆರಂಭಗೊಂಡ ಈ ತಂಡ ಈಗಾಗಲೇ 2 ನಾಟಕಗಳನ್ನು ನಿರ್ದೇಶಿಸಿದೆ. ಹೆಚ್ಚು ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳಿ ನಾಟಕಗಳನ್ನು ಪ್ರದರ್ಶಿಸುತ್ತಾರೆ.

(‘ಯೂ ಅ್ಯಂಡ್ ಥಿಯೇಟರ್’ ತಂಡ)

‘ಸೇವ್ ಟ್ರಿ’ ಎಂಬ ಮರಗಳ ಮಹತ್ವ ಸಾರುವ ಕೇವಲ 45 ಸೆಕೆಂಡ್ ಕಾಲಾವಧಿಯ ನಾಟಕ ಜಯನಗರ, ಸೌತ್ ಎಂಡ್‌ ಸರ್ಕಲ್‌ ಹಾಗೂ ಲಾಲ್‌ಬಾಗ್‌ ಸುತ್ತಮುತ್ತಲಿನ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಾಟಕ ಪ್ರದರ್ಶಿಸಿದ್ದಾರೆ. ಟ್ರಾಫಿಕ್ ಸಿಗ್ನೆಲ್ ಬಿದ್ದಾಗ ಅಲ್ಲಿನ ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಈ ನಾಟಕ ಪ್ರದರ್ಶಿಸಿದ್ದಾರೆ. ಒಂದೇ ಸಿಗ್ನಲ್‌ನಲ್ಲಿ 5 ರಿಂದ 10 ಬಾರಿ ಈ ನಾಟಕ ಪ್ರದರ್ಶನಗೊಂಡಿದೆ. ಹೀಗೆ 11 ಸಿಗ್ನಲ್‌ಗಳಲ್ಲಿ ತಂಡ ಪ್ರದರ್ಶನ ನೀಡಿದೆ.

‘ಬೀದಿ ನಾಟಕಗಳಿಗಿರುವ ಶ್ರೇಷ್ಟ ಸಾಧ್ಯತೆಯೇ ಪ್ರೇಕ್ಷಕರಿಗೆ ಆಪ್ತವಾಗುವುದು. ಅದರಲ್ಲೂ ಒಂದೇ ಸಿಗ್ನಲ್‌ನಲ್ಲಿಯೇ ವಿವಿಧ ಪ್ರೇಕ್ಷಕವರ್ಗಕ್ಕೆ ನಮ್ಮ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಬಹುದು. ಎಂದೂ ನಾಟಕಗಳನ್ನು ನೋಡದ ವೀಕ್ಷಕರನ್ನೂ ತಲುಪಬಹುದು ಒಂದೇ ಸಿಗ್ನಲ್‌ನಲ್ಲಿ ಹೆಚ್ಚು ಪ್ರದರ್ಶನ ನೀಡುವುದರಿಂದ ಹೆಚ್ಚಿನವರನ್ನು ತಲುಪಲು ಸಾಧ್ಯವಾಗುತ್ತದೆ’ ಎನ್ನುವುದು ಅಭಿಶಿತ್ ಅವರ ಅಭಿಪ್ರಾಯ.

ಈ ತಂಡದ ಇನ್ನೊಂದು ಪ್ರಯೋಗ ‘ಮಹಾಕಾಳಿ’. ಮಹಿಳೆಯರ ದೌರ್ಜನ್ಯದ ವಿರುದ್ಧ ದನಿ ಎತ್ತುವ ಈ ನಾಟಕ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ 7 ಬಾರಿ ಬೇರೆ ಬೇರೆ ವೀಕ್ಷಕವರ್ಗದೆದುರು ಪ್ರದರ್ಶನಗೊಂಡಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಅಥವಾ ಭಾನುವಾರ ಈ ರೀತಿಯ ಸಮಕಾಲೀನ ವಿದ್ಯಮಾನಗಳ ಕುರಿತು ಜಾಗೃತಿ ಮೂಡಿಸುವ ನಾಟಕಗಳನ್ನು ತಂಡ ಪ್ರದರ್ಶಿಸುತ್ತಿದೆ.

(‘ಮಹಾಕಾಳಿ’ ನಾಟಕದ ದೃಶ್ಯ)

ಸದ್ಯ ತಂಡದಲ್ಲಿ 18 ಕಲಾವಿದರಿದ್ದು ಎಲ್ಲರೂ 20 ರಿಂದ 27ರ ವಯಸ್ಸಿನವರು. ನಾಟಕಗಳ ರಚನೆ ಮತ್ತು ನಿರ್ದೇಶನದ ಹೊಣೆಯನ್ನು ಅಭಿಶಿತ್ ಅವರೇ ಹೊತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಳಾಂಗಣ ಸಭಾಂಗಣಗಳಲ್ಲಿಯೂ ಪ್ರದರ್ಶನ ನೀಡುವ ಗುರಿ ತಂಡಕ್ಕಿದೆ.

ಏಪ್ರಿಲ್ 29ಕ್ಕೆ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ‘ಸೇವ್‌ ವೈಲ್ಡ್‌ ಲೈಪ್‌’ ಎಂಬ ವನ್ಯ ಜೀವಿಗಳ ಜಾಗೃತಿ ಕುರಿತ ಕಾರ್ಯಕ್ರಮ ಆಯೋಜಿಸಿದೆ. ಅದರ ಭಾಗವಾಗಿ ಈ ರಂಗತಂಡ ರಂಗೋಲಿ ಮೆಟ್ರೊ ಕಲಾಕೇಂದ್ರದಲ್ಲಿ ವನ್ಯ ಜೀವಿಗಳ ಕುರಿತ ನಾಟಕ ನಡೆಯಲಿದೆ.

ಮೂಲತಃ ಮಂಗಳೂರಿನವರಾದ ಅಭಿಶಿತ್ ‘ಪ್ರವರ ಆರ್ಟ್‌ ಸ್ಟೂಡಿಯೊ’ ರಂಗತಂಡದಲ್ಲಿ ಸಕ್ರಿಯರಾಗಿದ್ದರು. ಈಗ ಹೊಸ ರಂಗತಂಡ ರಚಿಸಿ ಆಸಕ್ತರಿಗೆ ಅವಕಾಶ ನೀಡುವ ಉತ್ಸಾಹ ಹೊಂದಿದ್ದಾರೆ. ವಿವಿಧ ಶಾಲೆ ಮತ್ತು ಕಾಲೇಜುಗಳಿಗೆ ತೆರಳಿ ‘ಸಾಫ್ಟ್‌ ಸ್ಕಿಲ್‌’ ತರಬೇತಿ ನೀಡುವ ಇವರು ಅದರ ಮೂಲಕವೇ ರಂಗತಂಡದ ಆರ್ಥಿಕ ವೆಚ್ಚ ಭರಿಸುತ್ತಿದ್ದಾರೆ.

(ಅಭಿಶಿತ್‌)

‘ಪ್ರತಿಭಾ ಪ್ರದರ್ಶನಕ್ಕೆ ರಂಗಭೂಮಿ ಅತ್ಯತ್ತಮ ಮಾಧ್ಯಮ. ನಟನೆಯಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಒದಗಿಸಬೇಕು. ಜೊತೆಗೆ ರಂಗಭೂಮಿಯ ಸಾಧ್ಯತೆಯನ್ನು ವಿಸ್ತರಿಸಬೇಕು. ಸಮಕಾಲೀನ ಸಮಸ್ಯೆಗಳ ಅಭಿವ್ಯಕ್ತಿಯ ಸಮರ್ಥಮಾಧ್ಯಮವಾಗಿ ರಂಗಭೂಮಿ ರೂಪುಗೊಳ್ಳಬೇಕು’ ಎನ್ನುತ್ತಾರೆ ಅಭಿಶಿತ್.

ಪ್ರತಿಕ್ರಿಯಿಸಿ (+)