ಮಂಗಳವಾರ, ಡಿಸೆಂಬರ್ 10, 2019
24 °C

ಜಿಡಿಪಿ ವೃದ್ಧಿ ದರ ಶೇ 7.4: ನಿರೀಕ್ಷೆ

Published:
Updated:
ಜಿಡಿಪಿ ವೃದ್ಧಿ ದರ ಶೇ 7.4: ನಿರೀಕ್ಷೆ

ಮುಂಬೈ : ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಆರ್ಥಿಕ ವೃದ್ಧಿ ದರವು ಶೇ 7.4ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಬಂಡವಾಳ ಹೂಡಿಕೆಯಲ್ಲಿನ ಚೇತರಿಕೆ ಫಲವಾಗಿ 2017–18ರಲ್ಲಿನ ಶೇ 6.6 ಜಿಡಿಪಿಯು, ಈ ವರ್ಷ ಚೇತರಿಕೆ ಕಾಣಲಿದೆ. ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 7.3 ರಿಂದ ಶೇ 7.4 ಮತ್ತು ದ್ವಿತೀಯಾರ್ಧದಲ್ಲಿ ಶೇ 7.3 ರಿಂದ ಶೇ 7.6ರಷ್ಟು ಏರಿಕೆ ಕಂಡು ಬರಲಿದೆ. ಒಟ್ಟಾರೆಯಾಗಿ ವರ್ಷಾಂತ್ಯಕ್ಕೆ ಶೇ 7.4ರಷ್ಟಾಗಲಿದೆ ಎಂದು ನಿರೀಕ್ಷಿಸಿದೆ.

ಬಂಡವಾಳ ಹೂಡಿಕೆ ಚಟುವಟಿಕೆಗಳಲ್ಲಿ ಪುನಶ್ಚೇತನ ಕಂಡು ಬರುತ್ತಿದೆ. ಇದು ಭಾರಿ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಪ್ರತಿಫಲನಗೊಳ್ಳುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಸುಧಾರಣೆ ಕಾಣುತ್ತಿದೆ. ಇದರಿಂದ ರಫ್ತು ವಹಿವಾಟು ಹೆಚ್ಚಲಿದೆ. ಇದು ಕೂಡ ಹೊಸದಾಗಿ ಬಂಡವಾಳ ಹೂಡಿಕೆ ಉತ್ತೇಜಿಸಲಿದೆ ಎಂದು ಬ್ಯಾಂಕ್‌

ಅಭಿಪ್ರಾಯಪಟ್ಟಿದೆ.

ಬಿಟ್‌ಕಾಯಿನ್‌ ವಹಿವಾಟಿಗೆ ನಿರ್ಬಂಧ: ಬಿಟ್‌ಕಾಯಿನ್‌ನಂತಹ ಪರ್ಯಾಯ ಕರೆನ್ಸಿಗಳ ವಹಿವಾಟಿನಲ್ಲಿ ತೊಡಗಿರುವ ಹಣಕಾಸು ಸಂಸ್ಥೆಗಳಿಗೆ ಸೇವೆ ಒದಗಿಸಬಾರದು ಎಂದು ಆರ್‌ಬಿಐ ಬ್ಯಾಂಕ್‌ಗಳು ಮತ್ತು ನಿಯಂತ್ರಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಗ್ರಾಹಕರ ಹಿತಾಸಕ್ತಿ ರಕ್ಷಣೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಬೇಕು. ಇಂತಹ ಕರೆನ್ಸಿಗಳ ಬಳಕೆಗೆ ಸಂಬಂಧಿಸಿದಂತೆ ಇರುವ ಹಲವಾರು ಅಪಾಯಗಳ ಕುರಿತು ಬಳಕೆದಾರರು, ಸಂಗ್ರಹಕಾರರು ಮತ್ತು ವಹಿವಾಟುದಾರರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇಂತಹ ಕರೆನ್ಸಿಗಳ ವಹಿವಾಟು ನಡೆಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇವೆ ಒದಗಿಸದಂತೆ ತನ್ನ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳಿಗೆ ಆರ್‌ಬಿಐ ಸೂಚಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.ಈ ಬಗೆಯ ವಹಿವಾಟಿನಲ್ಲಿ ತೊಡಗಿರುವ ಸಂಸ್ಥೆಗಳು ನಿರ್ದಿಷ್ಟ ಕಾಲಮಿತಿ ಒಳಗೆ ತಮ್ಮ ಸೇವೆ ನಿಲ್ಲಿಸಬೇಕು ಎಂದೂ ಸೂಚಿಸಲಾಗಿದೆ. ಈ ಸಂಬಂಧ ಪ್ರತ್ಯೇಕ ಸುತ್ತೋಲೆ ಹೊರಡಿಸುವುದಾಗಿಯೂ ಆರ್‌ಬಿಐ ತಿಳಿಸಿದೆ.

**

ದತ್ತಾಂಶ ಸಂಗ್ರಹಕ್ಕೆ ತಾಕೀತು

ಎಲ್ಲ ಬಗೆಯ ಪಾವತಿ ವಹಿವಾಟು ನಡೆಸುವ ಸಂಸ್ಥೆಗಳು ದತ್ತಾಂಶವನ್ನು ಭಾರತದಲ್ಲಿಯೇ ಸಂಗ್ರಹಿಸಿ ಇಡಬೇಕು ಎಂದು ಆರ್‌ಬಿಐ ತಾಕೀತು ಮಾಡಿದೆ.

ಬಳಕೆದಾರರ ಮಾಹಿತಿಯ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ದೇಶನ ಪಾಲಿಸಲು ಆರು ತಿಂಗಳ ಸಮಯಾವಕಾಶ ನೀಡಲಾಗಿದೆ. ನಗದುರಹಿತ (ಡಿಜಿಟ‍ಲ್‌) ವಹಿವಾಟು ಆರೋಗ್ಯಕರ ಬೆಳವಣಿಗೆ ಸಾಧಿಸಲು ಇಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.

ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ಮತ್ತು ಮಾಹಿತಿ ಕದಿಯುವ ದಾಳಿ ನಡೆಯದಂತೆ ನೋಡಿಕೊಳ್ಳಲು ಜಾಗತಿಕ ಮಾನದಂಡಗಳನ್ನು ಪಾಲಿಸಬೇಕಾದ ಅಗತ್ಯ ಇದೆ ಎಂದು ಕೇಂದ್ರೀಯ ಬ್ಯಾಂಕ್‌ ಹೇಳಿದೆ.

ಈ ಸಂಬಂಧ ಒಂದು ವಾರದಲ್ಲಿ ವಿವರವಾದ ಮಾರ್ಗದರ್ಶಿ ಸೂತ್ರಗಳು ಪ್ರಕಟಗೊಳ್ಳಲಿವೆ.

**

ಚೇತರಿಸಿಕೊಂಡ ಸೇವಾ ವಲಯ

ಸೇವಾ ವಲಯದ ಚಟುವಟಿಕೆಯು ಮಾರ್ಚ್‌ನಲ್ಲಿ ಚೇತರಿಕೆ ಹಾದಿಗೆ ಮರಳಿದೆ.

‘ಸೇವಾ ವಲಯದ ಸೂಚ್ಯಂಕವು 47.8 ರಿಂದ 50.3ಕ್ಕೆ ಏರಿಕೆ ಕಂಡಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಆರ್ಥಿಕ ತಜ್ಞ ಆಶನ್‌ ದೋಧಿಯಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)