ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಬದಲಿಸದ ಆರ್‌ಬಿಐ

ಶೇ 4ರ ಮಟ್ಟಕ್ಕೆ ಹಣದುಬ್ಬರ ನಿಯಂತ್ರಿಸಲು ‘ಎಂಪಿಸಿ’ ಬದ್ಧ
Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂಬೈ : ಭಾರತೀಯ ರಿಸರ್ವ್‌ ಬ್ಯಾಂಕ್‌, ಸತತ ನಾಲ್ಕನೇ ಬಾರಿಯೂ ತನ್ನ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ವಿತ್ತೀಯ ಕೊರತೆ ಹೆಚ್ಚಳ ಮತ್ತು ಆಹಾರಧಾನ್ಯಗಳ ಗರಿಷ್ಠ ಬೆಲೆಯಿಂದಾಗಿ ಹಣದುಬ್ಬರ ಕುರಿತು ಅನಿಶ್ಚಿತ ಪರಿಸ್ಥಿತಿ ಇರಲಿರುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ನೇತೃತ್ವದಲ್ಲಿನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಎರಡು ದಿನಗಳ ಚರ್ಚೆಯ ನಂತರ ಈ ನಿರ್ಧಾರಕ್ಕೆ ಬಂದಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವನ್ನು ಶೇ 4ರ ಮಟ್ಟಕ್ಕೆ ನಿಯಂತ್ರಿಸುವ ಉದ್ದೇಶ ಸಾಧಿಸಲು ಬದ್ಧವಾಗಿರುವುದಾಗಿ ಸಮಿತಿಯು ತಿಳಿಸಿದೆ.

ಬಡ್ಡಿ ದರಗಳಲ್ಲಿನ ಯಥಾಸ್ಥಿತಿ ಕಾರಣಕ್ಕೆ, ಗೃಹ ಮತ್ತು ವಾಹನ ಖರೀದಿ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಇರಲಾರದು.

ವಾಣಿಜ್ಯ ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಸಾಲಕ್ಕೆ ಆರ್‌ಬಿಐ ವಿಧಿಸುವ ಶೇ 6ರ ಬಡ್ಡಿ (ರೆಪೊ ದರ)  ಮತ್ತು ಹೆಚ್ಚುವರಿ ನಗದು ಹರಿವಿಗೆ ಕಡಿವಾಣ ಹಾಕಲು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಶೇ 5.75ರಷ್ಟು ಬಡ್ಡಿ ದರಗಳಲ್ಲಿ (ರಿವರ್ಸ್‌ ರೆಪೊ) ಯಥಾಸ್ಥಿತಿ ಕಾಯ್ದುಕೊಂಡಿದೆ.

2017ರ ಡಿಸೆಂಬರ್‌ನಲ್ಲಿ ಶೇ 5.2ರಷ್ಟಕ್ಕೆ ಏರಿಕೆಯಾಗಿ ಆತಂಕ ಮೂಡಿಸಿದ್ದ ಹಣದುಬ್ಬರವು, ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಕ್ರಮವಾಗಿ ಶೇ 5.07 ಮತ್ತು ಶೇ 4.4ಕ್ಕೆ ಇಳಿಕೆಯಾಗಿದೆ.

ಹಣದುಬ್ಬರವನ್ನು ಶೇ 4ರ ಮಟ್ಟದಲ್ಲಿ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಆರ್‌ಬಿಐಗೆ ಸೂಚಿಸಿದೆ. ಈ ಹಿತಕರ ಮಟ್ಟಕ್ಕಿಂತ ಏರಿಕೆಯಾದರೆ ಬಡ್ಡಿ ದರ ಕಡಿತ ಮಾಡದಂತೆ ಆರ್‌ಬಿಐ ಮೇಲೆ ಒತ್ತಡ ಕಂಡು ಬರುತ್ತದೆ. 2017ರ ಆಗಸ್ಟ್‌ ತಿಂಗಳಿನಲ್ಲಿ ಆರ್‌ಬಿಐ ತನ್ನ ಬಡ್ಡಿ ದರಗಳನ್ನು ಶೇ 0.25ರಷ್ಟು ತಗ್ಗಿಸಿ ಶೇ 6ಕ್ಕೆ ಇಳಿಸಿತ್ತು. ಅಲ್ಲಿಂದಾಚೆಗೆ ಬಡ್ಡಿ ದರಗಳನ್ನು ಬದಲಾಯಿಸಲಾಗಿಲ್ಲ.

ಸ್ವಾಗತ: ಪ್ರಸಕ್ತ ಹಣಕಾಸು ವರ್ಷ ದಲ್ಲಿ ಆರ್ಥಿಕ ವೃದ್ಧಿ ದರವು ಶೇ 7.4ರಷ್ಟು ಮತ್ತು ಹಣದುಬ್ಬರವು ನಿಯಂತ್ರಣ ಮಟ್ಟದಲ್ಲಿ ಇರಲಿದೆ ಎಂದು  ಹಣಕಾಸು ನೀತಿ ಸಮಿತಿಯು ಅಂದಾಜಿಸಿರುವುದನ್ನು ಹಣಕಾಸು ಸಚಿವಾಲಯ ಸ್ವಾಗತಿಸಿದೆ. ಇದು ಆರ್ಥಿಕ ಸಮೀಕ್ಷೆಯ ನಿರೀಕ್ಷೆಯ ಮಟ್ಟದಲ್ಲಿಯೇ ಇದೆ ಎಂದು  ಪ್ರತಿಕ್ರಿಯಿಸಿದೆ. ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರೂ ಆರ್‌ಬಿಐ ನಿಲುವನ್ನು ಸ್ವಾಗತಿಸಿದ್ದಾರೆ.
**
ಚಿಲ್ಲರೆ ಹಣದುಬ್ಬರ ಗುರಿ
2018–19ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿಲ್ಲರೆ ಹಣದುಬ್ಬರ ಗುರಿಯನ್ನು ಶೇ 4.7 ರಿಂದ ಶೇ 5.1ರಷ್ಟಕ್ಕೆ  ಮತ್ತು ದ್ವಿತೀಯಾರ್ಧದಲ್ಲಿನ ಗುರಿಯನ್ನು ಶೇ 4.4ಕ್ಕೆ ನಿಗದಿಪಡಿಸಲಾಗಿದೆ.

ಈ ಬಾರಿ ಮುಂಗಾರು ಮಳೆ ವಾಡಿಕೆಯಂತೆ ಇರಲಿದೆ ಎನ್ನುವ ನಿರೀಕ್ಷೆ ಮತ್ತು ಸರಕುಗಳ ಪರಿಣಾಮಕಾರಿ ಪೂರೈಕೆಯಿಂದಾಗಿ ಒಟ್ಟಾರೆ ಆಹಾರ ಹಣದುಬ್ಬರವು ನಿಯಂತ್ರಣದಲ್ಲಿ ಇರಲಿದೆ ಎಂದೂ ಆರ್‌ಬಿಐ ಹೇಳಿದೆ.
**
ಆರ್‌ಬಿಐನ ಈ ನಿರ್ಧಾರ ನಿರೀಕ್ಷಿತ ರೀತಿಯಲ್ಲಿದ್ದು, ಆಕ್ರಮಣಕಾರಿ ಧೋರಣೆ ಕಂಡುಬಂದಿಲ್ಲ. ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಲಿದೆ.
– ಮೆಲ್ವಿನ್‌ ರೆಗೊ, ಸಿಂಡಿಕೇಟ್‌ ಬ್ಯಾಂಕ್‌ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT