ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಗೆ ಲಾಭವಾಗದಂತೆ ಮತ ಚಲಾಯಿಸಿ’

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶಿರಸಿ: ‘ಸಂವಿಧಾನ ಬದಲಾವಣೆಯ ವಿಚಾರವು ಸಂಘ ಪರಿವಾರದ ದಶಕದ ಹಿಂದಿನ ಅಜೆಂಡಾ. ಸಂಘ ಪರಿವಾರ ಹಾಗೂ ಮೋಹನ್ ಭಾಗವತ್ ಅವರ ಮನಸ್ಸಿನಲ್ಲಿರುವ ವಿಚಾರವು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಾಯಲ್ಲಿ ಹೊರಬಂದಿದೆ’ ಎಂದು ಗುಜರಾತಿನ ವಡಗಾಂ ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನಕ್ಕೆ ಗುರುವಾರ ಇಲ್ಲಿ ಚಾಲನೆ ನೀಡಿದ ಅವರು, ‘ಸಂಘ ‍ಪರಿವಾರವನ್ನೊಳಗೊಂಡಿರುವ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಪ್ರಜಾಪ್ರಭುತ್ವದ ಅವನತಿ ನಿಶ್ಚಿತ. ಹೀಗಾಗಿ, ಬಿಜೆಪಿಗೆ ಲಾಭವಾಗದ ರೀತಿಯಲ್ಲಿ ಮತ ಚಲಾಯಿಸಬೇಕು’ ಎಂದರು.

‘ದಲಿತರು, ಬಡವರು, ರೈತರು ಸೇರಿದಂತೆ ಎಲ್ಲರಿಗೂ ಬಿಜೆಪಿ ಮೋಸ ಮಾಡಿದೆ. ಮಹಾತ್ಮ ಗಾಂಧಿ ಹತ್ಯೆ ಮಾಡಿದ ಚಿಂತನೆಯೇ, ಇಂದು ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿದೆ. ಆದರೆ, ಗೌರಿ ಹತ್ಯೆ ಸಂಭ್ರಮಿಸಿದವರನ್ನು ನಮ್ಮ ಪ್ರಧಾನಿ, ಟ್ವಿಟರ್‌ನಲ್ಲಿ ಫಾಲೊ ಮಾಡುತ್ತಾರೆ’ ಎಂದು ಟೀಕಿಸಿದರು.

‘ಜಾತ್ಯತೀತರಿಗೆ ಕರ್ನಾಟಕದ ಚುನಾವಣೆ ಮಹತ್ವದ್ದಾಗಿದೆ. ಗೋವು, ಲವ್ ಜಿಹಾದ್, ಘರ್‌ ವಾಪಸಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ನಾಲ್ಕು ವರ್ಷ ಕಳೆದ ಕೇಂದ್ರದ ಆಡಳಿತವನ್ನು ಜನ ನೋಡಿದ್ದಾರೆ. ಇಂತಹ ಪಕ್ಷವನ್ನು ಸೋಲಿಸಬೇಕು. ದೇಶದ ಸಂವಿಧಾನ ರಕ್ಷಣೆಗೆ ಪ್ರತಿ ಕ್ಷಣವನ್ನು ಮೀಸಲಿಡಬೇಕು. ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರ ಯಾಕೆ ಸ್ಪಂದಿಸಿಲ್ಲ, ನಮ್ಮ ಬ್ಯಾಂಕ್ ಖಾತೆಗೆ ಯಾಕೆ ₹ 15 ಲಕ್ಷ ಜಮಾ ಮಾಡಿಲ್ಲ ಎಂದು ಬೀದಿ, ಬೀದಿಗಳಲ್ಲಿ ಹೋಗಿ ಬಿಜೆಪಿಯವರನ್ನು ಪ್ರಶ್ನಿಸಬೇಕು’ ಎಂದು ಅವರು ಕರೆ ನೀಡಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನದ ಮುಖಂಡ ಕೆ.ಎಲ್.ಅಶೋಕ, ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ, ಬಿ.ಟಿ.ಲಲಿತಾ ನಾಯಕ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ನೂರ್ ಶ್ರೀಧರ್ ಇದ್ದರು.

‘ಭಾವಚಿತ್ರ ಮುಟ್ಟದಂತೆ ನೋಡಿಕೊಳ್ಳಿ’
‘ಏ.14ರಂದು ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಬಿಜೆಪಿ ನಾಯಕರು ಅಂಬೇಡ್ಕರ್ ಅವರ ಭಾವಚಿತ್ರ, ಪುತ್ಥಳಿಯನ್ನು ಮುಟ್ಟದಂತೆ ನೋಡಿಕೊಳ್ಳಿ’ ಎಂದು ಜಿಗ್ನೇಶ್ ಮೇವಾನಿ ಕರೆ ನೀಡಿದರು.

‘ಬಿಜೆಪಿಗೆ, ದಲಿತರ ಬಗ್ಗೆ ಕಾಳಜಿ ಇಲ್ಲ. ದಲಿತರ ಮೇಲಿನ ದೌರ್ಜನ್ಯ ಕಾನೂನನ್ನು ನ್ಯಾಯಾಲಯ ಸರಳೀಕರಣ ಮಾಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜನ ಜಾಗೃತಿ, ಆಂದೋಲನ ನಡೆಸುವ ಮೂಲಕ ಮಾತ್ರ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಸಾಧ್ಯ’ ಎಂದರು.

ಸಂಘ ಪರಿವಾರದ ಯುವಜನರಿಗೆ ಉದ್ಯೋಗ ನೀಡಿ
ಸಾಗರ:
‘ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಉದ್ದೇಶ ನಿಜವಾಗಿಯೂ ಬಿಜೆಪಿಗೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಸಂಸದ ಅನಂತಕುಮಾರ ಹೆಗಡೆ ಅವರು ಮೊದಲು ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಕೆಲಸ ಮಾಡುತ್ತಿರುವ ಯುವಜನರಿಗೆ ಉದ್ಯೋಗ ನೀಡಲಿ’ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸವಾಲು ಹಾಕಿದ್ದಾರೆ.

ಇಲ್ಲಿನ ಸ್ವಾತಿ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ವರಾಜ್ ಇಂಡಿಯಾ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಅಭಿಯಾನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೂ ರಾಷ್ಟ್ರ ನಿರ್ಮಿಸುವ ಬಗ್ಗೆ ಬಿಜೆಪಿ ಮುಖಂಡರಿಗೆ ನಿಜಕ್ಕೂ ಕಳಕಳಿ ಇದ್ದರೆ ಸಂಘ ಪರಿವಾರದಲ್ಲಿನ ಯುವಕರಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಕೈಗೊಳ್ಳಲು ₹ 2 ಕೋಟಿ ಸಾಲ ಸೌಲಭ್ಯ ನೀಡಲಿ. ಇಲ್ಲದೆ ಇದ್ದರೆ ಕೇವಲ ರಾಜಕೀಯ ಲಾಭಕ್ಕಾಗಿ ಇಂಥ ಹೇಳಿಕೆ ನೀಡುತ್ತಾರೆ ಎಂಬುದು ಸಾಬೀತಾದಂತಾಗುತ್ತದೆ’ ಎಂದರು.

ಜನಪರ ಚಳವಳಿ, ವಿಚಾರಧಾರೆಯನ್ನು ಹತ್ತಿಕ್ಕುವುದೇ ಫ್ಯಾಸಿಸ್ಟ್‌ ಮನೋಭಾವದ ಬಿಜೆಪಿಯ ಪ್ರಮುಖ ಸಿದ್ಧಾಂತವಾಗಿದೆ ಎನ್ನುವುದು ಕಳೆದ ನಾಲ್ಕು ವರ್ಷಗಳ ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ರುಜುವಾತಾಗಿದೆ. ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಜನಪರ ವಿಚಾರಧಾರೆಗಳನ್ನು ಗೌರವಿಸುವವರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT