ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿ: ಕಾಮಧೇನು ಹೆಸರಲ್ಲಿ ಕಾಮನಬಿಲ್ಲು

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂದಿನ ಐದು ವರ್ಷಗಳಲ್ಲಿ 50 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು- ಇದು 2013ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ ಪಕ್ಷದ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಆಶ್ವಾಸನೆಗಳಲ್ಲೊಂದು. ಐದು ವರ್ಷ ಪೂರ್ಣಗೊಂಡು ಮತ್ತೊಂದು ಚುನಾವಣೆ ಬಂದಿರುವ ಸಂದರ್ಭದಲ್ಲಿ ಕಾಂಗ್ರೆಸ್‍ನ ಉದ್ಯೋಗ ಸೃಷ್ಟಿಯ ಭರವಸೆಯನ್ನು ಪರಿಶೀಲಿಸಿದರೆ, ಸರ್ಕಾರ ತನ್ನ ಗುರಿ ಸಾಧನೆಯಲ್ಲಿ ಸುಮಾರು ಶೇ 30ರಷ್ಟು ಗುರಿಯನ್ನಷ್ಟೇ ಕ್ರಮಿಸಿದೆ.

ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರ ಕಚೇರಿ ನೀಡಿದ ಅಂಕಿಅಂಶಗಳ ಪ್ರಕಾರ, 2019ರೊಳಗೆ 15 ಲಕ್ಷ ಉದ್ಯೋಗ ಸೃಷ್ಟಿ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 13.91 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇದರಲ್ಲಿ 12.03 ಲಕ್ಷ ಉದ್ಯೋಗಗಳು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಿಸಿದ್ದರೆ, 1.88 ಲಕ್ಷ ಉದ್ಯೋಗಗಳು ಬೃಹತ್ ಕೈಗಾರಿಕಾ ವಲಯಕ್ಕೆ
ಸಂಬಂಧಿಸಿದ್ದಾಗಿವೆ.

‘ವಿದೇಶಿ ನೇರ ಹೂಡಿಕೆ ನಿಟ್ಟಿನಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 2016ರ ಏಪ್ರಿಲ್‌ನಿಂದ 2017ರ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ರಾಜ್ಯ ₹ 44,720 ಕೋಟಿ ವಿದೇಶಿ ನೇರ ಬಂಡವಾಳವನ್ನು (ಎಫ್‍ಡಿಐ) ಆಕರ್ಷಿಸಿದೆ. 2013-14ರ ಸಾಲಿನಿಂದ 2017ರ ನವೆಂಬರ್‌ವರೆಗೆ ಒಟ್ಟು ₹ 3,38,983 ಕೋಟಿ ಬಂಡವಾಳ ಹೂಡಿಕೆಯ, 9.45 ಲಕ್ಷ ಉದ್ಯೋಗ ಸೃಷ್ಟಿ ಸಾಮರ್ಥ್ಯದ ಯೋಜನೆಗಳಿಗೆ ಉನ್ನತ ಮಟ್ಟದ ನಿರಾಕ್ಷೇಪಣಾ ಸಮಿತಿ ಹಾಗೂ ಏಕಗವಾಕ್ಷಿ ನಿರಾಕ್ಷೇಪಣಾ ಸಮಿತಿ ಅನುಮೋದನೆ ನೀಡಿವೆ’ ಎನ್ನುವುದು ಸರ್ಕಾರಿ ಅಂಕಿಅಂಶಗಳ ಮುಖ್ಯಾಂಶ.

ಬಿಗ್ ಡೇಟಾ, ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ನ್ಯಾನೊ ಟೆಕ್ನಾಲಜಿ, ಏರೋಸ್ಪೇಸ್ ಹಾಗೂ ರಕ್ಷಣಾ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಭಾರತದ ಶೇ 60ರಷ್ಟು ಜೈವಿಕ ತಂತ್ರಜ್ಞಾನದ ಕಂಪನಿಗಳಿಗೆ ನೆಲೆಯಾಗಿದೆ.

ಸರ್ಕಾರ ನೀಡುವ ಮಾಹಿತಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಸೃಷ್ಟಿಯಾಗಿರುವ 13.91 ಲಕ್ಷ ಉದ್ಯೋಗಗಳು, ಚುನಾವಣೆಗೆ ಮುನ್ನ ಪಕ್ಷ ಗೊತ್ತುಪಡಿಸಿಕೊಂಡ ಗುರಿ ಸಾಧನೆಗೆ ತಕ್ಕಂತಿಲ್ಲದಿದ್ದರೂ, ಪ್ರಸಕ್ತ ಉದ್ಯೋಗ ಸೃಷ್ಟಿಯ ಸಾಧನೆಯನ್ನು ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳು
ತ್ತಿದೆ. ‘ಎಲ್ಲರಿಗೂ ಅವಕಾಶ ಎನ್ನುವುದು ನಮ್ಮ ಸರ್ಕಾರದ ನೀತಿ. ದೇಶದಲ್ಲಿನ ನಿರುದ್ಯೋಗದ ಪ್ರಮಾಣ ಒಟ್ಟಾರೆ ಸರಾಸರಿ ಶೇ 3.7ರಷ್ಟಿ ದ್ದರೆ, ರಾಜ್ಯದಲ್ಲಿನ ನಿರುದ್ಯೋಗದ ಪ್ರಮಾಣ ಶೇ 2 ರಷ್ಟಿದೆ. ಮುಂದಿನ ಎರಡು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ 1 ಎನ್ನಿಸಿಕೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿದ್ದಾರೆ.

ವಿಶ್ವದ ಆಕರ್ಷಣೆಯ ಕೇಂದ್ರ: ಕರ್ನಾಟಕಕ್ಕೆ ಭಾರೀ ಪ್ರಮಾಣದಲ್ಲಿ ಬಂಡವಾಳ ಹರಿದುಬರಲಿಕ್ಕೆ ಕಾರಣಗಳಾದರೂ ಏನು ಎನ್ನುವ ಪ್ರಶ್ನೆಗೆ, ‘ಇಲ್ಲಿರುವ ಅನುಕೂಲಗಳು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‍ ಹೇಳುತ್ತಾರೆ. ‘ನಮ್ಮ ಸರ್ಕಾರ ಇರುವ ಕಾರಣಕ್ಕೆ ಎಂದಲ್ಲ, ವಿಶ್ವದ ಬೇರೆ ಭಾಗಗಳ ಜನ ಬೆಂಗಳೂರಿಗೆ ಬರಲು ಇಷ್ಟಪಡುತ್ತಾರೆ.

ಇಲ್ಲಿ ಎಲ್ಲ ಬಗೆಯ ಅನುಕೂಲಗಳು ಹಾಗೂ ಕೌಶಲ ಹೊಂದಿರುವ ಯುವಶಕ್ತಿ ಲಭ್ಯವಿರುವುದೇ ವಿಶ್ವದ ಆಕರ್ಷಣೆಗೆ ಕಾರಣ' ಎನ್ನುತ್ತಾರೆ. ‘ಜಿಎಸ್‍ಟಿ ಹಾಗೂ ಅಧಿಕ ಮುಖಬೆಲೆಯ ನೋಟುಗಳನ್ನು ಹಿಂಪಡೆದ ನಂತರವೂ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಹಿಂದೆ ಬಿದ್ದಿಲ್ಲ’ ಎನ್ನುವುದನ್ನವರು ಒತ್ತಿ ಹೇಳುತ್ತಾರೆ.

ಸರ್ಕಾರ ನೀಡುತ್ತಿರುವ ಅಂಕಿಅಂಶಗಳೇನೋ ಆಕರ್ಷಕವಾಗಿವೆ. ಆದರೆ ಅವು ಎಷ್ಟರಮಟ್ಟಿಗೆ ವಿಶ್ವಾಸಾರ್ಹ? ಈ ಪ್ರಶ್ನೆ ಮುಂದಿಟ್ಟರೆ, ‘ಸರ್ಕಾರದ ಅಂಕಿಅಂಶಗಳನ್ನು ಶಂಕಿಸುವುದರ ಬದಲು, 50 ಲಕ್ಷದ ಗುರಿ ಸಾಧನೆಯಲ್ಲಿ ವಿಫಲವಾಗಿರುವುದನ್ನು ಪ್ರಶ್ನಿಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಾ. ಎಚ್‍.ವಿ. ವಾಸು.

‘ಎಲ್ಲ ಪಕ್ಷಗಳೂ ಉದ್ಯೋಗ ಸೃಷ್ಟಿಯ ಬಗ್ಗೆ ಉತ್ಸಾಹದಿಂದ ಮಾತನಾಡುತ್ತವೆ. ಆದರೆ, ಯಾವ ಪಕ್ಷಗಳಿಗೂ ಉದ್ಯೋಗ ಸೃಷ್ಟಿಯ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆಯೇ ಇಲ್ಲ’ ಎನ್ನುವುದು ವಾಸು ಅನಿಸಿಕೆ. ಅವರ ಪ್ರಕಾರ, ನಿಶ್ಚಿತ ಆದಾಯವನ್ನು ಒಳಗೊಂಡು ಘನತೆಯಿಂದ ಬದುಕು ಸಾಧಿಸಲು ಅವಕಾಶ ಕಲ್ಪಿಸುವ ಉದ್ಯೋಗವನ್ನಷ್ಟೇ ನಾವು ಪರಿಗಣಿಸಬಹುದು.

‘ಆದಾಯದ ಖಾತರಿಯಿಲ್ಲದ ಹಾಗೂ ಅಭದ್ರತೆಯಿರುವ ಕೆಲಸಗಳನ್ನು ಉದ್ಯೋಗಗಳೆಂದು ಪರಿಗಣಿಸುವುದು ಸರಿಯಲ್ಲ. ಕೃಷಿ ಸೇರಿದಂತೆ ರಾಜ್ಯದಲ್ಲಿ ಈಗಾಗಲೇ ಇರುವ 1 ಕೋಟಿಯಷ್ಟು ಉದ್ಯೋಗಗಳನ್ನು ಸ್ಥಿರೀಕರಿಸುವ ಹಾಗೂ ಅವುಗಳ ಆದಾಯ ಹೆಚ್ಚಿಸುವ ಕೆಲಸ ಮೊದಲು ನಡೆಯಬೇಕು. ಗುತ್ತಿಗೆ ಮತ್ತು ಇತರೆ ತಾತ್ಕಾಲಿಕ ಕೆಲಸಗಳಲ್ಲಿರುವ ನೌಕರರಿಗೆ 60 ವರ್ಷಗಳ ಸೇವಾ ಭದ್ರತೆಯನ್ನು ಖಾತರಿಪಡಿಸಲು ಕಾಯ್ದೆಯನ್ನು ರೂಪಿಸುವ ಅಗತ್ಯವಿದೆ’ ಎನ್ನುವ ಅವರು, ಈಗಾಗಲೇ ಇರುವ ಉದ್ಯೋಗಗಳ ಜೊತೆಗೆ ಹೊಸತಾಗಿ 50 ಲಕ್ಷ ಅವಕಾಶಗಳು ರೂಪುಗೊಂಡರೆ ಪರಿಸ್ಥಿತಿ ಸುಧಾರಿಸಲಿದೆ ಎನ್ನುತ್ತಾರೆ.

‘ಉದ್ಯೋಗ ಸೃಷ್ಟಿಯಲ್ಲಿ ನಮ್ಮಲ್ಲಿ ಸರಿಯಾದ ಮಾದರಿಗಳೇ ಇಲ್ಲ. ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿರುವ ಕೇರಳದಲ್ಲಿನ ಕುಟುಂಬಶ್ರೀ ಇದ್ದುದರಲ್ಲಿ ಒಂದು ಗಮನಾರ್ಹ ಯೋಜನೆಯಾಗಿದೆ. ಇಂಥ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಬೇಕು’ ಎನ್ನುತ್ತಾರೆ.

‘ಉದ್ಯೋಗಕ್ಕಾಗಿ ಯುವಜನರು’ ಆಂದೋಲನದ ವತಿಯಿಂದ ವಾಸು ಮತ್ತವರ ಗೆಳೆಯರು ‘ಯುವಜನರ ಪ್ರಣಾಳಿಕೆ: ಕರ್ನಾಟಕ 2018' ಸಿದ್ಧಪಡಿಸಿದ್ದಾರೆ. ಕರ್ನಾಟಕ ನಿರುದ್ಯೋಗ ಮುಕ್ತವಾಗುವ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿರುವ ಈ ಕಿರುಪುಸ್ತಕದ ಮೂಲಕ ಮತದಾರರನ್ನು ಜಾಗೃತಗೊಳಿಸುವ ಪ್ರಯತ್ನ ನಡೆದಿದೆ.

ಕೆಲಸ ಇದೆ, ಮನಸ್ಸಿಲ್ಲ: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್‌ ಆಳ್ವ, ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆಯಿದೆ ಎನ್ನುವುದನ್ನು ಒಪ್ಪುವುದಿಲ್ಲ. ‘ನಮ್ಮಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ, ಅವುಗಳನ್ನು ಯುವಜನ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೌಶಲ ಇರುವವರಿಗೆ ಎಲ್ಲ ಕ್ಷೇತ್ರಗಳಲ್ಲೂ ಅವಕಾಶಗಳಿವೆ’ ಎಂದು ವಿವರಿಸುತ್ತಾರೆ.

‘ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ’ದ ಅಧ್ಯಕ್ಷ ಆರ್‌. ಶಿವಕುಮಾರ್‌ ಕೂಡ ವಿವೇಕ್‍ ಅವರ ಅಭಿಪ್ರಾಯಕ್ಕೆ ಪೂರಕವಾಗಿ ಮಾತನಾಡುತ್ತಾರೆ. ‘ಕೆಲಸಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು, ಹೂಡಿಕೆದಾರರನ್ನು ದೂರಿ ಪ್ರಯೋಜನವಿಲ್ಲ. ಆತಿಥ್ಯ ಸೇವೋದ್ಯಮಕ್ಕೆ (ಹಾಸ್ಪಿಟಾಲಿಟಿ ಇಂಡಸ್ಟ್ರಿ) 1.25 ಲಕ್ಷ ಜನ ಬೇಕು. ಆದರೆ, ನಮ್ಮಲ್ಲಿ ಲಭ್ಯವಿಲ್ಲ’ ಎನ್ನುತ್ತಾರೆ.

ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಅಂಕಿಅಂಶಗಳ ಕುರಿತು ಅವರು ಬೇರೆಯದೇ ಹೊಳಹು ನೀಡುತ್ತಾರೆ. ಪ್ರಸ್ತುತ ಸರ್ಕಾರ ಹೇಳುತ್ತಿರುವ 13.91 ಲಕ್ಷ ಉದ್ಯೋಗಗಳಲ್ಲಿ, ಮುಂದಿನ ದಿನಗಳಲ್ಲಿ ಸೃಷ್ಟಿಯಾಗಲಿರುವ ಅವಕಾಶಗಳೂ ಸೇರಿವೆ ಎನ್ನುವುದು ಅವರ ಮಾತಿನ ತಾತ್ಪರ್ಯ.

ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಹಾಗೂ ವಿವಿಧ ಹಂತದಲ್ಲಿರುವ ಯೋಜನೆಗಳ ಕುರಿತಂತೆ ಅವರು ನೀಡುವ ಮಾಹಿತಿ ಹೀಗಿದೆ: ‘2013-14ರಿಂದ 2017-18ರವರೆಗಿನ ಅವಧಿಯಲ್ಲಿ ರೂಪುಗೊಂಡ 1,869 ಯೋಜನೆಗಳಲ್ಲಿ ಈವರೆಗೆ ಅನುಷ್ಠಾನಕ್ಕೆ ಬಂದಿರುವುದು 163 ಯೋಜನೆಗಳಷ್ಟೇ. ಉಳಿದ 1,486 ಯೋಜನೆಗಳು ಅನುಷ್ಠಾನಗೊಳ್ಳುವ ವಿವಿಧ ಹಂತಗಳಲ್ಲಿವೆ. 2019-20ರ ವೇಳೆಗೆ ಈ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬಂದರೆ, 15 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’. ಶಿವಕುಮಾರ್‌ ಅವರ ಈ ಮಾಹಿತಿಯನ್ನು ಗಮನಿಸಿದರೆ, ಸರ್ಕಾರ ಕನ್ನಡಿಯ ಗಂಟನ್ನು ತೋರಿಸುತ್ತಿದೆ ಎಂದಾಯಿತು.

ನೋಟುಗಳನ್ನು ಹಿಂಪಡೆದದ್ದು ಕೂಡ ಬಂಡವಾಳ ಹೂಡಿಕೆ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಿತು, ಆ ಸಂಕಷ್ಟದಿಂದ ಪೂರ್ಣ ಚೇತರಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವ ಅವರು, ‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣವಿದೆ. ಆದರೆ, ಅನುಷ್ಠಾನದ ಹಂತದಲ್ಲಿ ಕೆಲವು ತೊಡಕುಗಳೂ ಇವೆ. ಹೂಡಿಕೆದಾರರು ಕೇಳಿದ ಭೂಮಿಯನ್ನು ನಿಗದಿತ ಸಮಯದಲ್ಲಿ ಕೊಡುವುದಿಲ್ಲ. ಏಕಗವಾಕ್ಷಿ ಯೋಜನೆಯಲ್ಲಿ ದೊರೆಯಬೇಕಾದ ಅನುಮತಿಗಳು ಕೂಡ ಸುಲಭವಾಗಿ ಆಗುತ್ತಿಲ್ಲ’ ಎಂದು ಪರಿಸ್ಥಿತಿಯ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತಾರೆ.

ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿದ್ದರೂ, ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಗಮನಾರ್ಹ ಪ್ರಗತಿ ಸಾಧಿಸಿರುವುದಂತೂ ನಿಜ. ಈ ಬೆಳವಣಿಗೆಯಲ್ಲಿ ಸರ್ಕಾರಗಳ ಪಾತ್ರಗಳಿಗಿಂತಲೂ ರಾಜ್ಯಕ್ಕಿರುವ ಕೆಲವು ಸಹಜ ಅನುಕೂಲಗಳ ಪಾತ್ರ ದೊಡ್ಡದಿದೆ. ರಾಜಕೀಯ ಪಕ್ಷಗಳ ಉದ್ಯೋಗ ನೀತಿಯನ್ನು ಒರೆಗೆ ಹಚ್ಚಲು ವಿಧಾನಸಭೆ ಚುನಾವಣೆ ಮತದಾರರಿಗೆ ದೊರೆತಿರುವ ಒಂದು ಅಪೂರ್ವ ಅವಕಾಶ.

***

ಮಹಿಷಿ ವರದಿ ಜಾರಿ

ಉದ್ಯೋಗ ಸೃಷ್ಟಿ ಕುರಿತು ದೇಶಪಾಂಡೆ ಸುಳ್ಳು ಹೇಳುತ್ತಿದ್ದಾರೆ. ಜನರಿಗೆ ಎಲ್ಲಿಯವರೆಗೆ ಟೋಪಿ ಹಾಕಲು ಸಾಧ್ಯ? ಅನುದಾನಿತ ಶಾಲಾ-ಕಾಲೇಜುಗಳು ಹಾಗೂ ಖಾಸಗಿ ಕಾರ್ಖಾನೆಗಳಲ್ಲಿ ₹2-3 ಸಾವಿರಕ್ಕೆ ದುಡಿಯುವವರಿದ್ದಾರೆ. ಇವರಿಗೆ ಸರ್ಕಾರದಿಂದ ಯಾವ ಅನುಕೂಲವೂ ಆಗಿಲ್ಲ. ಬೆಂಗಳೂರಿನಲ್ಲಿ ಒಂದಷ್ಟು ಉದ್ಯೋಗಾವಕಾಶಗಳು ಇವೆಯಾದರೂ, ಅವು ದೊರೆಯುತ್ತಿರುವುದು ಬೇರೆ ರಾಜ್ಯದವರಿಗೆ ಮಾತ್ರ. ಕನ್ನಡಿಗರಿಗೆ ನೌಕರಿಗಳು ದೊರೆಯುತ್ತಿಲ್ಲ.

ಉದ್ಯೋಗವನ್ನು ಕೊಡುವುದು ಯಾವುದೇ ಸರ್ಕಾರಕ್ಕೂ ಹಗುರವಾದ ಕೆಲಸ ಅಲ್ಲ. ಆದರೆ, ಜಾತ್ಯತೀತ ಜನತಾದಳ ಯುವಜನರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ನಿರ್ದಿಷ್ಟ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುತ್ತೇವೆ.

ಬಸವರಾಜ ಹೊರಟ್ಟಿ, ಜೆಡಿಎಸ್‍ ಮುಖಂಡ

***

ಕೇಂದ್ರ ಸರ್ಕಾರದ ನೀರಸ ನಡೆ: ರಾಜ್ಯದ ಉದ್ಯೋಗ ಸೃಷ್ಟಿ ಅಂಕಿಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿ ಸಾಧನೆಯನ್ನೂ ಗಮನಿಸಬೇಕು. ಪ್ರತಿವರ್ಷ 1 ಕೋಟಿ ಉದ್ಯೋಗಗಳನ್ನು ಸೃ಼ಷ್ಟಿಸಲಾಗುವುದು ಎಂದು ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದರು.

ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 8.23 ಲಕ್ಷ ಉದ್ಯೋಗಗಳಷ್ಟೇ ಸೃಷ್ಟಿಯಾಗಿವೆ ಎಂದು ಅಂತರ ರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ. ₹ 500 ಹಾಗೂ ₹ 1000 ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದು ಕೂಡ ಉದ್ಯೋಗ ಸೃಷ್ಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇಶದಲ್ಲಿನ ಉದ್ಯೋಗಾವಕಾಶದ ಬೇಡಿಕೆಯನ್ನು ಪೂರೈಸಲು, ಮುಂದಿನ 15 ವರ್ಷಗಳಲ್ಲಿ ಪ್ರತಿ ತಿಂಗಳು 13 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬೇಕಾದ ಅಗತ್ಯವಿದೆ. ಆದರೆ, 2012ರಿಂದ ವಾರ್ಷಿಕ ಉದ್ಯೋಗ ಸೃಷ್ಟಿಯ ಪ್ರಮಾಣ 5 ಲಕ್ಷ ದಾಟುತ್ತಿಲ್ಲ.

***

ಸಣ್ಣ ಕೈಗಾರಿಕೆಗಳಿಗೆ ಒತ್ತು

ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರ ಬಾಯಿಮಾತಿನಲ್ಲಿ ಹೇಳುತ್ತಿಲ್ಲ, ಅಂಕಿಅಂಶಗಳನ್ನು ಜನರ ಮುಂದಿಟ್ಟಿದ್ದೇವೆ. ರಾಜ್ಯದ ವಿವಿಧ ಭಾಗಗಳಲ್ಲಿ ರೂಪು ಗೊಂಡಿರುವ ಉದ್ಯೋಗಾವಕಾಶಗಳನ್ನೂ ಲೆಕ್ಕಕ್ಕೆ ಹಿಡಿದರೆ, ಕಳೆದ ಪ್ರಣಾಳಿಕೆಯಲ್ಲಿ ನಾವು ನೀಡಿದ 50 ಲಕ್ಷ ಉದ್ಯೋಗಗಳ ಗುರಿಗೆ ತುಂಬಾ ದೂರದಲ್ಲೇನೂ ಇಲ್ಲ.

ಕಾಂಗ್ರೆಸ್‍ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚು ಗಮನ ನೀಡಲಾಗುವುದು. ಈ ಮೂಲಕ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲಾಗುವುದು. ಯುವಜನರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲಾಗುವುದು.

ಸಂತೋಷ್ ಲಾಡ್, ಕಾರ್ಮಿಕ ಸಚಿವ

***

ಯೋಜನೆಗಳಿವೆ... ಗುಟ್ಟು ಬಿಡೆವು!

ಉದ್ಯೋಗ ಸೃಷ್ಟಿಯ ಕುರಿತಂತೆ ಸರ್ಕಾರ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದೆ. ಕೈಗಾರಿಕಾ ಭೂಮಿ ಕೊಡದೆ, ಗುಣಮಟ್ಟದ ವಿದ್ಯುತ್ ಪೂರೈಸದೆ ಅಭಿವೃದ್ಧಿ ಮಾಡಿದ್ದೇವೆ ಎಂದರೆ ಅದು ಹೇಗೆ ಸಾಧ್ಯ? ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಪರವಾನಗಿಗಳನ್ನು ಪಡೆಯಲು ವರ್ಷಗಳ ಕಾಲ ಸತಾಯಿಸಲಾಗುತ್ತದೆ.

ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಬಿಜೆಪಿ ಬದ್ಧವಾಗಿದೆ. ಉದ್ಯೋಗ ಸೃಷ್ಟಿಗೆ ಅಗತ್ಯವಾದ ಪರಿಸರವನ್ನು ಸೃಷ್ಟಿಸುತ್ತೇವೆ. ಈ ಬಗ್ಗೆ ನಾವು ಅನೇಕ ಕಾರ್ಯಕ್ರಮಗಳ ಕುರಿತು ಚಿಂತಿಸಿದ್ದೇವೆ. ಸದ್ಯಕ್ಕೆ ಅವುಗಳನ್ನು ಬಹಿರಂಗಪಡಿಸುವಂತಿಲ್ಲ.

ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT