ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪರಿಧಿ ಒಳಗೆ ಕಾರ್ಯನಿರ್ವಹಿಸಲು ಹಫೀಜ್ ಸಯೀದ್‌ ಸಂಘಟನೆಗಳಿಗೆ ಹೈಕೋರ್ಟ್ ಸೂಚನೆ

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಲಾಹೋರ್: ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್‌ನ ‌ಫಲಾಹ್–ಎ–ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್) ಹಾಗೂ ಜಮಾತ್–ಉದ್–ದವಾ (ಜೆಯುಡಿ) ಸಂಘಟನೆಗಳು ಕಾನೂನಿನ ಪರಿಮಿತಿಯಲ್ಲಿ ಕಾರ್ಯನಿರ್ವಹಿಸಲು ಇಲ್ಲಿನ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.

ಆದರೆ, ಈ ಎರಡೂ ಸಂಘಟನೆಗಳು ನಡೆಸುತ್ತಿರುವ ಸಾಮಾಜ ಕಲ್ಯಾಣ ಚಟುವಟಿಕೆಗಳ ಮೇಲೆ ಸರ್ಕಾರ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಸಂಬಂಧ ನ್ಯಾಯಾಲಯ ಏನನ್ನೂ ಹೇಳಲಿಲ್ಲ.

ನಿರ್ಬಂಧ ಪ್ರಶ್ನಿಸಿ ಸಯೀದ್ ಸಲ್ಲಿಸಿದ ಅರ್ಜಿಯ ವಿಚಾರಣೆ ಇದೇ 23ಕ್ಕೆ ನಡೆಯಲಿದೆ. ಅಂದು ಪ್ರತಿಕ್ರಿಯೆ ಸಲ್ಲಿಸುವಂತೆ ಆಂತರಿಕ ವ್ಯವಹಾರಗಳ ಸಚಿವಾಲಯಕ್ಕೆ ನ್ಯಾಯಾಲಯ ನೋಟಿಸ್ ನೀಡಿದೆ.

‘ಇದು ಸೂಕ್ಷ್ಮ ಪ್ರಕರಣವಾಗಿರುವ ಕಾರಣ ಹೈಕೋರ್ಟ್‌ನ ಪೂರ್ಣಪೀಠವು ವಿಚಾರಣೆ ನಡೆಸಬೇಕು’ ಎಂದು ಸಯೀದ್ ಪರ ವಕೀಲ ಎ.ಕೆ. ಡೋಗರ್ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನ್ಯಾಯಮೂರ್ತಿ ಅಮೀನುದ್ದೀನ್ ಖಾನ್ ಅವರು, ‘ಮುಂದಿನ ವಿಚಾರಣೆ ವೇಳೆ ಪೂರ್ಣಪೀಠ ಸೇರಲಿದೆ’ ಎಂದರು.

‘ಭಾರತ ಮತ್ತು ಅಮೆರಿಕದ ಒತ್ತಡಕ್ಕೆ ಸರ್ಕಾರ ಮಣಿದಿದೆ. ಸ್ವತಂತ್ರ ರಾಷ್ಟ್ರವಾದ ಪಾಕಿಸ್ತಾನವು ತನ್ನದೇ ಆದ ಕಾನೂನನ್ನು ಹೊಂದಿದೆ. ಈ ನೆಲದ ಕಾನೂನು ಹಾಗೂ 1948ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಾಯ್ದೆಯ ನಡುವೆ ಸಂಘರ್ಷವಿದ್ದರೆ ದೇಶದ ಕಾನೂನು ಮೇಲುಗೈ ಸಾಧಿಸಬೇಕು’ ಎಂದು ಡೋಗರ್ ವಾದಿಸಿದ್ದಾರೆ.

ಜೆಯುಡಿ, ಲಷ್ಕರ್ ಎ ತಯಬಾ (ಎಲ್ಇಟಿ) ಉಗ್ರ ಸಂಘಟನೆಯ ಅಂಗಸಂಸ್ಥೆ ಎಂಬ ನಂಬಿಕೆ ಇದೆ. ಎಲ್ಇಟಿಯನ್ನು ಅಂತರರಾಷ್ಟ್ರೀಯ ಉಗ್ರ ಸಂಘಟನೆ ಎಂದು 2014ರಲ್ಲಿ ಅಮೆರಿಕ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT