ಕಾಂಗ್ರೆಸ್‌ ಅಸಹಿಷ್ಣುತೆ ಪ್ರದರ್ಶನ: ಅನಂತಕುಮಾರ್‌

7
‘ರಾಹುಲ್‌ ಗಾಂಧಿ, ಸೋನಿಯಾರಿಂದ ನಕಾರಾತ್ಮಕ ರಾಜಕಾರಣ’

ಕಾಂಗ್ರೆಸ್‌ ಅಸಹಿಷ್ಣುತೆ ಪ್ರದರ್ಶನ: ಅನಂತಕುಮಾರ್‌

Published:
Updated:

ನವದೆಹಲಿ: ಸತತ ಒಂದು ತಿಂಗಳ ಕಾಲ ಸಂಸತ್‌ನ ಉಭಯ ಸದನಗಳ ಕಲಾಪಕ್ಕೆ ಅವಕಾಶ ನೀಡದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ನಕಾರಾತ್ಮಕ ರಾಜಕಾರಣಕ್ಕೆ ಮುಂದಾಗುವ ಮೂಲಕ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಆರೋಪಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಗೆ ದೊರೆತ ಜನಾದೇಶ ಸಹಿಸದ ಕಾಂಗ್ರೆಸ್‌, ಉಭಯ ಸದನಗಳ ಬಜೆಟ್‌ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸಂಸತ್‌ ಕಲಾಪ ನಡೆಯದ್ದರಿಂದ ಬಿಜೆಪಿ ಸೇರಿದಂತೆ ಎನ್‌ಡಿಎ ಮೈತ್ರಿಯ ಎಲ್ಲ ಸಂಸದರೂ ಅಧಿವೇಶನದ ಭತ್ಯೆ ಹಾಗೂ ಒಂದು ತಿಂಗಳ ಸಂಬಳವನ್ನು ಪಡೆಯದಿರಲು ನಿರ್ಧರಿಸಿದ್ದಾರೆ. ಈ ನಡೆಗೆ ದೇಶದಾದ್ಯಂತ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.

ಎನ್‌ಡಿಎ ಸಂಸದರ ಈ ನಡೆಯು ದೂರಗಾಮಿ ಪರಿಣಾಮ ಬೀರಿದ್ದು, ಕಾಂಗ್ರೆಸ್‌ ಮೇಲೆ ನೈತಿಕ ಒತ್ತಡ ಹೇರಿದೆ. ಈಗ ಕಾಂಗ್ರೆಸ್‌ ಮುಖಂಡರು ಸಂಬಳ ಮತ್ತು ಭತ್ಯೆಯ ವಿಷಯದಲ್ಲಿ ಯಾವ ನಿಲುವು ತಾಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಅವರು ಹೇಳಿದರು.

‘ಒಂದು ತಿಂಗಳ ಸಂಬಳ ಮತ್ತು 23 ದಿನಗಳ ಭತ್ಯೆ ತೆಗೆದುಕೊಳ್ಳದಿರುವ ನಿರ್ಧಾರದಿಂದ ಸಂಸದರ ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸ ಆಗಲಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಸಂಸದರೂ ಕೋಟ್ಯಧೀಶರಲ್ಲ. ಗ್ರಾಮೀಣ ಭಾಗದಿಂದ ಬಂದ ಅನೇಕ ಸದಸ್ಯರು ಸಂಸತ್‌ನಲ್ಲಿದ್ದಾರೆ. ಉಭಯ ಸದನಗಳ ಸದಸ್ಯರಲ್ಲಿ ಗರಿಷ್ಠ 50 ಮಂದಿ ಕೋಟ್ಯಧೀಶರಿರಬಹುದು. ಹಾಗಂತ ಮಿಕ್ಕ ಎಲ್ಲ ಸಂಸದರನ್ನೂ ಆಗರ್ಭ ಶ್ರೀಮಂತರು ಎಂದು ಭಾವಿಸಬೇಕಿಲ್ಲ ಎಂದರು.

ಪ್ರತಿ ದಿನದ ಕಲಾಪಕ್ಕೆ ₹2,000 ಭತ್ಯೆ, ಮಾಸಿಕ ₹50,000 ಸಂಬಳ ದೊರೆಯುತ್ತಿದೆ. ಲೋಕಸಭೆಯಲ್ಲಿ ಬಿಜೆಪಿಯ 275 ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟವು 314 ಜನ ಸದಸ್ಯರನ್ನು ಒಳಗೊಂಡಿದೆ. ರಾಜ್ಯಸಭೆಯಲ್ಲಿ ಬಿಜೆಪಿಯ 68 ಸದಸ್ಯರನ್ನು ಒಳಗೊಂಡಂತೆ ಎನ್‌ಡಿಎ 87 ಜನ ಸದಸ್ಯರನ್ನು ಹೊಂದಿದೆ ಎಂದು ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry