ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಪ್ರಸಾರಕ್ಕೆ ₹ 6,100 ಕೋಟಿ ಬಿಡ್‌

ಸ್ಟಾರ್‌ ಕಂಪನಿಗೆ ಭಾರತ ತಂಡದ ತವರಿನ ಪಂದ್ಯ, ದೇಶಿ ಕ್ರಿಕೆಟ್‌, ಐಪಿಎಲ್‌ ಪ್ರಸಾರ ಹಕ್ಕು
Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂಬೈ : ಸ್ಟಾರ್‌ ಇಂಡಿಯಾ ಸಂಸ್ಥೆಯು ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳು ಮತ್ತು ದೇಶಿ ಕ್ರಿಕೆಟ್‌ನ ಪ್ರಸಾರ ಹಕ್ಕನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಜಾಗತಿಕ ಪ್ರಸಾರ ಹಕ್ಕಿಗಾಗಿ ಮೂರು ದಿನ ನಡೆದ ಇ–ಹರಾಜಿನ ಕೊನೆಯಲ್ಲಿ ಗುರುವಾರ ಈ ಸಂಸ್ಥೆ ಸೋನಿ ಮತ್ತು ಜಿಯೊ ಕಂಪನಿಗಳನ್ನು ಹಿಂದಿಕ್ಕಿ ಹಕ್ಕು ತನ್ನದಾಗಿಸಿಕೊಂಡಿತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೇ ಮೊದಲ ಬಾರಿ ಪ್ರಸಾರ ಹಕ್ಕಿಗಾಗಿ ಇ ಹರಾಜು ನಡೆಸಿತ್ತು.

ಹರಾಜಿನ ಒಟ್ಟು ಬಿಡ್‌ ಮೊತ್ತ ₹ 6138.1 ಕೋಟಿ ಆಗಿದ್ದು ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಡೆಯುವ ಪಂದ್ಯಗಳು ಸ್ಟಾರ್  ಚಾನೆಲ್‌ಗಳು ಮತ್ತು ಹಾಟ್‌ ಸ್ಟಾರ್ ಆ್ಯಪ್ ಪ್ರಸಾರ ಮಾಡಲಿದೆ.

ಕಳೆದ ಬಾರಿ ₹ 16,347 ಕೋಟಿ ಬಿಡ್‌ ಸಲ್ಲಿಸಿ ಸ್ಟಾರ್‌ ಕಂಪನಿ ಐಪಿಎಲ್ ಪ್ರಸಾರ ಹಕ್ಕು ಪಡೆದುಕೊಂಡಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಯೋಜಿಸುವ ಪುರುಷ ಮತ್ತು ಮಹಿಳೆಯರ 50 ಓವರ್‌ಗಳ ಎಲ್ಲ ಪಂದ್ಯಗಳ ಪ್ರಸಾರ ಹಕ್ಕನ್ನು ಕೂಡ ಸ್ಟಾರ್ ಗಳಿಸಿಕೊಂಡಿದೆ.

‘ಮೊದಲ ದಿನ ₹ 4442 ಕೋಟಿ ಮೊತ್ತಕ್ಕೆ ಬಿಡ್ ಮುಕ್ತಾಯಗೊಂಡಿತ್ತು. ಎರಡನೇ ದಿನವಾದ ಬುಧವಾರ ಈ ಮೊತ್ತ ₹ 6000 ಕೋಟಿ ದಾಟಿತ್ತು. ಐದು ವರ್ಷಗಳಲ್ಲಿ ಒಟ್ಟು 102 ಪಂದ್ಯಗಳ ಪ್ರಸಾರದ ಹಕ್ಕನ್ನು ಸ್ಟಾರ್ ಪಡೆದುಕೊಂಡಿದೆ. ಕೊನೆಯಲ್ಲಿ ಸಲ್ಲಿಕೆಯಾದ ಬಿಡ್ ಮೊತ್ತದ ಲೆಕ್ಕಾಚಾರಕ್ಕೆ ಇಳಿದರೆ ಪ್ರತಿ ಪಂದ್ಯಕ್ಕಾಗಿ ₹ 60.18 ಕೋಟಿ ವ್ಯಯಿಸಿದಂತಾಗುತ್ತದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದರು.

‘ಇದು ಸ್ವಲ್ಪ ದುಬಾರಿ ಮೊತ್ತ ಎಂಬುದು ವಾಸ್ತವ. ಆದರೂ ವ್ಯಯಿಸಿದ ಹಣಕ್ಕೆ ಸೂಕ್ತ ಲಾಭ ಸಿಗುವ ಭರವಸೆ ಇದೆ. ಲಾಭಕ್ಕಿಂತ ಮಿಗಿಲಾಗಿ ಬಿಸಿಸಿಐ ಜೊತೆಗೂಡಿ ಕ್ರಿಕೆಟ್‌ ಪ್ರೇಮಿಗಳಿಗೆ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ನೀಡಲು ಸಾಧ್ಯವಾದದ್ದು ಸಂತಸದ ವಿಷಯ’ ಎಂದು ಸ್ಟಾರ್ ಇಂಡಿಯಾದ ಅಧ್ಯಕ್ಷ ಉದಯ್‌ ಶಂಕರ್ ತಿಳಿಸಿದರು.

‘ಮೊದಲ ವರ್ಷ ಪ್ರತಿ ಪಂದ್ಯದಿಂದ ಬಿಸಿಸಿಐಗೆ ₹ 46 ಕೋಟಿ ಮೊತ್ತ ಲಭಿಸಲಿದ್ದು ಎರಡನೇ ವರ್ಷ ಈ ಮೊತ್ತ ₹ 47 ಕೋಟಿ ಆಗಲಿದೆ. ಮೂರನೇ ವರ್ಷ ₹ 46.50 ಕೋಟಿ, ನಾಲ್ಕನೇ ವರ್ಷ ₹ 77.40 ಕೋಟಿ ಮತ್ತು ಐದನೇ ವರ್ವ 78.90 ಕೋಟಿ ಲಭಿಸಲಿದೆ’ ಎಂದು ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೊಹ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT