ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಗಿಂಗ್ ವಿರೋಧಿ ಬೀದಿ ನಾಟಕಕ್ಕೆ ಪ್ರಥಮ ಬಹುಮಾನ

ಫ್ಯುರೋರ್‌ ಅಂತರ ಎಂಜಿನಿಯರಿಂಗ್‌ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ
Last Updated 5 ಏಪ್ರಿಲ್ 2018, 19:20 IST
ಅಕ್ಷರ ಗಾತ್ರ

ಬೆಂಗಳೂರು: ಫ್ಯುರೋರ್‌ ಅಂತರ ಎಂಜಿನಿಯರಿಂಗ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಮನಸೆಳೆದ ರ‍್ಯಾಗಿಂಗ್ ವಿರೋಧಿ ‘ಸ್ಟಾರ್‌’ ಬೀದಿ ನಾಟಕಕ್ಕೆ ಪ್ರಥಮ ಬಹುಮಾನ ದೊರೆತಿದೆ.

ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ದಯಾನಂದ ಸಾಗರ ಕಾಲೇಜು ಆವರಣದಲ್ಲಿ ಎರಡು ದಿನ ನಡೆಯುವ ಸಾಂಸ್ಕೃತಿಕ ಹಬ್ಬಕ್ಕೆ ಗುರುವಾರ ಚಾಲನೆ ದೊರೆಯಿತು. ನಟರಾದ ಸುಚೇಂದ್ರ ಪ್ರಸಾದ್, ರಿಷಿ ಹಾಗೂ ನಟಿ ಶೀತಲ್‌ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಮುದ್ರಾ ಹಾಗೂ ನಾಟ್ಯ ಅಭಿನಯಿ ಸಾಗರಿ ತಂಡಗಳ ನೃತ್ಯ ಪ್ರದರ್ಶನ ಕಣ್ಮನಸೆಳೆಯಿತು.

‘ಆಶ್ರಯ ಕೊಟ್ಟ ನೆಲ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ವಿದ್ಯಾರ್ಥಿಗಳು ಮರೆಯಬಾರದು. ಜವಾಬ್ದಾರಿಯಿಂದ ಬದುಕು ಕಟ್ಟಿಕೊಳ್ಳಬೇಕು’ ಎಂದು ಸುಚೇಂದ್ರ ಪ್ರಸಾದ್ ಕಿವಿ ಮಾತು ಹೇಳಿದರು.

‘ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಸಿನಿಮಾಗಳಿಗೆ ಮೊದಲಿನಿಂದಲೂ ಬೆಂಬಲ ನೀಡುತ್ತಿದ್ದಾರೆ. ಚಿತ್ರರಂಗದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಸಿನಿಮಾ ಮಂದಿರಗಳಿಗೆ ಹೋಗಿ ಕನ್ನಡ ಸಿನಿಮಾಗಳನ್ನು ನೋಡಿ’ ಎಂದು ರಿಷಿ ಹೇಳಿದರು.

ಒಟ್ಟು 32 ಕಾಲೇಜುಗಳ ತಂಡಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿವೆ. 42 ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಗುರುವಾರ ಮೊದಲ ಹಂತದ ಚಟುವಟಿಕೆಗಳು ಜರುಗಿದವು. ಇದರಲ್ಲಿ ‘ಬೀದಿ ನಾಟಕ’ ಆಕರ್ಷಣೆಯ ಕೇಂದ್ರ ಬಿಂದು ಎನಿಸಿತ್ತು. ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಗಿಂಗ್‌ ವಿಷಯವನ್ನು ಪ್ರಸ್ತುತಪಡಿಸಿದ ರೀತಿ ಮೆಚ್ಚುಗೆಗೆ ಅರ್ಹವಾಯಿತು. 12 ವಿದ್ಯಾರ್ಥಿಗಳನ್ನು ಒಳಗೊಂಡ ಈ ತಂಡ ಪ್ರಥಮ ಬಹುಮಾನ ಪಡೆಯಿತು. ಎಂಟು ಕಾಲೇಜಿನ ತಂಡಗಳು ಈ ವಿಭಾಗದಲ್ಲಿ ಸ್ಪರ್ಧೆ ಒಡ್ಡಿದ್ದವು.

‘ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರ‍್ಯಾಗಿಂಗ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಾವು ಬೀದಿ ನಾಟಕದಲ್ಲಿ ಇದೇ ವಿಷಯವನ್ನು ಆಯ್ಕೆ ಮಾಡಿಕೊಂಡೆವು. ಸ್ಟಾರ್‌ ಎಂದರೆ ಸ್ಟ್ಯಾಂಡ್ ಟುಗೆದರ್‌ ಎಗೆನೆಸ್ಟ್ ರ‍್ಯಾಗಿಂಗ್‌’ ಎಂದು ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿ ಥಾಮಸ್ ಹೇಳಿದರು.

ಆರ್‌.ಎನ್‌ ಶೆಟ್ಟಿ ಇನ್ಸ್‌ಟ್ಯೂಟ್ ಆಫ್‌ ಟೆಕ್ನಾಲಜಿ ಕಾಲೇಜಿನ ತಂಡ ‘ಪಾಶ್ಚಿಮಾತ್ಯ ಶೈಲಿಯ ನೃತ್ಯ’ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ಎಮ್‌.ಎಸ್‌. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ಕಿಶನ್‌ ‘ಕಿರು ಚಿತ್ರ’ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT