ಬುಧವಾರ, ಆಗಸ್ಟ್ 5, 2020
21 °C

ಐಪಿಎಲ್‌ನಲ್ಲಿ ಡಿಆರ್‌ಎಸ್ ರೋಹಿತ್ ಶರ್ಮಾ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

ಐಪಿಎಲ್‌ನಲ್ಲಿ ಡಿಆರ್‌ಎಸ್ ರೋಹಿತ್ ಶರ್ಮಾ ಸ್ವಾಗತ

ಮುಂಬೈ : ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಜಾರಿ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಮಾಹೇಲ ಜಯವರ್ಧನೆ ಹೇಳಿದ್ದಾರೆ.

ಇಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿ ಅವರು ಮಾತನಾಡಿದರು.

ಐಪಿಎಲ್ ಋತುವಿನ ಮಧ್ಯದ ಅವಧಿಯಲ್ಲಿ  ಆಟಗಾರರ ವಿನಿಮಯ ಮಾಡಿಕೊಳ್ಳಲು ತಂಡಗಳಿಗೆ ಅವಕಾಶ ನೀಡಿರುವುದನ್ನೂ ಅವರು ಸ್ವಾಗತಿಸಿದ್ದಾರೆ.

‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುಡಿಆರ್‌ಎಸ್ ಬಳಕೆಯಾಗುತ್ತಿದೆ. ಐಪಿಎಲ್‌ ಟೂರ್ನಿಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಇದು ಅನುಕೂಲವಾಗಲಿದೆ. ಅಂಪೈರ್‌ಗಳಿಂದಲೂ ಕೆಲವೊಮ್ಮೆ ಲೋಪಗಳು ಆಗುತ್ತವೆ.  ಆಟಗಾರರು ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳಲೂ ನೆರವಾಗುತ್ತದೆ’ ಎಂದು ಜಯವರ್ಧನೆ

ಅಭಿಪ್ರಾಯಪಟ್ಟರು.

‘ಫುಟ್‌ಬಾಲ್ ಲೀಗ್‌ಗಳಲ್ಲಿ ಋತುವಿನ ನಡುವೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ನಿಯಮವಿದೆ. ಐಪಿಎಲ್‌ನಲ್ಲಿಯೂ ಬರುತ್ತಿರುವುದು ಒಳ್ಳೆಯದು’ ಎಂದು ರೋಹಿತ್ ಹೇಳಿದರು.

‘ಉತ್ತಮ ಆಟವಷ್ಟೆ ನಮ್ಮ ಗುರಿ’: ‘ಈ ಸಲದ ಐಪಿಎಲ್‌ ಕಪ್‌ ಗೆಲ್ಲುವ ನೆಚ್ಚಿನ ತಂಡ ಎಂಬ ಆತ್ಮವಿಶ್ವಾಸದಿಂದ ನಾವು ಬೀಗುವುದಿಲ್ಲ. ಬದಲಿಗೆ, ನಮ್ಮ ತಂಡವು ಕೆಳಹಂತದಿಂದ ಅಭ್ಯಾಸ ನಡೆಸುತ್ತಿದೆ. ಹಾಲಿ ಚಾಂಪಿಯನ್‌ಗಳೆಂಬ ಹೆಮ್ಮೆ ಇದ್ದರೂ, ಹಿಂದಿನ ಬಾರಿಗಿಂತ ಈ ಸಲ ಉತ್ತಮ ಆಟವಾಡುವ ರೀತಿ ಸಿದ್ಧತೆ ಮಾಡಿಕೊಳ್ಳಲಿದ್ದೇವೆ’ ಎಂದು ಜಯವರ್ಧನೆ ಹೇಳಿದರು.

‘ಈ ಸಲ, ಎಲ್ಲ ತಂಡಗಳಲ್ಲೂ ಹೊಸ ಆಟಗಾರರಿದ್ದಾರೆ. ಆದ್ದರಿಂದ ಎಚ್ಚರವಾಗಿ ಆಡಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

‘ನಮ್ಮ ತಂಡದ ನಾಯಕ ರೋಹಿತ್‌ ಶರ್ಮಾ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಅವರು ಅನೇಕ ಯುವ ಆಟಗಾರರಿಗೆ ಸಲಹೆ ನೀಡುತ್ತಾರೆ. ಪ್ರತಿಯೊಬ್ಬರೂ ಅತ್ಯುತ್ತಮ ಆಟವಾಡಬೇಕು ಎಂಬುದು ರೋಹಿತ್‌ ಉದ್ದೇಶ’ ಎಂದು ತಿಳಿಸಿದ್ದಾರೆ.

‘ಇನ್ನೂ, ಯಾವುದೇ ರೀತಿಯ ಸನ್ನಿವೇಶದಲ್ಲಿ ಆತಂಕಕ್ಕೊಳಗಾಗದ ರೀತಿ ಬೌಲಿಂಗ್‌ ಮಾಡುವ ಜಸ್‌ಪ್ರೀತ್‌ ಬೂಮ್ರಾ ನಮ್ಮ ತಂಡದ ಬೌಲಿಂಗ್‌ ಶಕ್ತಿ. ಬೌಲಿಂಗ್‌ನಲ್ಲಿ, ಹಾರ್ದಿಕ್‌ ಪಾಂಡ್ಯ ಕೂಡ ಉತ್ತಮ ಪ್ರಗತಿ ಸಾಧಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡವು, ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ತಂಡವನ್ನು ಎದುರಿಸಲಿದೆ.  ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಚೆನ್ನೈ ತಂಡವು ಈ ಬಾರಿ ಐಪಿಎಲ್‌ಗೆ ಮರಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.