ಮುಖ್ಯ ಚುನಾವಣಾಧಿಕಾರಿ ವಿರುದ್ಧವೇ ಕಮಿಷನರ್‌ಗೆ ದೂರು

7
ಸಾರಿಗೆ ಅಧಿಕಾರಿ, ಪೊಲೀಸರಿಂದ ಕಿರುಕುಳ: ಆರೋಪ

ಮುಖ್ಯ ಚುನಾವಣಾಧಿಕಾರಿ ವಿರುದ್ಧವೇ ಕಮಿಷನರ್‌ಗೆ ದೂರು

Published:
Updated:

ಬೆಂಗಳೂರು: ‘ವಿಧಾನಸಭಾ ಚುನಾವಣೆ ನೆಪದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರನ್ನು ಬಳಸಿಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ‘ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ’ದ ಅಧ್ಯಕ್ಷ ಎಂ.ಎನ್‌.ವೇಣುಗೋಪಾಲ್‌ ದೂರಿದ್ದಾರೆ.

ಈ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ಗೆ ದೂರು ನೀಡಿರುವ ಅವರು, ‘ಸಂಜೀವ್‌ ಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಚುನಾವಣೆ ಕರ್ತವ್ಯಕ್ಕಾಗಿ ಸರ್ಕಾರ ಹಾಗೂ ಸರ್ಕಾರದ ಅಧೀನದ ಸಂಸ್ಥೆಗಳ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ಏಕಾಏಕಿ ವಶಕ್ಕೆ ಪಡೆಯಲಾಗುತ್ತಿದೆ. ಆ ಸಂಬಂಧ ಯಾವುದೇ ನೋಟಿಸ್‌ ಕೂಡಾ ನೀಡುತ್ತಿಲ್ಲ. ಇದರಿಂದ ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ’ ಎಂದು ವೇಣುಗೋಪಾಲ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಈಗಾಗಲೇ 300 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಾದರೂ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು, ರಸ್ತೆಯಲ್ಲಿ ವಾಹನ ತಡೆದು ವಶಕ್ಕೆ ಪಡೆಯುವುದನ್ನು ಕೈ ಬಿಡಬೇಕು. ನಿಯಮ ಪ್ರಕಾರ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗದ ಎದುರು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry