ಮಂಗಳವಾರ, ಡಿಸೆಂಬರ್ 10, 2019
23 °C

ಚರ್ಚ್‌ಸ್ಟ್ರೀಟ್‌ ರಸ್ತೆ: ನೀರಿನಿಂದ ವಾರಕ್ಕೊಮ್ಮೆ ಸ್ವಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರ್ಚ್‌ಸ್ಟ್ರೀಟ್‌ ರಸ್ತೆ: ನೀರಿನಿಂದ ವಾರಕ್ಕೊಮ್ಮೆ ಸ್ವಚ್ಛ

ಬೆಂಗಳೂರು: ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಚರ್ಚ್‌ಸ್ಟ್ರೀಟ್‌ ರಸ್ತೆಯನ್ನು ವಾರಕ್ಕೊಮ್ಮೆ ತೊಳೆಯಲು ಬಿಬಿಎಂಪಿ ನಿರ್ಧರಿಸಿದೆ.

750 ಮೀಟರ್‌ ಉದ್ದದ ರಸ್ತೆಯಲ್ಲಿ ಅಳವಡಿಸಿರುವ ಕಾಬಲ್‌ ಕಲ್ಲುಗಳನ್ನು ಸಂಸ್ಕರಿಸಿದ ತ್ಯಾಜ್ಯ ನೀರು ಹಾಗೂ ಸಾಬೂನು ಬಳಸಿ ತೊಳೆಯಲಾಗುತ್ತದೆ.

ವಾಹನಗಳು ಉಗುಳುವ ಹೊಗೆಯಿಂದಾಗಿ ಕಾಲಾನಂತರದಲ್ಲಿ ಕಾಬಲ್‌ ಕಲ್ಲುಗಳು ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ. ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಹಾಗೂ ನಿರ್ವಹಣೆ ಮಾಡದಿದ್ದರೆ ತನ್ನ ಹೊಳಪನ್ನು ಕಳೆದುಕೊಳ್ಳಲಿವೆ ಎಂದು ಪಾಲಿಕೆ ರಸ್ತೆ ಮೂಲಸೌಕರ್ಯ ವಿಭಾಗದ (ಯೋಜನೆ) ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ತಿಳಿಸಿದರು.

ಈ ರಸ್ತೆಯನ್ನು ವಾರದಲ್ಲಿ ಎರಡು ಬಾರಿ ತೊಳೆಯುವ ಉದ್ದೇಶವಿದೆ. ಸದ್ಯ ವಾರಕ್ಕೊಮ್ಮೆ ತೊಳೆಯಲಾಗುತ್ತದೆ. ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪೂರೈಸುವುದಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಸ್ವಚ್ಛಗೊಳಿಸುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಇದು, ನಗರದಲ್ಲಿ ನೀರಿನಿಂದ ತೊಳೆಯುವ ಮೊದಲ ರಸ್ತೆಯಾಗಲಿದೆ ಎಂದರು.

ಈ ರಸ್ತೆಯ ಶೇ 10ರಷ್ಟು ಕಾಮಗಾರಿ ಬಾಕಿ ಇದೆ. ಅದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಈ ರಸ್ತೆಯ ಕಾಮಗಾರಿಗೆ 2017ರ ಫೆಬ್ರುವರಿಯಲ್ಲಿ ಚಾಲನೆ ನೀಡಲಾಗಿತ್ತು. ಕಾಮಗಾರಿಯನ್ನು ಆಗಸ್ಟ್‌ನೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಆದರೆ, 2018ರ ಮಾರ್ಚ್‌ 1ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಚರ್ಚ್‌ಸ್ಟ್ರೀಟ್‌ ಪಕ್ಕದ ಮ್ಯೂಸಿಯಂ ರಸ್ತೆಯನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಬಿಬಿಎಂಪಿ ನಿರ್ಧರಿಸಿದೆ. ಇದು 500 ಮೀಟರ್‌ ಹೊಂದಿದ್ದು, ₹3.4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.

‘ವಾಹನ ಸಂಚಾರ ನಿರ್ಬಂಧಿಸಲಿ’

‘ವಾರಕ್ಕೊಮ್ಮೆ ರಸ್ತೆಯನ್ನು ತೊಳೆಯಬೇಕು ಹಾಗೂ ಉತ್ತಮ ನಿರ್ವಹಣೆ ಮಾಡಬೇಕು. ಪಾದಚಾರಿಸ್ನೇಹಿ ರಸ್ತೆಯನ್ನಾಗಿ ರೂಪಿಸುವ ಉದ್ದೇಶದಿಂದ ಪ್ರತಿದಿನ ಸಂಜೆ 5ರಿಂದ ರಾತ್ರಿ 12ರವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕು. ಈ ಅವಧಿಯಲ್ಲಿ ವಾಹನ ನಿಲುಗಡೆ ತಾಣಗಳಲ್ಲಿ ಹೊರಾಂಗಣ ಕೆಫೆ ತೆರೆಯಲು ಅಥವಾ ಆಹಾರದ ವಾಹನಗಳನ್ನು ನಿಲ್ಲಿಸಲು ಗುತ್ತಿಗೆ ನೀಡಬಹುದು. ಈಗ ಅಳವಡಿಸಿರುವ ಕಸದ ಬುಟ್ಟಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅವುಗಳನ್ನು ಬದಲಿಸಬೇಕು’ ಎಂದು ವಾಸ್ತುಶಿಲ್ಪಿ ನರೇಶ್‌ ನರಸಿಂಹನ್‌ ಸಲಹೆ ನೀಡಿದರು. ಅವರು ಈ ರಸ್ತೆಯನ್ನು ವಿನ್ಯಾಸಗೊಳಿಸಿದ್ದಾರೆ.

ಪ್ರತಿಕ್ರಿಯಿಸಿ (+)