ಶುಕ್ರವಾರ, ಡಿಸೆಂಬರ್ 13, 2019
19 °C
ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಕುರಿತ ಸಮಾಲೋಚನಾ ಸಭೆಯಲ್ಲಿ ಆರೋಪ

‘ದಲಿತ ವಿರೋಧಿ ನ್ಯಾಯಮೂರ್ತಿಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದಲಿತ ವಿರೋಧಿ ನ್ಯಾಯಮೂರ್ತಿಗಳು’

ಬೆಂಗಳೂರು: ‘ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ–1989 ದುರ್ಬಲಗೊಳಿಸುವಂತಹ ಆದೇಶ ನೀಡಿರುವ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ದಲಿತ ವಿರೋಧಿಗಳು’ ಎಂದು ವಕೀಲ ಬಿ.ಟಿ.ವೆಂಕಟೇಶ್‌ ಆರೋಪಿಸಿದರು.

‘ವಕೀಲರ ಸಮುದಾಯ ಬೆಂಗಳೂರು’ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್‌ನ ವಿವಾದಾತ್ಮಕ ತೀರ್ಪಿನ ಕುರಿತ ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ ಕೂಡಲೇ ಆರೋಪಿಗಳ ಬಂಧನ ಮತ್ತು ಪ್ರಕರಣ ದಾಖಲಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಇದರಿಂದಾಗಿ 50 ವರ್ಷಗಳಿಂದ ಬಳಸಿದ್ದ ಕಾನೂನಿಗೆ ಕೊಡಲಿಪೆಟ್ಟು ಬಿದ್ದಿದೆ. ಇದರ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು.

‘ದಕ್ಷಿಣ ಭಾರತದವರು ನ್ಯಾಯಾಂಗದ ಬಗ್ಗೆ ಅತಿಯಾದ ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ, ಕೋರ್ಟ್‌ ನೀಡುವ ಯಾವುದೇ ಆದೇಶ ಅಥವಾ ತೀರ್ಪುಗಳ ವಿರುದ್ಧ ಧ್ವನಿ ಎತ್ತುವುದಿಲ್ಲ. ಇದಕ್ಕೆ ನ್ಯಾಯಾಂಗ ನಿಂದನೆ ಭಯವೂ ಇರುತ್ತದೆ. ಆದರೆ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಹೊರಬಿದ್ದಿರುವ ಅನೇಕ ತೀರ್ಪುಗಳು ಸಮಾಜಕ್ಕೆ ವಿರುದ್ಧವಾಗಿವೆ. ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮರುವಿಮರ್ಶೆ ಮಾಡಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ದೆಹಲಿಯ ‘ಪೀಪಲ್ಸ್‌ ವಾಚ್‌’ನ ನಿರ್ದೇಶಕ ಹೆನ್ರಿ ತಿಪಾನಿ, ‘ಸಮಾಜದ ಸಮಾನತೆಗಾಗಿ ಈ ಆದೇಶವನ್ನು ತೀವ್ರವಾಗಿ ಖಂಡಿಸಬೇಕು. ಇದು ತಳಸಮುದಾಯಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಸಮಾನತೆಯ ಮೇಲಿನ ವಿಶ್ವಾಸ ಕ್ಷೀಣಿಸಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳ ನೇಮಕ, ಕಾನೂನು ಶಿಕ್ಷಣದಲ್ಲೂ ಶೋಷಿತ ಸಮುದಾಯಗಳನ್ನು ಉದ್ದೇಶಪೂರ್ವಕವಾಗಿಯೇ ಗುರಿ ಮಾಡಲಾಗುತ್ತಿದೆ. ಈ ಸಮಸ್ಯೆಗಳ ವಿರುದ್ಧ ಎಲ್ಲರೂ ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ದಲಿತ ಸಂಘಟನೆಗಳ ಒಕ್ಕೂಟದ ಮುನಿಸ್ವಾಮಿ, ‘ಏಕ ಸಂಸ್ಕೃತಿ, ಏಕ ಭಾಷೆ, ಏಕ ನಾಯಕ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕಾರ್ಯಸೂಚಿ. ದಲಿತರನ್ನು ನಾಶ ಮಾಡುವುದು ಅವುಗಳ ಷಡ್ಯಂತ್ರ. ನಮ್ಮ ಶತ್ರುಗಳು ಪ್ರಬಲ ಹಾಗೂ ಯೋಜನಾಬದ್ಧರಾಗಿದ್ದಾರೆ. ಅವರನ್ನು ಎದುರಿಸಬೇಕಾದರೆ ನಮ್ಮೊಳಗಿನ ದೌರ್ಬಲ್ಯವನ್ನು ಮೊದಲು ಹೋಗಲಾಡಿಸಬೇಕು’ ಎಂದರು.

‘ಮೋದಿ, ಶಾ ನಮ್ಮ ಟಾರ್ಗೆಟ್‌’

‘ಈ ವರ್ಷ ವಿಧಾನಸಭೆ ಹಾಗೂ ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿವೆ. ಈ ಹೊತ್ತಿನಲ್ಲೇ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಕೆಳಜಾತಿಗಳ ಮೇಲೆ ದಾಳಿ ಮಾಡುವ ಮೂಲಕ ಮೇಲ್ಜಾತಿಗಳ ಮತಗಳನ್ನು ಕ್ರೋಡೀಕರಿಸುವುದು ಇದರ ಹಿಂದಿರುವ ಷಡ್ಯಂತ್ರ. ಇದು ರಾಜಕೀಯಪ್ರೇರಿತ ಆದೇಶ. ಇದನ್ನು ಸಮರ್ಥವಾಗಿ ಎದುರಿಸಬೇಕಾದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಟಾರ್ಗೆಟ್‌ ಮಾಡಬೇಕು. ಅವರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಪ್ರತಿಕ್ರಿಯಿಸಿ (+)