ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸದ ಮಾಫಿಯಾ’ ಕಟ್ಟಿ ಹಾಕುವವರು ಯಾರು?

Last Updated 5 ಏಪ್ರಿಲ್ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ಹಿಗ್ಗುತ್ತಿರುವ ಜನಸಂಖ್ಯೆಯಿಂದ ಮೊದಲೇ ಉಸಿರುಗಟ್ಟುವ ವಾತಾವರಣ ಎದುರಿಸುತ್ತಿರುವ ಬೆಂಗಳೂರು ಮಹಾನಗರದ ಕತ್ತನ್ನು ಹಿಸುಕುತ್ತಿದೆ ರಾಕ್ಷಸಾಕಾರದಲ್ಲಿ ಬೆಳೆದು ನಿಂತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ. ಎಂಟು ವರ್ಷಗಳಿಂದ ನಗರ ಕಸದ ತೀವ್ರ ಸಮಸ್ಯೆ ಎದುರಿಸುತ್ತಿದೆ.

ದಿನಪೂರ್ತಿ ದುಡಿಯುವ ಸಂಸ್ಕೃತಿ, ಭಿನ್ನ ಜೀವನಶೈಲಿಯಿಂದಾಗಿ ಮಹಾನಗರವು ಕಸ ವಿಲೇವಾರಿಗೆ ಕೇಂದ್ರೀಕೃತ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಸಿಕಸವನ್ನು ಮನೆಗಳಲ್ಲಿಯೇ ಕರಗಿಸುವಂತೆ ಮಾಡುವ ಉಪಾಯವನ್ನು ಕಂಡುಹಿಡಿಯದ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಲ್ಲವನ್ನೂ ಒಟ್ಟುಗೂಡಿಸಿಕೊಂಡು ಗುಡ್ಡೆ ಹಾಕುವುದನ್ನು ರೂಢಿಸಿಕೊಂಡಿತ್ತು. ಇದರಿಂದ ಸಾಕಷ್ಟು ವರ್ಷಗಳು ಸುಪ್ತವಾಗಿ ಬೆಳೆಯುತ್ತಲೇ ಹೋದ ತ್ಯಾಜ್ಯದ ರಾಶಿ ಒಮ್ಮೆಲೇ ಸ್ಫೋಟಿಸಿ, ನಗರದ ಅವ್ಯವಸ್ಥೆಯನ್ನು, ಅದಕ್ಷತೆಯನ್ನು ಜಗತ್ತಿನ ಎದುರು ಬೆತ್ತಲಾಗಿಸಿತ್ತು.

ಹೀಗೆ ಬೆತ್ತಲಾದ ನಗರಕ್ಕೆ ಬಟ್ಟೆ ತೊಡಿಸಲು ಕೆಲವರು ಪ್ರಯತ್ನಿಸಿದರೆ, ಅದನ್ನು ಹರಿಯಲು ಯತ್ನಿಸುತ್ತಿರುವವರು ಅನೇಕರು. ಠಾಕು ಠೀಕು ದಿರಿಸಿನಲ್ಲಿ ನಗರ ಕಂಗೊಳಿಸಿದರೆ, ಎಲ್ಲಿ ತಮ್ಮ ಅಸ್ತಿತ್ವಕ್ಕೆ ಕುತ್ತು ಬರುತ್ತದೆಯೋ ಎಂದು ರಾಜಕಾರ­ಣಿ­ಗಳು, ಗುತ್ತಿಗೆದಾರರು, ಬಿಬಿಎಂಪಿ ಅಧಿಕಾರಿಗಳು, ಪೊಲೀಸರು... ಹೀಗೆ ಕಸದಿಂದ ಲಾಭ ಉಣ್ಣುತ್ತಿರುವವರು ಸಮಸ್ಯೆಯನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ.

ನಗರದಲ್ಲಿ ಪ್ರತಿದಿನ 5 ಸಾವಿರ ಟನ್‌ ಕಸ ಉತ್ಪತ್ತಿ ಯಾಗುತ್ತದೆ. ಇದರಲ್ಲಿ ಶೇ 60ರಷ್ಟನ್ನು ಮಾತ್ರ ಬಿಬಿಎಂಪಿ ಸಂಗ್ರಹಿಸುತ್ತಿದೆ. ಹೀಗೆ ಸಂಗ್ರಹಿಸಿದ ಶೇ23ರಷ್ಟು ಕಸ ಮಾತ್ರ ಸಂಸ್ಕರಣೆಯಾಗುತ್ತಿದೆ. ಉಳಿದ ತ್ಯಾಜ್ಯವೆಲ್ಲ ಭೂಭರ್ತಿಯಾಗುತ್ತಿದೆ ಹಾಗೂ ಅದರಲ್ಲೊಂದಿಷ್ಟು ಕಸವನ್ನು ಸುಡಲಾಗುತ್ತಿದೆ. ಈ ಎರಡೂ ವಿಧಾನಗಳು ಪರಿಸರಕ್ಕೆ ಹಾನಿಕಾರಕ.

ಈ ನಗರ ಸಿಲಿಕಾನ್‌ ಸಿಟಿ ಆಗುವುದಕ್ಕಿಂತ ಮುನ್ನ, ಇಲ್ಲಿ ಉತ್ಪತ್ತಿಯಾಗುತ್ತಿದ್ದ ತ್ಯಾಜ್ಯವನ್ನು ಸುತ್ತಮುತ್ತಲ ಗ್ರಾಮದ ರೈತರು ಕೊಂಡೊಯ್ಯುತ್ತಿದ್ದರು ಎಂದು ಕೆಲವರು ನೆನಪಿಸಿಕೊಳ್ಳುತ್ತಾರೆ. ಮನೆಗಳಲ್ಲಿ ಉತ್ಪತ್ತಿಯಾಗುತ್ತಿದ್ದ ತ್ಯಾಜ್ಯ ಹಿತ್ತಲಲ್ಲಿಯೋ, ಹಸುಗಳಿಗೆ ನೀಡುತ್ತಿದ್ದರಿಂದಲೋ ಅಲ್ಲಿಯೇ ಅದು ಕರಗಿಬಿಡುತ್ತಿತ್ತು. ಕಾಲಕಳೆದಂತೆ ಜನಸಂಖ್ಯೆ ಹೆಚ್ಚಿದಂತೆ ಹಿತ್ತಲು ಮಾಯವಾಯಿತು. ಕಾಗದದ ಜಾಗವನ್ನು ಪ್ಲಾಸ್ಟಿಕ್‌ ಆವರಿಸಿಕೊಂಡಿತು. ಹೀಗೆ ನಿಧಾನಕ್ಕೆ ಆದ ಬದಲಾವಣೆಗಳಿಂದ ನಗರದ ತ್ಯಾಜ್ಯ ನಿರ್ವಹಣೆ ಹಾದಿ ತಪ್ಪಿತು.

ನಗರದ ತ್ಯಾಜ್ಯವನ್ನು ಸುರಿಯಲು ಮಂಡೂರು, ಮಾವಳ್ಳಿಪುರ, ಎಸ್‌.ಬಿಂಗಿಪುರ, ಅಂಜನಾಪುರ... ಹೀಗೆ ಒಂದೊಂದೇ ಡಂಪ್‌ಯಾರ್ಡ್‌ಗಳು ಜನ್ಮತಳೆದವು. ವಾಸನೆಯನ್ನು ಸಹಿಸಲಾಗದೆ ಅಲ್ಲಿ ಜನ ಪ್ರತಿಭಟಿಸಿದರು. ಹೀಗಾದಾಗ ಲಾರಿ ದಿಕ್ಕುಗಳು ಬದಲಾಗುತ್ತವೆಯೇ ಹೊರತು ಇದಕ್ಕೊಂದು ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಉಸಿರಾಡಲು ಕಷ್ಟಪಡುತ್ತಿರುವವರ ಪ್ರತಿಭಟನೆಯ ಕಿಚ್ಚಿನಲ್ಲಿ ಮೈ ಬೆಚ್ಚಗಾಗಿಸಿಕೊಳ್ಳುವ ರಾಜಕಾರಣಿಗಳ ಸಂಖ್ಯೆಯೂ ಹೆಚ್ಚಿದೆ. ಒಂದೊಂದು ಭೂಭರ್ತಿ ಘಟಕ ಸ್ಥಗಿತಗೊಂಡಾಗಲೂ ಮತ್ತೊಂದು ಹೊಸ ಜಾಗ ಹುಟ್ಟಿಕೊಳ್ಳುತ್ತದೆ. ಅಲ್ಲಿನ ಜಲಮೂಲಗಳೆಲ್ಲ ಕಲುಷಿತವಾಗಿವೆ, ಸುತ್ತಲಿನ ಪ್ರದೇಶದಲ್ಲಿ ಮಳೆ ನೀರಿನ ಜತೆಗೆ ಕಸದ ರಾಸಾಯನಿಕವೂ ಹರಿದಿದೆ. ಗಬ್ಬುನಾತ ಅವರ ಬದುಕನ್ನು ನರಕವಾಗಿಸಿದೆ.

ಕಸವನ್ನು ಮೂಲದಲ್ಲೇ ವಿಂಗಡಣೆ ಮಾಡಬೇಕು ಎಂದು ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಅನುಷ್ಠಾನಕ್ಕೆ ತರಲು ಬಿಬಿಎಂಪಿಗೆ ಐದು ವರ್ಷಗಳೇ ಬೇಕಾಯಿತು. ಈಗಲೂ ಶೇ 40ರಷ್ಟು ಮಂದಿ ಕಸ ವಿಂಗಡಿಸುವುದಿಲ್ಲ. ಕೆಲವು ಕಡೆಗಳಲ್ಲಿ ನಾಗರಿಕರು ಕಸ ವಿಂಗಡಣೆ ಮಾಡಿಕೊಟ್ಟರೂ ಸಂಗ್ರಹಕಾರರು ಕಲಬೆರಕೆ ಮಾಡುತ್ತಾರೆ. ವಿಕೇಂದ್ರೀಕರಣ ವ್ಯವಸ್ಥೆ ಸಬಲಗೊಂಡಷ್ಟೂ ಕಸ ವಿಲೇವಾರಿ ಸುಲಭ. ಆದರೆ, ಬಿಬಿಎಂಪಿ ಇದುವರೆಗೆ ನಿರ್ವಹಣೆ ಮಾಡಿಕೊಂಡು ಬಂದಿರುವುದು ಕೇಂದ್ರೀಕೃತ ವ್ಯವಸ್ಥೆಯನ್ನೇ.

ತ್ಯಾಜ್ಯ ವಿಲೇವಾರಿಗೆ ಮಹಾನಗರ ವ್ಯಯಿಸುವ ಖರ್ಚು ಸಾವಿರಾರು ಕೋಟಿ ದಾಟುತ್ತದೆ. 2018–19ನೇ ಸಾಲಿನಲ್ಲಿ ಬಿಬಿಎಂಪಿ ₹1,066 ಕೋಟಿಯಷ್ಟು ಮೊತ್ತವನ್ನು ಕಸ ವಿಲೇವಾರಿಗಾಗಿ ಮೀಸಲಿಟ್ಟಿದೆ. ಕಸ ಮನೆಗಳಲ್ಲಿಯೇ ಗೊಬ್ಬರವಾದರೆ, ಲಾರಿಗಳ ಮಾಫಿಯಾದಿಂದ ಕೈಸೇರುತ್ತಿರುವ ದೊಡ್ಡ ಪ್ರಮಾಣದ ಹಣ ಮಾಯವಾಗಿಬಿಡುತ್ತದೆ. ಹೀಗಾಗಿಯೇ ಕಸ ಎನ್ನುವುದು ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳ ಪಾಲಿಗೆ ಚಿನ್ನದ ಹಾರವಾಗಿದೆ.

ಬಿಬಿಎಂಪಿ ಕಸದ ನಿರ್ವಹಣೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಈಗ ಗುಟ್ಟಾಗಿ ಉಳಿದಿಲ್ಲ. ಕಸದ ನಿರ್ವಹಣೆಯಲ್ಲಿ ಆದ ಅಕ್ರಮದ ಕುರಿತು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) 2008ರಲ್ಲಿ ವರದಿ ನೀಡಿತ್ತು. ಪ್ರತಿವರ್ಷ ₹200 ಕೋಟಿಗೂ ಅಧಿಕ ಮೊತ್ತವನ್ನು ಗುತ್ತಿಗೆದಾರರಿಗೆ ಅಕ್ರಮವಾಗಿ ಪಾವತಿ ಮಾಡಲಾಗಿದೆ ಎಂಬ ವಿಷಯ ಕಸದ ಗಣಿಯ ಅವ್ಯವಹಾರವನ್ನು ಬಯಲಿಗೆಳೆದಿತ್ತು. ಇದಾದ ನಂತರವೂ ಕಸದ ಮಾಫಿಯಾ ರಾಜಾರೋಷವಾಗಿ ಬೇಳೆ ಬೇಯಿಸಿಕೊಳ್ಳುತ್ತಲೇ ಇದೆ.

ನೂರಕ್ಕೆ ನೂರರಷ್ಟು ಮನೆಗಳಿಗೂ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ, ಕೆಲವು ಕೊಳೆಗೇರಿಗಳನ್ನು ಹೊರತುಪಡಿಸಿದರೆ ನಗರದಲ್ಲಿ ಎಲ್ಲಿಯೂ ಬ್ಲ್ಯಾಕ್‌ಸ್ಪಾಟ್‌ಗಳಿಲ್ಲ ಎನ್ನುವುದು ಬಿಬಿಎಂಪಿ ಹೇಳಿಕೆ. ಆದರೆ, ಯಾವ ರಸ್ತೆಗೆ ಹೋದರೂ ಬ್ಲ್ಯಾಕ್‌ಸ್ಪಾಟ್‌ಗಳು ಕಣ್ಣಿಗೆ ರಾಚುತ್ತವೆ. ಅಲ್ಲಿ ಬಿಸಾಡಿದ ಕಸದ ರಾಶಿ ವಾರಗಟ್ಟಲೆ ಅಲ್ಲಿಯೇ ಕೊಳೆತು ನಾರುತ್ತಿರುತ್ತದೆ. ದಂಡ ವಿಧಿಸಿದವರ ಪಟ್ಟಿಗಿಂತ, ಕಸ ವಿಂಗಡಣೆಯ ನಿಯಮ ಉಲ್ಲಂಘಿಸುವವರ ಪಟ್ಟಿ ಉದ್ದವಿದೆ.

ತ್ಯಾಜ್ಯ ವಿಲೇವಾರಿಗೆ ಸುಸ್ಥಿರ ವ್ಯವಸ್ಥೆ ರೂಪಿಸುವಂತೆ ಹೈಕೋರ್ಟ್‌ ಮತ್ತೆ ಮತ್ತೆ ಕಿವಿ ಹಿಂಡಿದ ನಂತರ ಸ್ಪಲ್ಪ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಕೊಂಚ ಗಂಭೀರವಾಗಿದ್ದಾರೆ. ತ್ಯಾಜ್ಯ ನಿರ್ವಹಣೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರ, ಕಸ ಕೊಂಡೊಯ್ಯುವ ಲಾರಿ ಮಾಲೀಕರ ಕಳ್ಳಾಟವನ್ನು ತಡೆಯುವ ಭಾಗವಾಗಿ ಪೌರಕಾರ್ಮಿಕರಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಮೂಲಕ ನೇರ ಸಂಬಳ ನೀಡುವ ವ್ಯವಸ್ಥೆ ಜಾರಿಯಾಗಿದೆ. ಕಸ ಸಾಗಿಸುವ ಆಟೊಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ.

‘ಹಣದ ವಿಷಯ ಎಲ್ಲೆಲ್ಲಿರುವುದೋ ಅಲ್ಲಲ್ಲಿ ಹಿತಾಸಕ್ತಿಗಳು ಕೆಲಸ ಮಾಡುವುದು ಸಾಮಾನ್ಯ. ಆದರೆ, ಇನ್ನುಮುಂದೆ ಅದಕ್ಕೆ ಆಸ್ಪದ ಇಲ್ಲದಂತೆ ವ್ಯವಸ್ಥೆ ರೂಪಿಸಲಾಗಿದೆ. ಗುತ್ತಿಗೆದಾರರಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅದಕ್ಕೆ ತಕ್ಕಂತೆ ಗುತ್ತಿಗೆ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದುವರೆಗಿನ ಟೆಂಡರ್‌ ಪ್ರಕ್ರಿಯೆಗಳು ವೈಜ್ಞಾನಿಕವಾಗಿ ನಡೆಯುತ್ತಿರಲಿಲ್ಲ. ಒಂದೊಂದು ವಾರ್ಡ್‌ನ ಕಸದ ಸ್ವರೂಪ, ಪ್ರಮಾಣವನ್ನು ಈಗ ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ನಿಯಮ ರೂಪಿಸಲಾಗಿದೆ. ಹಂತಹಂತವಾಗಿ ಪಾಲಿಕೆ ಸ್ವಾವಲಂಬನೆ ಸಾಧಿಸಲಿದೆ’ ಎನ್ನುತ್ತಾರೆ ಪಾಲಿಕೆ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌.

ಕ್ವಾರಿಗಳಲ್ಲಿ ತ್ಯಾಜ್ಯವನ್ನು ತುಂಬುತ್ತಿರುವುದು ಮತ್ತೊಂದು ಅಪಾಯವನ್ನು ತಂದೊಡ್ಡುತ್ತದೆ ಎನ್ನುವುದನ್ನು ಅಧಿಕಾರಿಗಳು ಒಪ್ಪಿಕೊಳ್ಳುವುದೇ ಇಲ್ಲ. ‘ಕ್ವಾರಿಗಳನ್ನು ತುಂಬಿಸಿ ಅಲ್ಲೊಂದು ಸುಂದರ ಉದ್ಯಾನವನ್ನು ನಿರ್ಮಿಸಿದ್ದೇವೆ. ಅಲ್ಲಿ ಕೆಟ್ಟವಾಸನೆಯೂ ಬರುವುದಿಲ್ಲ’ ಎಂದು ಅವರು ವಾದಿಸುತ್ತಾರೆ. ಆ ಕ್ವಾರಿ ಗಳಲ್ಲಿ ತುಂಬಿರುವುದು ಒಟ್ಟುಗೂಡಿಸಿದ ತ್ಯಾಜ್ಯವಾದ್ದ ರಿಂದ ಅದು ಇನ್ನಷ್ಟು ಅಪಾಯಕಾರಿ ಎನ್ನುತ್ತಾರೆ ತಜ್ಞರು.

ಸಾರ್ವಜನಿಕರೂ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳದೆ ಬೇಕೆಂದಲ್ಲಿ ಕಸ ಬಿಸಾಡಿದರು. ಕಸದ ಹೊರೆಯನ್ನು ಕಡಿಮೆ ಮಾಡುವಲ್ಲಿ ತಮ್ಮ ಪಾತ್ರ ಏನೆಂಬುದನ್ನು ಮರೆತರು. ಮನೆ ಅಂಗಳದಲ್ಲೇ ಸಂಸ್ಕರಿಸಬಹುದಾದ ಹಸಿ ತ್ಯಾಜ್ಯವನ್ನು ಎಲ್ಲ ಕಸದೊಂದಿಗೆ ಬೆರೆಸಿ ಪಕ್ಕದ ಮನೆಯ ಎದುರು ಇಟ್ಟರು. ಪಕ್ಕದವರು ಅವರ ಮನೆಯ ಕಸವನ್ನೂ ಸೇರಿಸಿ ಮತ್ತೊಬ್ಬರ ಮನೆಯ ಬಳಿಯಿಟ್ಟರು... ಹೀಗೆ ಕಸದ ಸವಾರಿ ಸಾಗುತ್ತಲೇ ಇದೆ. ತಮ್ಮದಲ್ಲದ ಕಸದ ಗಬ್ಬುನಾತವನ್ನು ದೊಡ್ಡಬಿದರಕಲ್ಲು, ಕನ್ನಹಳ್ಳಿ, ಚಿಕ್ಕನಾಗಮಂಗಲ, ಲಿಂಗಧೀರನಹಳ್ಳಿ, ಸುಬ್ಬರಾಯನಪಾಳ್ಯ, ಸೀಗೇಹಳ್ಳಿಯ ಜನ ಸೇವಿಸುತ್ತಿದ್ದಾರೆ.

ವಿಂಗಡಣೆಯೊಂದೇ ಪರಿಹಾರ

ಬೆಂಗಳೂರು ಘನತ್ಯಾಜ್ಯದಲ್ಲಿ ಮುಳುಗುತ್ತಿದೆ. ಹಸಿ ಕಸವನ್ನು ಗೊಬ್ಬರ ಮಾಡದ ಹೊರತು ಈ ಸಮಸ್ಯೆಗೆ ಪರಿಹಾರವಿಲ್ಲ ಎಂದು ಘನತ್ಯಾಜ್ಯ ಹೋರಾಟಗಾರ್ತಿ ಮೀನಾಕ್ಷಿ ಭರತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ವಾರ್ಡ್‌ ಮಟ್ಟದಲ್ಲಿಯೇ ಹಸಿಕಸ ಸಂಸ್ಕರಣೆ ಆಗಬೇಕು. ಶಾಸಕರು ಮನಸ್ಸು ಮಾಡಿದರೆ, ಇದು ದೊಡ್ಡ ವಿಷಯವೇ ಅಲ್ಲ. ಮನೆಗಳಲ್ಲಿ ಕಸ ವಿಂಗಡಿಸದವರಿಗೆ ಶುಲ್ಕ ವಿಧಿಸಬೇಕು.ಶೇ 50ರಷ್ಟು ಕಸ ಮಾತ್ರ ವಿಂಗಡಣೆಯಾಗುತ್ತಿದೆ. ಈ ಬಗ್ಗೆ ತಿಳಿದಿದ್ದರೂ ಬಿಬಿಎಂಪಿ ಅಧಿಕಾರಿಗಳು ಸುಮ್ಮನಿದ್ದಾರೆ. ಇದರ ಹಿಂದೆ ಅವ್ಯವಹಾರದ ವಾಸನೆ ಬಡಿಯುತ್ತದೆ ಎಂದರು.

***

ನಗರದ ಘನತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಿಜಕ್ಕೂ ಅನಿವಾರ್ಯ. ಉತ್ಪಾದನೆಯಾಗುವ ತ್ಯಾಜ್ಯ ಮನೆಗಳಲ್ಲಿಯೇ ಬಳಕೆಯಾಗುವಂತೆ ಮಾಡಲು ಆದ್ಯತೆ ನೀಡುತ್ತೇವೆ. ಕಸಕ್ಕೆ ಬೆಂಕಿ ಹಾಕುವುದು, ಭೂಭರ್ತಿಗೆ ಕಡಿವಾಣ ಹಾಕುತ್ತೇವೆ. ಉತ್ಪತ್ತಿಯಾಗುವ ಶೇ 80ರಷ್ಟು ತ್ಯಾಜ್ಯ ಮರುಬಳಕೆಯಾಗುವಂತೆ ಯೋಜನೆಗಳನ್ನು ರೂಪಿಸಲಾಗುತ್ತದೆ. ಕಸದ ಮಾಫಿಯಾ ತಡೆಯಲು ಪಾರದರ್ಶಕ ವ್ಯವಸ್ಥೆ ಜಾರಿಗೊಳ್ಳುತ್ತದೆ. ಕಸ ವಿಂಗಡಿಸದ ಜನರಿಗೆ ದಂಡ ವಿಧಿಸುವ ಬದಲು ಮನಪರಿವರ್ತನೆಗೆ ಹೆಚ್ಚು ಪ್ರಯತ್ನ ನಡೆಯುತ್ತದೆ.

– ರಮೇಶ್‌ ಬಾಬು, ಜೆಡಿಎಸ್ ವಕ್ತಾರ

ಉತ್ಪತ್ತಿಯಾಗುವ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ನಗರ ಹಾಗೂ ಸುತ್ತಮುತ್ತ ಜನವಸತಿ ಇಲ್ಲದಿರುವ ಕಡೆಗಳಲ್ಲಿ 100 ಎಕರೆ ಜಾಗವನ್ನು ಖರೀದಿಸಿ ವಿದ್ಯುತ್ ತಯಾರಿಕಾ ಘಟಕ ಸ್ಥಾಪಿಸಲಾಗುವುದು. ತ್ಯಾಜ್ಯದ ಸಮಸ್ಯೆಗೆ ಇದೇ ಪರಿಹಾರ.

–ಎಸ್.ಟಿ.ಸೋಮಶೇಖರ್‌, ಕಾಂಗ್ರೆಸ್‌ ಶಾಸಕ

ಪ್ರಣಾಳಿಕೆ ಇಲ್ಲದೆ, ಈ ವಿಷಯದ ಕುರಿತು ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೆ ಎಂದು ನಾನು ಪ್ರತಿಕ್ರಿಯಿಸುವುದಿಲ್ಲ.

–ಡಾ. ಸಿ.ಎನ್ಅಶ್ವತ್ಥನಾರಾಯಣ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT