ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬನಿಗೆ ಪೊಲೀಸರ ಗುಂಡೇಟು

ಸ್ನೇಹಿತನ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಚರಣ್
Last Updated 5 ಏಪ್ರಿಲ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರತ್ತ ಮಚ್ಚು ಬೀಸಿ ಪರಾರಿಯಾಗಲು ಯತ್ನಿಸಿದ ಚರಣ್ (31) ಎಂಬಾತನ ಕಾಲಿಗೆ ಮಹದೇವಪುರ ಠಾಣೆ ಎಸ್‌ಐ ಗುಂಡು ಹೊಡೆದಿದ್ದಾರೆ.

ಎರಡು ತಿಂಗಳಲ್ಲಿ ನಗರ ಪೊಲೀಸರಿಂದ ಗುಂಡೇಟು ತಿಂದ ಒಂಬತ್ತನೇ ಆರೋಪಿ ಈತ. ಕಾವೇರಿನಗರ ನಿವಾಸಿ ಚರಣ್, ಮಾರ್ಚ್ 3ರ ರಾತ್ರಿ ಸಹಚರರೊಂದಿಗೆ ಸೇರಿ ತನ್ನ ಸ್ನೇಹಿತ ಅಜಯ್‌ನ ಕುತ್ತಿಗೆಗೆ ಮಚ್ಚಿನಿಂದ ಹೊಡೆದಿದ್ದ. ಗಾಯಾಳುವಿನ ಹೇಳಿಕೆ ಆಧರಿಸಿ ಪೊಲೀಸರು ಚರಣ್, ಲೋಕೇಶ್ ಅಲಿಯಾಸ್ ಕೋಡಿ ಹಾಗೂ ಮಂಜುನಾಥ್ ವಿರುದ್ಧ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಎಫ್‌ಐಆರ್ ದಾಖಲಿಸಿದ್ದರು.

‘ಕೃತ್ಯ ಎಸಗಿದ ನಂತರ ತಮಿಳುನಾಡಿಗೆ ತೆರಳಿದ್ದ ಚರಣ್, ಗುರುವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ. 11.30ರ ಸುಮಾರಿಗೆ ಸಿಂಗಯ್ಯನಪಾಳ್ಯ ರೈಲ್ವೆ ಪ್ರದೇಶದಲ್ಲಿ ಆತನನ್ನು ನೋಡಿದ ಪೊಲೀಸ್ ಮಾಹಿತಿದಾರರೊಬ್ಬರು, ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಎಸ್‌ಐ ನಾರಾಯಣಸ್ವಾಮಿ ತಕ್ಷಣ ಅಪರಾಧ ವಿಭಾಗದ ಕಾನ್‌ಸ್ಟೆಬಲ್‌ಗಳಾದ ಮಣಿ, ಶ್ರೀಧರ್ ಹಾಗೂ ಶ್ರೀನಿವಾಸ್ ಅವರನ್ನು ಕರೆದುಕೊಂಡು ಸ್ಥಳಕ್ಕೆ ತೆರಳಿದರು’ ಎಂದು ಅಧಿಕಾರಿ
ಯೊಬ್ಬರು ಕಾರ್ಯಾಚರಣೆಯನ್ನು ವಿವರಿಸಿದರು.

‘ಸಿಬ್ಬಂದಿ ಮಫ್ತಿಯಲ್ಲಿ ಇದ್ದುದರಿಂದ ಚರಣ್‌ಗೆ ಅವರು ಪೊಲೀಸರೆಂದು ಗೊತ್ತಾಗಿರಲಿಲ್ಲ. ಅಜಯ್‌ಗೆ ಹೊಡೆದಿದ್ದಕ್ಕೆ ಪ್ರತೀಕಾರವಾಗಿ ಆತನ ಸಹಚರರು ತನ್ನ ಮೇಲೆ ದಾಳಿಗೆ ಮುಂದಾಗಿರಬಹುದು ಎಂದೇ ಭಾವಿಸಿದ್ದ. ಆತ ಮಚ್ಚು ತೆಗೆಯುತ್ತಿದ್ದಂತೆಯೇ ಸಿಬ್ಬಂದಿ, ನಾವು ಪೊಲೀಸರು ಎಂದು ಗುರುತಿನ ಚೀಟಿ ತೋರಿಸಿದರು. ಆಗ ‌ಸ್ಥಳದಿಂದ ಓಡಲಾರಂಭಿಸಿದ’.

‘ಕಾನ್‌ಸ್ಟೆಬಲ್‌ ಮಣಿ ಬೆನ್ನಟ್ಟಿ ಚರಣ್‌ನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಆತ ಮಚ್ಚಿನಿಂದ ಅವರ ಕೈಗೆ ಹೊಡೆದು ಬಿಡಿಸಿಕೊಳ್ಳಲು ಯತ್ನಿಸಿದ. ಆಗ ನಾರಾಯಣಸ್ವಾಮಿ ಅವರು ಕಾಲಿಗೆ ಗುಂಡು ಹೊಡೆದು ಆತನನ್ನು ವಶಕ್ಕೆ ಪಡೆದರು’ ಎಂದು ವಿವರಿಸಿದರು.

ಐಸಿಯುನಲ್ಲಿ ಅಜಯ್: ‘ಅಜಯ್ ಸಹ ಕಾವೇರಿನಗರ ನಿವಾಸಿಯಾಗಿದ್ದು, ನಾಲ್ಕು ವರ್ಷಗಳಿಂದ ಚರಣ್‌ನ ಸ್ನೇಹಿತನಾಗಿದ್ದ. ಈಚೆಗೆ ಇಬ್ಬರ ಗೆಳೆತನದಲ್ಲಿ ಒಡಕು ಉಂಟಾಗಿ, ಮನೆ ಮುಂದೆಯೇ ಪರಸ್ಪರ ಬೈದಾಡಿಕೊಂಡಿದ್ದರು. ಸ್ಥಳೀಯರ ಮುಂದೆ ತನ್ನನ್ನು ನಿಂದಿಸಿದ್ದರಿಂದ ಕುಪಿತಗೊಂಡ ಚರಣ್, ಗೆಳೆಯನ ಕೊಲೆಗೆ ಸಂಚು ರೂಪಿಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಮಾರ್ಚ್ 3ರ ರಾತ್ರಿ 11.10ಕ್ಕೆ ಅಜಯ್, ಗರುಡಾಚಾರ್‌ಪಾಳ್ಯದ ಕೆಪಿಟಿಸಿಎಲ್ ಕಚೇರಿ ಬಳಿ ರಸ್ತೆ ದಾಟುತ್ತಿದ್ದ. ಆಗ ಸಹಚರರೊಂದಿಗೆ ಟಿವಿಎಸ್ ವಿಕ್ಟರ್ ಬೈಕ್‌ನಲ್ಲಿ ಅಲ್ಲಿಗೆ ಬಂದ ಚರಣ್, ಮಚ್ಚಿನಿಂದ ಕುತ್ತಿಗೆಗೆ ಹೊಡೆದು ಹೊರಟು ಹೋಗಿದ್ದ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಈಗ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆತ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT