ಮನೆಗೆ ನುಗ್ಗಿ ಫೈನಾನ್ಶಿಯರ್ ಹತ್ಯೆ

7

ಮನೆಗೆ ನುಗ್ಗಿ ಫೈನಾನ್ಶಿಯರ್ ಹತ್ಯೆ

Published:
Updated:

ಬೆಂಗಳೂರು: ಕೆ.ಆರ್.ಪುರ ಸಮೀಪದ ದೇವಸಂದ್ರದಲ್ಲಿ ದುಷ್ಕರ್ಮಿಗಳು ಫೈನಾನ್ಶಿಯರ್ ಸಂಜಯ್ ಸತೀಶ್ ಅಲಿಯಾಸ್ ‌ಶೈಲೇಶ್ (68) ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ.

ಉತ್ತರಪ್ರದೇಶದ ಸಂಜಯ್, ಸುಮಾರು 30 ವರ್ಷಗಳಿಂದ ನಗರದಲ್ಲೇ ನೆಲೆಸಿದ್ದಾರೆ. ಬುಧವಾರ ರಾತ್ರಿ ಅವರ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು, ತಮ್ಮ ಬಳಿ ಇದ್ದ ಇನ್ನೊಂದು ಕೀ ಬಳಸಿ ಮನೆಯೊಳಗೆ ಹೋದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಐದಾರು ದಿನಗಳ ಹಿಂದೆಯೇ ಯಾರೋ ಕೊಲೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.

ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿರುವ ಹಂತಕರು, ನಂತರ ದಿಂಬಿನಿಂದ ಉಸಿರುಗಟ್ಟಿಸಿದ್ದಾರೆ. ಕೃತ್ಯ ಮುಗಿದ ಬಳಿಕ ಹೊರಗಿನಿಂದ ಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ. ಸುತ್ತಮುತ್ತಲ ಕಟ್ಟಡಗಳಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಮೃತರ ಅಣ್ಣನ ಮಗನನ್ನು ವಿಚಾರಣೆ ನಡೆಸಿ, ಸಂಜಯ್ ಪೂರ್ವಾಪರ ತಿಳಿಯುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪತ್ನಿ–ಮಗ ನ್ಯೂಜಿಲೆಂಡ್‌ನಲ್ಲಿ: 80ರ ದಶಕದಲ್ಲಿ ಮಥುರಾದಲ್ಲಿ ಕ್ಯಾಸೆಟ್ ಮಾರಾಟ ಮಳಿಗೆ ನಡೆಸುತ್ತಿದ್ದ ಸಂಜಯ್, ಸ್ಥಳೀಯ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಏಳೆಂಟು ವರ್ಷಗಳ ಬಳಿಕ ದಾಂಪತ್ಯದಲ್ಲಿ ಒಡಕು ಉಂಟಾಗಿದ್ದರಿಂದ ವಿಚ್ಛೇದನ ನೀಡಿದ ಪತ್ನಿ, ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು.

ಆಗ ನಗರಕ್ಕೆ ಬಂದ ಸಂಜಯ್, ಮೊದಲು ಮಲ್ಲೇಶ್ವರದಲ್ಲಿ ನೆಲೆಸಿದ್ದರು. ಆರಂಭದಲ್ಲಿ ಮನೆ ಸಮೀಪದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ನಂತರ ಉದ್ಯೋಗ ತೊರೆದು ಫೈನಾನ್ಸ್ ವ್ಯವಹಾರ ಪ್ರಾರಂಭಿಸಿದರು. ವರ್ಷದ ಹಿಂದೆ ದೇವಸಂದ್ರಕ್ಕೆ ವಾಸ್ತವ್ಯ ಬದಲಿಸಿದ್ದರು. ಸಂಜಯ್ ಪುತ್ರ ಈಗ ನ್ಯೂಜಿಲೆಂಡ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ತಾಯಿಯೊಂದಿಗೆ ಅಲ್ಲೇ ನೆಲೆಸಿದ್ದಾರೆ ಎಂದು ಪೊಲೀಸರು ವಿವರಿಸಿದರು.

**

ಮಾರ್ಚ್ 29ರಂದು ಕೊನೆ ಕರೆ

‘ಸಂಜಯ್ ನಾಲ್ಕೈದು ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಮಾರ್ಚ್ 29ರಂದು ನನಗೆ ಕರೆ ಮಾಡಿದ್ದ ಅವರು, ‘ಮನೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಆದಷ್ಟು ಬೇಗ ಅದನ್ನು ಪರಿಹರಿಸಿ’ ಎಂದು ಹೇಳಿದ್ದರು. ಆ ನಂತರ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಮನೆ ಮಾಲೀಕರು ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

**

ಹಣಕಾಸಿನ ವಿಚಾರಕ್ಕೆ ಪರಿಚಿತರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ. ಹಂತಕರ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ

– ಅಬ್ದುಲ್ ಅಹದ್, ವೈಟ್‌ಫೀಲ್ಡ್ ಡಿಸಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry