ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೊಹ್ರಾಬುದ್ದೀನ್ ಪ್ರಕರಣ: ಬೆದರಿಕೆಯೊಡ್ಡಿ ಸುಳ್ಳು ಸಾಕ್ಷಿ ಹೇಳಿಸಿದ್ದ ಸಿಬಿಐ’

Last Updated 6 ಏಪ್ರಿಲ್ 2018, 2:21 IST
ಅಕ್ಷರ ಗಾತ್ರ

ಮುಂಬೈ: ಸಿಬಿಐ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿ ಸುಳ್ಳು ಹೇಳಿಕೆ ದಾಖಲಿಸಿದ್ದರು ಎಂದು ಸೊಹ್ರಾಬುದ್ದೀನ್ ಶೇಖ್ ಸಹಚರ ತುಳಸಿರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರು ಆರೋಪಿಸಿದ್ದಾರೆ.

ಸಿಬಿಐ ಅಧಿಕಾರಿಗಳು 2011ರಲ್ಲಿ ನನ್ನನ್ನು ಬೆದರಿಸಿ ಸುಳ್ಳು ಹೇಳಿಕೆ ದಾಖಲಿಸಿಕೊಂಡಿದ್ದರು. ಅದು ನಾನು ಹೆದರಿಕೆಯಿಂದ ನೀಡಿದ ಹೇಳಿಕೆ ಎಂದು ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಿಬಿಐ ವಿರುದ್ಧ ಆರೋಪ ಮಾಡಿರುವವರು ರಾಜಸ್ಥಾನದ ಪೊಲೀಸ್ ಅಧಿಕಾರಿಯಾಗಿದ್ದಾರೆ.

ನಾವು ಹೇಳಿದಂತೆ ಹೇಳಿಕೆ ನೀಡದಿದ್ದರೆ ಪ್ರಕರಣದಲ್ಲಿ ಆರೋಪಿಯಾಗಿ ಪರಿಗಣಿಸುತ್ತೇವೆ ಎಂದು ಸಿಬಿಐ ಅಧಿಕಾರಿಗಳು ಬೆದರಿಕೆಯೊಡ್ಡಿದ್ದರು. ಪರಿಪರಿಯಾಗಿ ವಿನಂತಿಸಿದರೂ ಕೇಳದ ಅಧಿಕಾರಿಗಳು 2011ರ ಜುಲೈ 4ರಂದು ತಮ್ಮ ಮಗಳ ನಿಶ್ಚಿತಾರ್ಥದ ದಿನವೇ ಕರೆಸಿಕೊಂಡು ಹೇಳಿಕೆ ಪಡೆದುಕೊಂಡಿದ್ದರು. 2011ರ ಜುಲೈ 1ರಂದು ಸಮನ್ಸ್ ನೀಡಲಾಗಿತ್ತು ಎಂದು ಅವರು ಆರೋಪಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

‘ಬಂಧನದ ಭೀತಿ ಸೃಷ್ಟಿಸಿ ನನ್ನಿಂದ ಹೇಳಿಕೆ ಪಡೆದುಕೊಳ್ಳಲಾಯಿತು. ಸತ್ಯವಲ್ಲದ ವಿಚಾರವನ್ನು ನನ್ನ ಹೇಳಿಕೆಯಾಗಿ ದಾಖಲಿಸಿಕೊಳ್ಳಬಾರದು ಎಂದು ಮನವಿ ಮಾಡಿದೆ. ಅದನ್ನು ಕೇಳದ ಅವರು ಸುಳ್ಳು ಹೇಳಿಕೆಯನ್ನೇ ದಾಖಲಿಸಿಕೊಂಡಿದ್ದರು’ ಎಂದು ಸಾಕ್ಷಿಯು ಆರೋಪಿಸಿದ್ದಾರೆ.

ಅವರು ಹೇಳುವ ಪ್ರಕಾರ, ತುಳಸಿರಾಂ ಪ್ರಜಾಪತಿಯನ್ನು 2005ರ ನವೆಂಬರ್ 29ರಂದು ಬಂಧಿಸಲಾಗಿತ್ತು. ಆದರೆ, ಅದರ ಬದಲು 2005ರ ನವೆಂಬರ್ 26ರಂದೇ ಬಂಧಿಸಲಾಗಿದೆ ಎಂದು ಬಲವಂತದಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ, 2005ರ ನವೆಂಬರ್ 26ರಂದು (ಸೊಹ್ರಾಬುದ್ದೀನ್ ಎನ್‌ಕೌಂಟರ್‌ ನಡೆದ ಬಳಿಕ) ಆಗಿನ ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥ ಡಿ.ಜಿ.ವಂಜರಾ, ರಾಜಸ್ಥಾನದ ಆಗಿನ ಗೃಹ ಸಚಿವ ಗುಲಾಬ್ ಚಾಂದ್ ಕಟಾರಿಯಾ ಮತ್ತು ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಓಮ್ ಮಾಥುರ್‌ ಅವರು ಉದಯಪುರದ ಜಾಗ್ ಮಂದಿರ್‌ನಲ್ಲಿ ಸಭೆ ನಡೆಸಿದ್ದಾರೆ ಎಂದು ಹೇಳಿಕೆ ಪಡೆದುಕೊಳ್ಳಲಾಗಿತ್ತು. ಆದರೆ, ಅಂತಹದ್ದೊಂದು ಸಭೆ ನಡೆದೇ ಇಲ್ಲ.

‘ನಾನು ಡಿ.ಜಿ.ವಂಜರಾ ಅವರನ್ನು ಭೇಟಿಯಾಗಲೇ ಇಲ್ಲ. ಅವರನ್ನಾಗಲೀ ಯಾವುದೇ ರಾಜಕಾರಣಿಯನ್ನಾಗಲಿ ನಾನು ಜಾಗ್‌ ಮಂದಿರ್‌ನಲ್ಲಿ ಭೇಟಿಯಾಗಲೇ ಇಲ್ಲ’ ಎಂದು ಸಾಕ್ಷಿಯು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಕಾಲರ್ ಹಿಡಿದು ಬಂಧಿಸುವ ಬೆದರಿಕೆಯೊಡ್ಡಿದ್ದರು’: ‘ಸಿಬಿಐ ಅಧಿಕಾರಿಗಳು ಹೇಳಿಕೆಯೊಂದನ್ನು ತೋರಿಸಿ ನ್ಯಾಯಾಲಯದಲ್ಲಿ ಅದೇ ರೀತಿ ಹೇಳುವಂತೆ ಸೂಚಿಸಿದ್ದರು. ಅದರಲ್ಲಿದ್ದ ಸತ್ಯವಲ್ಲದ ಅಂಶಗಳನ್ನು ತೆಗದುಹಾಕುವಂತೆ ಮನವಿ ಮಾಡಿದೆ. ಅಷ್ಟರಲ್ಲಿ ಡಿಐಜಿ ಕಂದಸ್ವಾಮಿ ನನ್ನ ಕಾಲರ್ ಹಿಡಿದು ಬಂಧನದ ಬೆದರಿಕೆಯೊಡ್ಡಿದ್ದರು. ಅಲ್ಲದೆ, ಬಂಧಿಸಲು ಬೇಕಾಗಿರುವ ಕಾಗದಪತ್ರಗಳನ್ನು ಸಿದ್ಧಪಡಿಸಿಟ್ಟಿರುವುದಾಗಿಯೂ ಹೇಳಿದ್ದರು’ ಎಂದು ಸಾಕ್ಷಿಯು ನ್ಯಾಯಾಲಯಕ್ಕೆ ತಿಳಿಸಿರುವುದನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಉಲ್ಲೇಖಿಸಿದೆ.

ಹೇಳಿಕೆಗೇಕೆ ಮಹತ್ವ?: ಸಿಬಿಐ ಪ್ರಕಾರ ತುಳಸಿರಾಂ ಪ್ರಜಾಪತಿಯನ್ನು 2005ರ ನವೆಂಬರ್ 26ರಂದು (ಸೊಹ್ರಾಬುದ್ದೀನ್ ಎನ್‌ಕೌಂಟರ್ ನಡೆದ ದಿನ) ಬಂಧಿಸಲಾಗಿದೆ. ಪ್ರಜಾಪತಿಗೆ ಸೊಹ್ರಾಬುದ್ದೀನ್ ನಂಟಿದೆ ಎಂದು ಸಿಬಿಐ ಹೇಳುತ್ತಿದೆ. ಸೊಹ್ರಾಬುದ್ದೀನ್‌ ಪ್ರಕರಣಕ್ಕೆ ಸೇರಿದ ಸಾಕ್ಷಿಗಳು ನೀಡಿದ ಹೇಳಿಕೆ ಆಧರಿಸಿ ರಾಜಸ್ಥಾನ ಪೊಲೀಸರೊಬ್ಬರು ನೀಡಿದ ಸುಳಿವಿನ ಮೇರೆಗೆ ಅದೇ ದಿನ ತುಳಸಿರಾಂ ಅನ್ನು ಬಂಧಿಸಲಾಗಿದೆ. ಆದರೆ ಪ್ರಕರಣದ ಸಾಕ್ಷಿಯಾಗಿರುವ ಅಧಿಕಾರಿ ಹೇಳುವ ಪ್ರಕಾರ, ಭಿಲ್‌ವಾರಾದಲ್ಲಿ ಪ್ರಜಾಪತಿ ಇರುವ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ನೀಡಿದ ಸುಳಿವಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT