ಶನಿವಾರ, ಆಗಸ್ಟ್ 20, 2022
21 °C
ಹುಬ್ಬಳ್ಳಿಗೆ ಮರಳಿದ ಪುಟ್ಟ ರೈಲು; ಚುನಾವಣೆ ನಂತರ ಚಾಲನೆ; ಪರಿಹಾರ ಕಾಣದ ಭೂಸ್ವಾಧೀನ

ರೇಲ್‌ಬಸ್‌ಗೂ ತಟ್ಟಿದ ನೀತಿಸಂಹಿತೆ ಬಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಲ್‌ಬಸ್‌ಗೂ ತಟ್ಟಿದ ನೀತಿಸಂಹಿತೆ ಬಿಸಿ!

ಬಾಗಲಕೋಟೆ: ಹೊಸದಾಗಿ ಸಿದ್ಧವಾಗಿರುವ ಬಾಗಲಕೋಟೆ–ಖಜ್ಜಿಡೋಣಿ ನಡುವಿನ ಮಾರ್ಗದಲ್ಲಿ ಓಡಾಟಕ್ಕೆ ಬಂದಿದ್ದ ರೇಲ್‌್ ಬಸ್‌ಗೆ ಚುನಾವಣೆ ನೀತಿ–ಸಂಹಿತೆಯ ಬಿಸಿ ತಾಗಿದೆ.ಬಾಗಲಕೋಟೆ–ಕುಡಚಿ ಹೊಸ ರೈಲು ಮಾರ್ಗದಲ್ಲಿ ಈಗ ಖಜ್ಜಿಡೋಣಿವರೆಗೆ ಹಳಿ ಸಿದ್ಧವಾಗಿದೆ. ಅಲ್ಲಿ ಓಡಾಟಕ್ಕೆ ನೈರುತ್ಯ ರೈಲ್ವೆ ರೇಲ್‌ಬಸ್ ಸಜ್ಜುಗೊಳಿಸಿತ್ತು. 70 ಆಸನಗಳ ಈ ಹಳಿ ಮೇಲಿನ ಬಸ್ಸನ್ನು ಚೆನ್ನೈನಿಂದ ಬಾಗಲಕೋಟೆಗೆ ತರಲಾಗಿತ್ತು.

ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ರೇಸ್ ಬಸ್ ಓಡಾಟ ಹಾಗೂ ಬಾಗಲಕೊಟೆ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಬಳಕೆಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಬೇಕಿತ್ತು. ಅದಕ್ಕೆ ಅಧಿಕಾರಿಗಳು ಸಿದ್ಧತೆ ಕೂಡ ನಡೆಸಿದ್ದರು. ಆದರೆ ಚುನಾವಣೆ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚಾಲನಾ ಸಮಾರಂಭ ಮುಂದೂಡಲಾಗಿದೆ. ಹಾಗಾಗಿ ರೇಲ್‌ ಬಸ್ ಹುಬ್ಬಳ್ಳಿಗೆ ಹಿಂತಿರುಗಿದೆ.

ಹಸಿರು ನಿಶಾನೆ: ಬಾಗಲಕೋಟೆ–ಕುಡಚಿ ನಡುವಿನ ನೂತನ ರೈಲು ಮಾರ್ಗದಲ್ಲಿ ಈಗ ಸಿದ್ಧಗೊಂಡಿರುವ ಖಜ್ಜಿಡೋಣಿವರೆಗಿನ ಹಳಿಯ ಮೇಲೆ ಆರು ತಿಂಗಳ ಹಿಂದೆಯೇ ರೈಲು ಓಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿರುವ ರೈಲ್ವೆ ಸುರಕ್ಷಾ ಆಯುಕ್ತರು ಈಗಾಗಲೇ ಅನುಮತಿ ನೀಡಿದ್ದಾರೆ. ಹಾಗಾಗಿ ಇಲಾಖೆಯೂ ರೇಲ್‌ ಬಸ್ ಸಿದ್ಧತೆ ಮಾಡಿಕೊಂಡಿದೆ.ದಿನಕ್ಕೆ ಎರಡು ಬಾರಿ ಓಡಾಟ ನಡೆಸಲಿರುವ ಈ ಪುಟ್ಟ ರೈಲು ಸ್ಥಳೀಯರ ಅಗತ್ಯ ಪೂರೈಸಲಿದೆ.

ಐದು ನಿಲ್ದಾಣಗಳು ಸಿದ್ಧ: ಖಜ್ಜಿಡೋಣಿವರೆಗಿನ ಮಾರ್ಗದಲ್ಲಿ ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಶೆಲ್ಲಿಕೇರಿ ಹಾಗೂ ಖಜ್ಜಿಡೋಣಿ ರೈಲು ನಿಲ್ದಾಣಗಳು ಸಿದ್ಧಗೊಂಡಿವೆ.ಪರಿಹಾರ ಕಾಣದ ಭೂಸ್ವಾಧೀನ ಸಮಸ್ಯೆ: ಬಾಗಲಕೋಟೆ–ಕುಡಚಿ ನಡುವೆ ರೈಲ್ವೆ ಇಲಾಖೆ ₹800 ಕೋಟಿ ವೆಚ್ಚದಲ್ಲಿ 180 ಕಿ.ಮೀ ಹೊಸ ಮಾರ್ಗ ನಿರ್ಮಾಣ ಮಾಡುತ್ತಿದೆ. ಜಮಖಂಡಿ ಉಪವಿಭಾಗದಲ್ಲಿ ಕೆಲವು ಕಡೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ಹಳಿ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಹಾಗಾಗಿ ಈಗ ಸಿದ್ಧವಿರುವ ಕಡೆಯೇ ಸಾರ್ವಜನಿಕರಿಗೆ ಸೇವೆ ಕಲ್ಪಿಸಲು ರೇಲ್‌ಬಸ್ ಪರಿಚಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಸಾಮಾನ್ಯ ಬಸ್‌ಗಳಲ್ಲಿನ ವ್ಯವಸ್ಥೆಯ ರೀತಿಯಲ್ಲಿಯೇ ರೇಲ್‌ಬಸ್‌ನಲ್ಲಿ ಮುಂದಿನ ಆಸನದಲ್ಲಿ ಚಾಲಕ ಕುಳಿತುಕೊಳ್ಳಲಿದ್ದು, ಹಿಂದಿನ ಆಸನಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬಹುದು.

**

ಬಾಗಲಕೋಟೆಯಿಂದ 30 ಕಿ.ಮೀ ವ್ಯಾಪ್ತಿಯಲ್ಲಿ ರೇಲ್‌ ಬಸ್ ಓಡಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀತಿ ಸಂಹಿತೆ ಮುಗಿದ ಮೇಲೆ ಚಾಲನೆ ನೀಡಲಾಗುವುದು ಇ.ವಿಜಯಾ,ಹುಬ್ಬಳ್ಳಿ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ.

**

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.