ಗುರುವಾರ , ಆಗಸ್ಟ್ 13, 2020
21 °C
ಜಿಲ್ಲಾಡಳಿತದಿಂದ ಬಾಬು ಜಗಜೀವನರಾಂ ಜಯಂತಿ ಆಚರಣೆ: ಜಿ.ಪಂ ಸಿಇಒ ಅಭಿಮತ

ಕೃಷಿ ಕ್ರಾಂತಿ ಮಾಡಿದ ಧೀಮಂತ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಕ್ರಾಂತಿ ಮಾಡಿದ ಧೀಮಂತ ನಾಯಕ

ಬೆಳಗಾವಿ: ‘ಉಪ ಪ್ರಧಾನಿಯಾಗಿದ್ದ ಬಾಬು ಜಗಜೀವನರಾಂ ಕೃಷಿಯಲ್ಲಿ ವಿವಿಧ ಬದಲಾವಣೆ ತಂದು ಹಸಿರು ಕ್ರಾಂತಿ ಮಾಡಿದ್ದರು. ಆಹಾರದ ಕೊರತೆ

ಸಮಸ್ಯೆ ಹೋಗಲಾಡಿಸಲು ಶ್ರಮಿಸಿದರು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್‌.ರಾಮಚಂದ್ರನ್‌ ಸ್ಮರಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಾಲಿಕೆ ಹಾಗೂ ಸಮಾಜಕಲ್ಯಾಣ ಇಲಾಖೆಯಿಂದ ಇಲ್ಲಿನ ಎಪಿಎಂಸಿ ರಸ್ತೆಯ ಜಗಜೀವನರಾಂ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಬಾಬು ಜಗಜೀವನ ರಾಂ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಹೆಚ್ಚು ಸಾವಯುವ ಧಾನ್ಯಗಳನ್ನು ಬಳಸಿ ಸಾವಯವ ಕ್ರಾಂತಿ ಮಾಡಬೇಕಾಗಿದೆ’ ಎಂದು ಹೇಳಿದರು. ‘ಕಲಬೆರಕೆ ಆಹಾರ ಸೇವನೆಯಿಂದ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗಿದೆ. ಸಾವಯವ ಕೃಷಿಯಿಂದ ಬೆಳೆದ ಧಾನ್ಯಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯ ಕಂಡುಕೊಳ್ಳಲು ಸಾಧ್ಯವಿದೆ’ ಎಂದು ತಿಳಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಚಂದ್ರಕಾಂತ ವಾಘಮೋರೆ, ‘ದೇಶದ ಅಗ್ರಗಣ್ಯ ನಾಯಕ ಜಗಜೀವನರಾಂ ದೇಶದ ಏಳಿಗೆಗಾಗಿ 40 ವರ್ಷ ಸೇವೆ ಸಲ್ಲಿಸಿದರು. ಶ್ರೇಷ್ಠ ಪ್ರಜಾಪ್ರಭುತ್ವವಾದಿ ಎನಿಸಿದರು. ಅವರು ಆಧುನಿಕ ಭಾರತದ ಶಿಲ್ಪಿ’ ಎಂದು ಬಣ್ಣಿಸಿದರು.

ಕೆಳ ವರ್ಗದವರೆಂದು ಸಿಗಲಿಲ್ಲ: ‘ಅಂಬೇಡ್ಕರ್ ಮತ್ತು ಬಾಬೂಜಿ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ, ಅವರಿಬ್ಬರನ್ನು ಒಂದೇ ದೃಷ್ಟಿಯಿಂದ ನೋಡಬೇಕು. ಪ್ರಧಾನಿ ಆಗುವ ಎಲ್ಲ ಅರ್ಹತೆಯನ್ನೂ ಬಾಬೂಜಿ ಹೊಂದಿದ್ದರು. ಆದರೆ, ಕೆಳ ವರ್ಗದಲ್ಲಿ ಜನಿಸಿದರು ಎಂಬ ಕಾರಣದಿಂದ ಉಪಪ್ರಧಾನಿ ಹುದ್ದೆಗಷ್ಟೇ ತೃಪ್ತಿಪಡಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.‌

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತ ಕೃಷ್ಣಗೌಡ ತಾಯಣ್ಣವರ, ಡಿಸಿಪಿ ಮಹಾನಿಂಗ ನಂದಗಾಂವಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಎಸ್‌.ಟಿ.ಪಡಗಣ್ಣವರ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಉಮಾ ಸಾಲಿಗೌಡರ ಇದ್ದರು.

ಇದಕ್ಕೂ ಮುನ್ನ, ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಉದ್ಯಾನದವರೆಗೆ ಜಗಜೀವನರಾಂ ಭಾವಚಿತ್ರದ ಮೆರವಣಿಗೆ ನಡೆಯಿತು. ಕಲಾತಂಡಗಳು ಮೆರುಗು ನೀಡಿದವು.

ಬೆಟಗೇರಿ ಗ್ರಾ.ಪಂ.ನಲ್ಲಿ ಆಚರಣೆ

ಬೆಟಗೇರಿ: ಇಲ್ಲಿನ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾನಸಿ, ಮೆಳೆಪ್ಪ ಹರಿಜನ, ರಾಮಣ್ಣ ದಂಡಿನ ಇದ್ದರು.

ಬಿಸಿಎಂ ಹಾಸ್ಟೇಲ್: ಗ್ರಾಮದ ಬಿಸಿಎಂ ಹಾಸ್ಟೇಲ್‌ನಲ್ಲಿ ಜಗಜೀವನರಾಂ ಭಾವಚಿತ್ರಕ್ಕೆ ಪೂಜೆಸಲ್ಲಿಸಲಾಯಿತು. ಮುಖ್ಯಶಿಕ್ಷಕರಮೇಶ ಅಳಗುಂಡಿ, ಮೇಲ್ವಿಚಾರಕಬಾಲಪ್ಪ ಮಾಲದಿನ್ನಿ ಇದ್ದರು.

‘ಅಪರೂಪದ ತ್ಯಾಗಜೀವಿ’

ಬೆಟಗೇರಿ: ಡಾ.ಬಾಬು ಜಗಜೀವನರಾಂ ಅವರು ದೇಶ ಕಂಡ ಮಹಾನ್ ನಾಯಕರು. ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ತ್ಯಾಗಜೀವಿ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.ಗೋಕಾಕ ತಾಲ್ಲೂಕು ಬೆಟಗೇರಿಯ ವಿ.ವಿ. ದೇಯಣ್ಣವರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಡಾ. ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಗಜೀವನರಾಂ ಅವರು ದೇಶದ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದರು. ರಮೇಶ ಬುದ್ನಿ ಮಾತನಾಡಿದರು.

ಮಂಜುನಾಥ ಹತ್ತಿ, ರಾಕೇಶ ನಡೋಣಿ, ವಿ.ಬಿ.ಬಿರಾದರ, ಎಂ.ಎಸ್.ಹಿರೇಮಠ, ಮೋಹನ ತುಪ್ಪದ, ಎ.ಬಿ.ತಾಂವಶಿ, ಜಯಶ್ರೀ ಇಟ್ನಾಳ, ಶುಭಾ ಬಿ. ಈ ಸಂದರ್ಭದಲ್ಲಿ ಇದ್ದರು.

**

ಬಾಬೂಜಿ ಸಮಾಜದಲ್ಲಿ ಸಮಾನತೆ ತರಲು ಜೀವನವನ್ನೇ ಮುಡಿಪಾಗಿಟ್ಟರು. ಅವರು ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲರ ಪ್ರಗತಿಗೆ ಶ್ರಮಿಸಿದರು – ಚಂದ್ರಕಾಂತ ವಾಘಮೋರೆ, ಪ್ರಾಧ್ಯಾಪಕ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.