ಖಾಲಿ ‘ಬಿ’ ಫಾರಂ ವಿಮಾನದಲ್ಲಿ ತರಿಸಿದ್ದ ಕತೆ!

7
2004ರಲ್ಲಿ ನಡೆದ ಘಟನೆಯ ಮೆಲುಕು ಹಾಕಿದ ಕನ್ನಡ ಹೋರಾಟಗಾರ ಅಶೋಕ ಚಂದರಗಿ

ಖಾಲಿ ‘ಬಿ’ ಫಾರಂ ವಿಮಾನದಲ್ಲಿ ತರಿಸಿದ್ದ ಕತೆ!

Published:
Updated:

ಬೆಳಗಾವಿ: ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿ ಅವರ ಕೈಗೆ ‘ಬಿ’ ಫಾರಂ ಬರುವುದು ಬಾಕಿ ಇದೆ. ಪಟ್ಟಿ ಬಿಡುಗಡೆಯಾದರಷ್ಟೇ ಸಾಲದು. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ವೇಳೆಗೆ ಅವರಿಗೆ ‘ಬಿ’ ಫಾರಂ ಕೂಡ ತಲುಪಿರಬೇಕು. ಪಟ್ಟಿ ಪ್ರಕಟವಾದ ನಂತರವೂ ಬೇರೆಯವರು ಕೊನೆ ಗಳಿಗೆಯಲ್ಲಿ ಗಳಿಸಿಕೊಂಡ ಉದಾಹರಣೆಗಳೂ ಇವೆ. ಹೀಗೆ ಅತ್ಯಂತ ಮಹತ್ವವಾದ ‘ಬಿ’ ಫಾರಂ ತರಿಸಲು ನಡೆಸಿದ ಪ್ರಯತ್ನದ ರೋಚಕ ಘಟನೆಯನ್ನು ಕನ್ನಡ ಹೋರಾಟಗಾರ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೆನಪಿಸಿಕೊಂಡಿದ್ದಾರೆ. 2004ರ ವಿಧಾನಸಭೆ ಚುನಾವಣೆಯಲ್ಲಿ ನಡೆದ ಪ್ರಸಂಗವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಅದನ್ನು ಅವರ ಮಾತಲ್ಲೇ ಕೇಳಿ...

ಜನತಾದಳದಲ್ಲಿ ಈ ಭಾಗದ ಬಸವರಾಜ ಬೊಮ್ಮಾಯಿ, ಎಂ.ಪಿ. ನಾಡಗೌಡ, ಬಸವರಾಜ ಹೊರಟ್ಟಿ ಮೊದಲಾದ ನಾಯಕರಷ್ಟೇ ಉಳಿದಿ

ದ್ದರು. ನಾನು, ಕಲ್ಲೊಳ್ಳಿ ಬಸಗೌಡ ಪಾಟೀಲ, ಸುನಂದಾ ಪಾಟೀಲ, ವಸಂತ ಕುಲಕರ್ಣಿಯೂ ಇದ್ದೆವು. ಜನತಾದಳ ಮತ್ತು ಬಿಜೆಪಿ ಮಧ್ಯೆ ಚುನಾವಣೆ ಮೈತ್ರಿ ಆಗಿತ್ತು. ರಾಜ್ಯದಲ್ಲಿ ಒಟ್ಟು 25 ಸ್ಥಾನಗಳನ್ನು ಜನತಾದಳಕ್ಕೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ರಾಯಬಾಗ ಮತ್ತು ಖಾನಾಪುರ ಕ್ಷೇತ್ರಗಳನ್ನು ಬಿಟ್ಟು ಕೊಡಲಾಗಿತ್ತು.

ಈ ಎರಡು ಸ್ಥಾನಗಳ ಟಿಕೆಟ್ ಯಾರಿಗೆ ನೀಡಬೇಕೆಂಬ ಬಗ್ಗೆ ನಮ್ಮ ಜಿಲ್ಲಾ ಘಟಕ ಮತ್ತು ರಾಜ್ಯ ಘಟಕದ ಮಧ್ಯೆ ಭಿನ್ನಾಭಿಪ್ರಾಯ ಬಂದಿತು. ರಾಯಬಾಗಕ್ಕೆ ಬಲಾಢ್ಯ ನಾಯಕರು ಹೇಳಿದ ಹೆಸರೇ ಬೇರೆ. ನಾವು ಶಿಫಾರಸು ಮಾಡಿದ್ದ ಹೆಸರೇ ಬೇರೆಯಾಗಿತ್ತು. ಆಗ ತಿಕ್ಕಾಟ ನಡೆಯಿತು. ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮತ್ತು ಇತರ ಬಲಾಢ್ಯರು ಸೇರಿ ಬೊಮ್ಮಾಯಿ, ನಾಡಗೌಡರ ಮೇಲೆ ತೀವ್ರ ಒತ್ತಡ ತಂದರು. ನಾವು ನಮ್ಮ ನಿಲುವಿಗೆ ಅಂಟಿಕೊಂಡೆವು.

ಕೊನೆಗೆ ಯಾರ ಹೆಸರನ್ನೂ ಬರೆಯದ ಖಾಲಿ ‘ಬಿ‘ ಫಾರಂ ಕಳುಹಿಸಲು ಬೊಮ್ಮಾಯಿ, ನಾಡಗೌಡರು ತೀರ್ಮಾನಿಸಿದರು. ‘ಈ ಫಾರಂನಲ್ಲಿ ಯಾವ ಹೆಸರು ಬರೆಯಬೇಕೋ ನೀವೇ ಅಲ್ಲಿಯೇ ತೀರ್ಮಾನಿಸಿ ಹೆಸರು ಬರೆದುಕೊಳ್ಳಿ’ ಎಂದು ಹೇಳಿ ಜಾರಿಕೊಂಡರು.ಈಗ ಜೆಡಿಎಸ್‌ನಲ್ಲಿರುವ ಮಿತ್ರ ಶಿವಪ್ಪ ಶಮರಂತ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದೆವು. ಇತ್ತ ಖಾಲಿ ‘ಬಿ’ ಫಾರಂ ಬರುವುದನ್ನು ಕಾಯುತ್ತಾ ರಾಯಬಾಗದ ಕೆಲವರು ಓಡಾಡತೊಡಗಿದ್ದರು. ಶಿವಪ್ಪ ಅವರ ಕೈಗೆ ಖಾಲಿ ‘ಬಿ’ ಫಾರಂ ಕೊಟ್ಟ ಬೊಮ್ಮಾಯಿ ಅವರು, ಕಾರನ್ನು ಸ್ವತಃ ಡ್ರೈವ್ ಮಾಡುತ್ತಾ ಬೆಂಗಳೂರು ವಿಮಾನನಿಲ್ದಾಣಕ್ಕೆ ಡ್ರಾಪ್‌ ಮಾಡಿದ್ದರು; ಬೆಳಗಾವಿ ವಿಮಾನವನ್ನೂ ಹತ್ತಿಸಿದ್ದರು. ಇತ್ತ ಹಿಂದಿನ ರಾತ್ರಿ 12ಕ್ಕೆ ನನಗೆ ಕರೆ ಮಾಡಿ, ನಾಳೆ ‘ಬಿ’ ಫಾರಂ ಹೇಗೆ ಬರುತ್ತವೆ ಎಂದು ಕೇಳಿದ್ದರು! ನನಗೆ ಅವರ ಮಾತಿನ ಹಿಂದಿನ ಉದ್ದೇಶ ತಿಳಿಯಿತು. ಹುಬ್ಬಳ್ಳಿಗೆ ವಿಮಾನದ ಮೂಲಕ ಬರುತ್ತವೆ ಎಂದು ನಾನು ಹೇಳಿದ್ದೆ!

ಇತ್ತ ಬೆಳಗಾವಿ ವಿಮಾನನಿಲ್ದಾಣಕ್ಕೆ ನಾನು, ಕಲ್ಲೊಳ್ಳಿ ಬಸಗೌಡ ಮತ್ತಿತರರು ಕಾರಿನಲ್ಲಿ ಹೋದೆವು. ವಿಮಾನ ಇಳಿದು ಹೊರಗೆ ಬಂದ ಶಿವಪ್ಪ ಅವರು ತರಕಾರಿ ತರುವಂತಹ ಚೀಲದಲ್ಲಿ ‘ಬಿ’ ಫಾರಂ ತಂದರು.ಅವರಿಗೆ ನಮ್ಮ ಕಾರಿನಲ್ಲಿ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದೆ. ನಾವೆಲ್ಲರೂ ಬೆಳಗಾವಿಯ ಒಬ್ಬರ ನಿವಾಸ ತಲುಪಿ ನಿಟ್ಟುಸಿರುಬಿಟ್ಟೆವು.

ಫಾರಂ ತರಲು ರಾಯಬಾಗದ ನಮ್ಮ ಪಕ್ಷದ ಕಾರ್ಯಕರ್ತರು ಬಂದರು. ಅವರ ಕೈಗೆ ಕೊಟ್ಟರೂ ಅವರು ರಾಯಬಾಗಕ್ಕೆ ಹೋಗದೇ ಬೆಳಗಾವಿ ಸಮೀಪದ ಹಳ್ಳಿಯೊಂದರಲ್ಲಿ ಬೀಡುಬಿಟ್ಟರು. ರಾತ್ರಿ 2 ಗಂಟೆಯಾದರೂ ತಮ್ಮ ಕೈಗೆ ‘ಬಿ’ ಫಾರಂ ಸಿಗದಿದ್ದಾಗ ನಮ್ಮ ಅಭ್ಯರ್ಥಿ ಭೀಮಪ್ಪ ಸರಿಕರ ಕಂಗಾಲಾಗಿದ್ದರು. ಅವರಿಗೆ ಎಲ್ಲವನ್ನೂ ವಿವರಿಸಿದೆ. ನಮ್ಮ ತಂಡದವರು ಮರುದಿನ ಮುಂಜಾನೆ ಮೂರಕ್ಕೆ ಸರಿಕರ ಕೈಗೆ ‘ಬಿ’ ಫಾರಂ ತಲುಪಿಸಿದ್ದರು. ನನಗೆ ಅವರಿಂದ ಮತ್ತೆ ಫೋನ್ ಬಂದಿತು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ.ಸರಿಕರ ಅವರನ್ನು ವಿರೋಧಿಸುತ್ತಿದ್ದವರಿಗೆ ಬೆಳಿಗ್ಗೆ 6ಕ್ಕೆ ಫೋನ್ ಮಾಡಿ, ರಾಜಕೀಯ ಅನಿವಾರ್ಯತೆಯನ್ನು ವಿವರಿಸಿದೆ. ಅವರೂ ಸರಿಕರ ಅವರನ್ನೇ ಬೆಂಬಲಿಸಲು ತೀರ್ಮಾನಿಸಿದರು. ತಮ್ಮ ಅಭ್ಯರ್ಥಿಯನ್ನು ಕೈಬಿಟ್ಟರು. ಎಲ್ಲರೂ ಸೇರಿಯೇ ಚುನಾವಣೆ ಎದುರಿಸಿದರು. ಸರಿಕರ 11ಸಾವಿರ ಮತಗಳಿಂದ ಆಯ್ಕೆಯಾದರು ಎಂದು ನೆನಪಿಸಿಕೊಂಡಿದ್ದಾರೆ.

**

ಯಾವುದೇ ಪಕ್ಷದ ಅಭ್ಯರ್ಥಿ ಇರಲಿ ‘ಬಿ‘ ಫಾರಂ ಕೈಗೆ ಬರುವವರೆಗೂ ಟಿಕೆಟ್ ಖಚಿತವಿಲ್ಲ – ಅಶೋಕ ಚಂದರಗಿ, ಕನ್ನಡ ಹೋರಾಟಗಾರ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry