ಹೆಸರು ಅಂತಿಮವಿಲ್ಲ: ಪ್ರಚಾರ ನಿಂತಿಲ್ಲ!

7
ಬಿಜೆಪಿ ಆಕಾಂಕ್ಷಿಗಳ ಪಟ್ಟಿ ವರಿಷ್ಠರಿಗೆ ಸಲ್ಲಿಕೆ: ಶ್ರೀರಾಮುಲು

ಹೆಸರು ಅಂತಿಮವಿಲ್ಲ: ಪ್ರಚಾರ ನಿಂತಿಲ್ಲ!

Published:
Updated:
ಹೆಸರು ಅಂತಿಮವಿಲ್ಲ: ಪ್ರಚಾರ ನಿಂತಿಲ್ಲ!

ಬಳ್ಳಾರಿ: ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಮುನ್ನವೇ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ.‘ನಗರ ಕ್ಷೇತ್ರದಲ್ಲಿ ಸೋಮಶೇಖರ ರೆಡ್ಡಿ ಅವರನ್ನು ಗೆಲ್ಲಿಸಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಿಂದಿನ ವರ್ಷ ಇಲ್ಲಿ ನಡೆದಿದ್ದ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ರೆಡ್ಡಿ ನಗರದ ವಿವಿಧ ವಾರ್ಡ್‌ಗಳಲ್ಲಿ ಬೆಂಬಲಿಗರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.ಸಾರ್ವಜನಿಕರು ಅವರಿಗೆ ತಮ್ಮ ಪ್ರದೇಶದ ಸಮಸ್ಯೆಗಳ ಕುರಿತು ಗಮನ ಸೆಳೆಯುತ್ತಿದ್ದಾರೆ. ಆಯ್ಕೆಯಾದರೆ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನೂ ಅವರು ನೀಡುತ್ತಿದ್ದಾರೆ.

‘ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಣ್ಣ ಪಕ್ಕೀರಪ್ಪ ನಿಯೋಜಿತ ಅಭ್ಯರ್ಥಿ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ಸಂಸದ .ಶ್ರೀರಾಮುಲು ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನೂ ನಡೆಸಿದ್ದಾರೆ. ಆದರೆ ಸೋಮಶೇಖರರೆಡ್ಡಿ ಅವರೊಂದಿಗೆ ರಾಮುಲು ಇದುವರೆಗೂ ನಗರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.

ಪಟ್ಟಿ ಸಲ್ಲಿಕೆ: ಬೆಂಗಳೂರಿನಲ್ಲಿ ಬುಧವಾರ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯ ಕುರಿತು ಗುರುವಾರ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ‘ಜಿಲ್ಲೆಯಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅವರೆಲ್ಲರ ಹೆಸರನ್ನೂ ವರಿಷ್ಠರಿಗೆ ನೀಡಲಾಗಿದೆ. ಯಾರಿಗೆ ಪಕ್ಷ ಟಿಕೆಟ್‌ ನೀಡುತ್ತದೋ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ’ ಎಂದರು.

ಆಂತರಿಕ ವಿಚಾರ: ‘ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನನ್ನ ಸ್ಪಷ್ಟ ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸಿರುವೆ. ಅದು ಆಂತರಿಕ ವಿಚಾರ. ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ’ ಎಂದರು.

ಶ್ರೀರಾಮುಲು ಸ್ಪರ್ಧೆ?

ಸಣ್ಣ ಪಕ್ಕೀರಪ್ಪ ನಿಯೋಜಿತ ಅಭ್ಯರ್ಥಿ ಎಂದು ರಾಮುಲು ಘೋಷಿಸಿದ್ದರೂ, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆ ಈಗಲೂ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಆ ಕ್ಷೇತ್ರದಲ್ಲಿ ಶ್ರೀರಾಮುಲು ಅವರೇ ಸ್ಪರ್ಧಿಸಬಹುದು ಎಂಬ ವಂದತಿಯೂ ಇದೆ.ಈ ಬಗ್ಗೆಯೂ ಮಾತನಾಡಿದ ಅವರು, ‘ರಾಯಚೂರು, ಬಳ್ಳಾರಿ, ಚಿತ್ರದುರ್ಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರಗಳಿವೆ. ಇಲ್ಲೆಲ್ಲ ನಾನು ಸ್ಪರ್ಧಿಸಬೇಕು ಎಂದು ಬಯಸುವವರೂ ಪಕ್ಷದಲ್ಲಿದ್ದಾರೆ. ಪಕ್ಷದ ವರಿಷ್ಠರ ಸೂಚನೆಯನ್ನು ಕಾದುನೋಡಬೇಕು’ ಎಂದರು.

**

ಜಿಲ್ಲೆಯ ಆಕಾಂಕ್ಷಿಗಳ ಪಟ್ಟಿಯನ್ನು, ಅದರೊಂದಿಗೆ ನನ್ನ ಅಭಿಪ್ರಾಯವನ್ನೂ ಪಕ್ಷದ ವರಿಷ್ಠರಿಗೆ ತಿಳಿಸಿರುವೆ – ಬಿ.ಶ್ರೀರಾಮುಲು, ಸಂಸದ.

**

ವದಂತಿಗಳಿಗೆ ನಾನು ಕಿವಿಗೊಡುವುದಿಲ್ಲ. ಆದರೆ ಪಕ್ಷದ ವರಿಷ್ಠರ ಆದೇಶಕ್ಕೆ ತಲೆಬಾಗುವೆ – ಜಿ.ಸೋಮಶೇಖ ರೆಡ್ಡಿ, ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry