4
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ರಾಮಸಮುದ್ರದ ಯುವಕ

ಕರಾಟೆಯಲ್ಲಿ ಎತ್ತಿದ ಕೈ, ಸಂಗೀತ-, ನೃತ್ಯಕ್ಕೂ ಸೈ

Published:
Updated:
ಕರಾಟೆಯಲ್ಲಿ ಎತ್ತಿದ ಕೈ, ಸಂಗೀತ-, ನೃತ್ಯಕ್ಕೂ ಸೈ

ಚಾಮರಾಜನಗರ: ಇಲ್ಲೊಬ್ಬ ಯುವಕ ವೇದಿಕೆಯ ಮೇಲೆ ನಿಂತರೆ ಪ್ರೇಕ್ಷಕರನ್ನು ಬೆರಗುಳಿಸುವಂತೆ ನೃತ್ಯ ಮಾಡುತ್ತಾನೆ. ಮೈಕ್‌ ಹಿಡಿದರೆ ಸುಶ್ರಾವ್ಯವಾಗಿ ಹಾಡುತ್ತಾನೆ. ಎದುರಾಳಿಯ ದಾಳಿಗೆ ನಿಂತರೆ ಕರಾಟೆ ಸಾಮರ್ಥ್ಯ ತೋರಿಸುತ್ತಾನೆ. ಈ ಯುವ ಪ್ರತಿಭೆಯೇ ಭರತ್.ರಾಮಸಮುದ್ರ ಬಡಾವಣೆಯ ನಿವಾಸಿ ಮಹದೇವಯ್ಯ ಹಾಗೂ ಸಾಕಮ್ಮ ದಂಪತಿಯ ಪುತ್ರ ಈತ. ಪ್ರಸ್ತುತ ನಗರದ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವಿದ್ಯಾರ್ಥಿ. ಕರಾಟೆ, ನೃತ್ಯ, ಸಂಗೀತ ಸೇರಿದಂತೆ ಇತರೆ ಕ್ರೀಡಾ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾನೆ ಈ ಯುವಕ.

3 ವರ್ಷಗಳಿಂದ ಕರಾಟೆ ಕಲಿಕೆ ಆರಂಭಿಸಿರುವ ಈತ ವೈಟ್‌, ಯಲ್ಲೊ, ಆರೆಂಜ್‌, ಗ್ರೀನ್‌ ಬೆಲ್ಟ್‌ ಪೂರ್ಣಗೊಳಿಸಿ ಬ್ಲೂ ಬೆಲ್ಟ್‌ ಹೊಂದಿದ್ದು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಅಂತರ ಕಾಲೇಜು ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಪ್ರಶಸ್ತಿ ಪಡೆದಿದ್ದಾನೆ.

‘ನಮ್ಮದು ಬಡ ಕುಟುಂಬ, ನನ್ನ ತಂದೆ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇದರಿಂದ ಕುಟುಂಬ ನಿರ್ವಹಣೆಯಾಗುತ್ತಿದೆ. ನನ್ನ ವಿದ್ಯಾಭ್ಯಾಸ ಹಾಗೂ ಕರಾಟೆ ಕಲಿಕೆ ವೆಚ್ಚವನ್ನು ರಜಾ ದಿನಗಳಲ್ಲಿ ಕೂಲಿ ಕೆಲಸ ಮಾಡಿ ಸರಿದೂಗಿಸಿಕೊಳ್ಳುತ್ತಿದ್ದೇನೆ’ ಎಂದು ಕರಾಟೆಪಟು ಭರತ್‌ ಹೇಳಿದರು.

‘ಕರಾಟೆ ಕಲಿಯಬೇಕು ಎನ್ನುವುದು ನನ್ನ ಬಾಲ್ಯದ ಕನಸು. ಇದಕ್ಕೆ ನಾಗಾ ಮಾರ್ಷಲ್‌ ಆರ್ಟ್‌ ಅಕಾಡೆಮಿಯ ತರಬೇತುದಾರ ಹಾಗೂ ವಕೀಲರಾದ ಎಂ.ರಾಜೇಂದ್ರ ಹಾಗೂ ಸ್ನೇಹಿತರು, ಕುಟುಂಬದವರು ಹೆಚ್ಚು ಪೋತ್ಸಾಹ ನೀಡುತ್ತಿದ್ದಾರೆ. ಮೈಸೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ’ ಎಂದು ಮನದಾಳದ ಮಾತನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಪ್ರತಿಭೆಗಳನ್ನು ಪ್ರೋತ್ಸಾಹಿಸಿ: ‘ಜಿಲ್ಲೆಯಲ್ಲಿ ಯುವ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಅವರಿಗೆ ಸರಿಯಾದ ಪ್ರೋತ್ಸಾಹ ದೊರೆಯುತ್ತಿಲ್ಲ. ಬಡ ಪ್ರತಿಭಾವಂತ ಯುವಕರು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅರ್ಹತೆ ಇದ್ದರೂ ಅವರಿಗೆ ನೆರವು ನೀಡುವವರು ಇಲ್ಲದೆ ವಂಚಿತರಾಗುತ್ತಿದ್ದಾರೆ. ಜಿಲ್ಲೆಯ ಜನರು ಅಂತಹ ಪ್ರತಿಭಾವಂತರಿಗೆ ಪೋತ್ಸಾಹ ನೀಡಿ ಉತ್ತೇಜಿಸಬೇಕು’ ಎನ್ನುವುದು ನಾಗಾ ಮಾರ್ಷಲ್‌ ಆರ್ಟ್‌ ಅಕಾಡೆಮಿಯ ತರಬೇತುದಾರ ಎಂ.ರಾಜೇಂದ್ರ ಅವರ ಒತ್ತಾಯ.

ಮಹಿಳೆಯರ ಸಂಖ್ಯೆ ಕಡಿಮೆ

ಚಾಮರಾಜನಗರ: ಜಿಲ್ಲೆಯಲ್ಲಿ ಮಹಿಳಾ ಕರಾಟೆ ಪಟುಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಪೋಷಕರಲ್ಲಿ ಅರಿವಿನ ಕೊರತೆ ಕಾರಣ. ಈ ನಿಟ್ಟಿನಲ್ಲಿ ಸಂಸ್ಥೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಾಗಾ ಮಾರ್ಷಲ್‌ ಆರ್ಟ್‌ ಅಕಾಡೆಮಿಯ ತರಬೇತುದಾರ ಎಂ.ರಾಜೇಂದ್ರ ಹೇಳಿದರು.ಸಂಸ್ಥೆಯು 2005ರಿಂದ ಜಿಲ್ಲೆಯಲ್ಲಿ ಯುವಜನರಿಗೆ ಕರಾಟೆ ತರಬೇತಿ ನೀಡುತ್ತಿದೆ. ನೂರಾರು ಪ್ರತಿಭಾವಂತರು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ.ಪೋಷಕರ ಹಿಂಜರಿಕೆಯಿಂದ ಯುವತಿಯರು ಪೂರ್ಣ ಪ್ರಮಾಣದಲ್ಲಿ ಕರಾಟೆ ಕಲಿಯುವುದಿಲ್ಲ. ಅರ್ಧಕ್ಕೆ ತರಬೇತಿ ಮೊಟಕುಗೊಳಿಸುತ್ತಾರೆ. ಸದ್ಯ, 10 ಜನ ಯುವತಿಯರು ಮಾತ್ರ ಕರಾಟೆ ಕಲಿಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

**

ಭರತ್‌ ಅವರು ಕರಾಟೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರಿಗೆ ಜಿಲ್ಲೆಯ ಜನರು ಪ್ರೋತ್ಸಾಹ ನೀಡಬೇಕು – ಯೋಗೇಶ್‌, ತರಬೇತುದಾರ.

**

ಎಸ್.ಪ್ರತಾಪ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry