ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಾನುಘಟಿಗಳ ರಾಜಕೀಯ ಏಳುಬೀಳು

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಹಿನ್ನೋಟ--– ತೀವ್ರ ಕುತೂಹಲ
Last Updated 6 ಏಪ್ರಿಲ್ 2018, 7:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಲೆನಾಡು ಮತ್ತು ಬಯಲು ಸೀಮೆಯ ಸಂಗಮದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವು ವರ್ಣರಂಜಿತ ರಾಜಕೀಯ ಇತಿಹಾಸ ಹೊಂದಿದೆ. ಘಟಾನುಘಟಿಗಳು ಕ್ಷೇತ್ರದಲ್ಲಿ ಏಳುಬೀಳುಗಳನ್ನು ಕಂಡಿದ್ದಾರೆ. ಮೊದಲ ವಿಧಾನಸಭೆ ಚುನಾವಣೆಯಿಂದ ಈವರೆಗಿನ ಸೋಲುಗೆಲುವುಗಳ ಇಟುಕು ನೋಟ ಇಂತಿದೆ.

1952ರಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು–ಮೂಡಿಗೆರೆ ದ್ವಿಸದಸ್ಯ ಕ್ಷೇತ್ರವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುಬ್ಬಮ್ಮ– 14,167 ಮತಗಳು ಹಾಗೂ ಜಿ.ಪುಟ್ಟಸ್ವಾಮಿ– 13,561 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಪ್ರಜಾ ಸೋಷಲಿಸ್ಟ್‌ ಪಕ್ಷದ ಲಕ್ಷ್ಮಣಗೌಡ, ಭಾರತೀಯ ಜನಸಂಘ ಪಾರ್ಟಿಯ ಎನ್‌.ಪಿ.ಗೋವಿಂದೇಗೌಡ, ಬಿ.ಎಲ್‌.ಲಿಂಗಣ್ಣ ಸೋತಿದ್ದರು. 1957ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಸವೇಗೌಡ –18,851 ಮತಗಳು ಹಾಗೂ ಕಾಂಗ್ರೆಸ್‌ನ ಎಲ್‌.ಎಚ್‌.ತಿಮ್ಮಬೋವಿ– 17,495 ಮತಗಳನ್ನು ಪಡೆದು ಚುನಾಯಿತರಾಗಿದ್ದರು. ಪ್ರಜಾ ಸೋಷಲಿಸ್ಟ್‌ ಪಕ್ಷದ ಬಿ.ಎಂ.ಲಕ್ಷ್ನಣಗೌಡ, ಡಿ.ನಿಂಗಯ್ಯ, ಕಾಂಗ್ರೆಸ್‌ನ ಎಂ.ಹುಚ್ಚೇಗೌಡ, ಪಕ್ಷೇತರ ಅಭ್ಯರ್ಥಿಗಳಾದ ಜಿ.ಪುಟ್ಟಸ್ವಾಮಿ, ಎಂ.ವಿ.ಗುರುಬಸಪ್ಪ ಶೆಟ್ಟಿ ಸೋಲುಂಡಿದ್ದರು.

ಕ್ಷೇತ್ರ ಮರುವಿಂಗಡಣೆಯಾಗಿ 1962ರ ವಿಧಾನಸಭೆ ಚುನಾವಣೆ ಹೊತ್ತಿಗೆ ಚಿಕ್ಕಮಗಳೂರು–ಮೂಡಿಗೆರೆ ದ್ವಿಸದಸ್ಯ ಕ್ಷೇತ್ರವು ಪ್ರತ್ಯೇಕಗೊಂಡಿತು. ಈ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ.ಎಲ್‌.ಸುಬ್ಬಮ್ಮ 9,717 ಮತಗಳನ್ನು ಪಡೆದು ಗೆದ್ದು, ಎರಡನೇ ಬಾರಿಗೆ ಶಾಸಕಿಯಾದರು. ಪ್ರಜಾ ಸೋಷಲಿಸ್ಟ್‌ ಪಕ್ಷದ ಸಿ.ಎಂ.ಎಸ್‌.ಶಾಸ್ತ್ರಿ, ಪಕ್ಷೇತರ ಅಭ್ಯರ್ಥಿಗಳಾದ ಸಣ್ಣೇಗೌಡ, ಕೆ.ಎಚ್‌.ರಂಗನಾಥ್‌ ಪರಾಭವಗೊಂಡಿದ್ದರು.

1967ರಲ್ಲಿ ಪ್ರಜಾ ಸೋಷಲಿಸ್ಟ್‌ ಪಕ್ಷದ ಸಿ.ಎಂ.ಎಸ್‌.ಶಾಸ್ತ್ರಿ– 12,397 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ನ ಸುಬ್ಬಮ್ಮ, ಸಣ್ಣೇಗೌಡ ಸ್ಪರ್ಧಿಸಿದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇ.ಇ.ವಾಜ್‌ – 21,288 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ರಾಷ್ಟ್ರೀಯ ಕಾಂಗ್ರೆಸ್‌ (ಒ) ಸಿ.ಆರ್‌.ಶಿವಾನಂದ, ಭಾರತೀಯ ಜನಸಂಘದ ಕೆ.ಪಿ.ಆರ್‌.ಪ್ರಭು, ಸ್ವತಂತ್ರ ಅಭ್ಯರ್ಥಿ ಬಿ.ಗೋವಿಂದರಾಜ, ಎಸ್‌ಡಬ್ಲುಎದ ಬಿ.ಎ.ಕೃಷ್ಣೇಗೌಡ, ಸಂಯುಕ್ತ ಸೋಷಲಿಸ್ಟ್‌ ಪಕ್ಷದ ಎಸ್‌.ವಿ.ಟಿ.ಗುಪ್ತಾ ಸ್ಪರ್ಧಿಸಿದ್ದರು.

1978ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ (ಐ) ಅಭ್ಯರ್ಥಿ ಸಿ.ಎ.ಚಂದ್ರೇಗೌಡ– 26,113 ಮತಗಳನ್ನು ಪಡೆದು ಚುನಾಯಿತರಾದರು. ಕಾಂಗ್ರೆಸ್‌ ತೊರೆದು ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಬಿ.ಎಲ್‌.ಸುಬ್ಬಮ್ಮ ಸೋಲು ಅನುಭವಿಸಿದರು. ಕಾಂಗ್ರೆಸ್‌ನ ಎ.ಎಂ.ನಿಂಗೇಗೌಡ, ಎಡಿಕೆಯ ಪಿಬಿಎಸ್‌ ಮಣಿ, ಪಕ್ಷೇತರ ಅಭ್ಯರ್ಥಿ ವಿ.ಅಚ್ಯುತನ್‌ ಕಣದಲ್ಲಿ ಇದ್ದರು.

1983ರ ಚುನಾವಣೆಯಲ್ಲಿ ಜನತಾ ಪಾರ್ಟಿಯ ಎಚ್‌.ಎ.ನಾರಾಯಣಗೌಡ–26,766 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೆಸ್‌ನ ಕೆ.ಆರ್‌.ಹರಿನಾಯಣಗೌಡ, ಬಿಜೆಪಿಯ ಎಂ.ಎನ್‌.ವಿಠಲಾಚಾರಿ, ಪಕ್ಷೇತರ ಅಭ್ಯರ್ಥಿ ಸಿ.ಎಂ.ನೀರುಲ್ಲಾ ಷರೀಫ್‌ ಕಣದಲ್ಲಿ ಇದ್ದರು. 1985ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಐ.ಬಿ.ಶಂಕರ್‌ –26,288 ಮತ ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಸಿ.ಆರ್‌.ಸಗೀರ್‌ ಅಹಮದ್‌, ಜನತಾ ಪಾರ್ಟಿಯ ಎಚ್‌.ಎ.ನಾರಾಯಣಗೌಡ, ಪಕ್ಷೇತರ ಅಭ್ಯರ್ಥಿಗಳಾದ ರಾಜಯ್ಯ, ತುಕಾರಾಂ, ಎಲ್‌.ವಿ.ಕೃಷ್ಣಮೂರ್ತಿ ಸ್ಪರ್ಧಿಸಿದ್ದರು.

1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಆರ್‌.ಸಗೀರ್‌ ಅಹಮದ್‌– 31,411 ಮತಗಳನ್ನು ಪಡೆದು ಮೊದಲ ಬಾರಿಗೆ ಜಯ ದಾಖಲಿಸಿದರು. ಜನತಾ ಪಾರ್ಟಿಯ ಮಂಜುನಾಥ್‌, ಜನತಾದಳದ ಎಚ್‌.ಎ.ನಾರಾಯಣಗೌಡ, ಸಿಪಿಐನ ಪಿ.ವಿ ಲೋಕೇಶ್‌, ಪಕ್ಷೇತರ ಅಭ್ಯರ್ಥಿಗಳಾದ ಎಸ್‌.ರಾಮಚಂದ್ರರಾವ್‌, ಮುಕುಂದ, ಕೆ.ಎನ್‌.ಮನೋಜ್‌ ಕಣಕ್ಕಿಳಿದಿದ್ದರು.

1994ರಲ್ಲಿ ಕಾಂಗ್ರೆಸ್‌ನ ಸಿ.ಆರ್‌.ಸಗೀರ್‌ ಅಹಮದ್‌– 19,823 ಮತಗಳನ್ನು ಪಡೆದು ಮತ್ತೊಮ್ಮೆ ಗೆಲುವು ಸಾಧಿಸಿದರು. ಸಿಪಿಐನ ಡಿ.ಕೆ.ಸುಂದರೇಶ್‌, ಜನತಾದಳ ಐ.ಬಿ.ಶಂಕರ್‌, ಬಿಎಸ್‌ಪಿಯ ಎಂ.ಡಿ.ಗಂಗಯ್ಯ, ಬಿಜೆಪಿ ಟಿ.ಶ್ರೀದೇವಿ, ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಎಂ.ಹಮೀಬ್‌, ವಿಶ್ವನಾಥ್‌, ಕೆ.ಎಂ.ಮನೋಜ್‌, ಜೆ.ವಿಜಯ್‌ ಕಣದಲ್ಲಿದ್ದರು.

1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಆರ್‌.ಸಗೀರ್‌ ಅಹಮದ್‌–25,707 ಮತ ಪಡೆದು ಗೆದ್ದು, ಹ್ಯಾಟ್ರಿಕ್‌ ದಾಖಲಿಸಿದರು.
ಬಿಜೆಪಿಯ ಸಿ.ಟಿ.ರವಿ, ಪಕ್ಷೇತರ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ, ಜೆಡಿಕೆ (ಎಸ್‌)ನ ಐ.ಬಿ.ಶಂಕರ್‌, ಸಿಪಿಐನ ಎಚ್‌.ಎಂ.ರೇಣುಕಾರಾಧ್ಯ, ಜೆಡಿಯುನ ಎಚ್‌.ಎಚ್‌.ದೇವರಾಜ್‌, ಬಿಎಸ್‌ಪಿ ಸುಲ್ತಾನ್‌ ಅಹಮದ್‌, ಎಡಿಎಂಕೆ ಪಕ್ಷದ ಮರಿಯಮ್ಮ ಸೋತಿದ್ದರು.

2004ರಲ್ಲಿ ಬಿಜೆಪಿಯ ಸಿ.ಟಿ.ರವಿ 57,165 ಮತಗಳನ್ನು ಪಡೆದು ಚುನಾಯಿತರಾದರು. ಕಾಂಗ್ರೆಸ್‌ನ ಸಿ.ಆರ್‌.ಸಗೀರ್‌ ಅಹಮದ್‌, ಜೆಡಿಎಸ್‌ನ ಡಾ.ಕೆ.ಇ.ಕುಮಾರಸ್ವಾಮಿ, ಜನತಾ ಪಾರ್ಟಿಯ ಕೆ.ಪಿ.ನಾಗೇಶ್‌ ಪರಾಭವಗೊಂಡಿದ್ದರು. 2008ರಲ್ಲಿ ಎದುರಾದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿಯ ಸಿ.ಟಿ.ರವಿ– 48,915 ಮತಗಳನ್ನು ಪಡೆದು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ಕಾಂಗ್ರೆಸ್‌ನ ಕೆ.ಬಿ.ಮಲ್ಲಿಕಾರ್ಜುನ, ಬಿಎಸ್‌ಪಿಯ ಎಂ.ಕೆ.ಪ್ರಸನ್ನಕುಮಾರ್‌, ಸಿಪಿಐನ ಬಿ.ಅಮ್ಜದ್‌, ರಾಷ್ಟ್ರೀಯ ಹಿಂದೂಸ್ಥಾನ್‌ ಸೇನೆಯ ಜೆ.ಬಿ.ಉಮೇಶ್‌ಚಂದ್ರ, ಸಮಾಜವಾದಿ ಪಕ್ಷದ ಡಾ.ಶಿವಾಜಿನಾಯಕ್‌, ಪಕ್ಷೇತರ ಅಭ್ಯರ್ಥಿಗಳಾದ ತೇಜಮೂರ್ತಿ, ಧರ್ಮೇಶ್‌ ಸೋಲು ಅನುಭವಿಸಿದ್ದರು.

2013ರ ಚುನಾವಣೆಯಲ್ಲಿ ಬಿಜೆಪಿ ಸಿ.ಟಿ.ರವಿ– 58,683 ಮತಗಳನ್ನು ಪಡೆದು ಗೆದ್ದು, ಹ್ಯಾಟ್ರಿಕ್‌ ಸಾಧಿಸಿ, ಸಿ.ಆರ್‌.ಸಗೀರ್‌ ಅಹಮದ್‌ ದಾಖಲೆ ಸರಿಗಟ್ಟಿದರು. ಕಾಂಗ್ರೆಸ್‌ನ ಕೆ.ಎಸ್‌.ಶಾಂತೇಗೌಡ, ಜೆಡಿಎಸ್‌ನ ಎಸ್‌.ಎಲ್‌.ಧರ್ಮೇಗೌಡ, ಕೆಜೆಪಿಯ ಕೆ.ನಿ.ವೇದಮೂರ್ತಿ, ಅಪ್ಸರ್‌ ಪಾಷಾ, ದ್ವಾರಕೀಶ್‌, ಸುರೇಶ್‌, ಟಿ.ಹರೀಶ್‌, ಯು.ಕೆ.ಗುರುಶಾಂತಪ್ಪ, ಕೆ.ರೇವಣ್ಣ, ಎಂ.ಎಂ.ಸುಧೀರ್‌, ಸ್ನೇಕ್‌ ನರೇಶ್‌ಕುಮಾರ್‌ ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT