4
ಜಿಲ್ಲೆಯಲ್ಲಿ ಮೂರು ಪಕ್ಷಗಳಲ್ಲೂ ತೀವ್ರ ಪೈಪೋಟಿ

ಟಿಕೆಟ್‌ಗಾಗಿ ಆಕಾಂಕ್ಷಿಗಳ ದುಂಬಾಲು

Published:
Updated:

ಹಾಸನ: ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕಾರಣದ ಕಾವೇರಿದ್ದು, ಟಿಕೆಟ್‌ ಆಕಾಂಕ್ಷಿಗಳು ನಾಯಕರ ದುಂಬಾಲು ಬಿದ್ದಿದ್ದಾರೆ. ಜೆಡಿಎಸ್‌ ಭದ್ರಕೋಟೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್‌ ಕಸರತ್ತು ಭರ್ಜರಿಯಾಗಿಯೇ ನಡೆದಿದೆ. ಜೆಡಿಎಸ್‌ ಹೊರತುಪಡಿಸಿದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.ಪ್ರಸಕ್ತ ಸಾಲಿನ ಚುನಾವಣೆ ಮೂರು ಪಕ್ಷಕ್ಕೂ ಸವಾಲು ತಂದೊಡ್ಡಿದೆ. ಐದು ಕ್ಷೇತ್ರದ ಜತೆಗೆ ಉಳಿದ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್‌ ರಣತಂತ್ರ ರೂಪಿಸುತ್ತಿದೆ.

ಹಾಸನ

ನಾಲ್ಕು ಬಾರಿ ಶಾಸಕರಾಗಿರುವ ಜೆಡಿಎಸ್‌ನ ಎಚ್‌.ಎಸ್‌.ಪ್ರಕಾಶ್‌ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಅಲ್ಪ ಮತದಿಂದ ಪರಾಜಿತಗೊಂಡಿದ್ದ ಕಾಂಗ್ರೆಸ್‌ನ ಎಚ್‌.ಎಸ್‌.ಮಹೇಶ್‌ ಈ ಬಾರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿ ಯಲ್ಲಿದ್ದಾರೆ. ಇವರ ಜತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಆನಂದ್‌ ಹೆಸರು ಚಾಲ್ತಿಯಲ್ಲಿದೆ. ಬಿಜೆಪಿಯಿಂದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೀತಂಗೌಡ, ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್‌, ಕಟ್ಟಾಯ ಅಶೋಕ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಅರಕಲಗೂಡು

ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಈ ಬಾರಿಯೂ ಹುರಿಯಾಳು. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್‌ ಪ್ರಬಲ ಆಕಾಂಕ್ಷಿ. ನಿವೃತ್ತ ಐಎಎಸ್‌ ಅಧಿಕಾರಿ ರಾಮೇಶಗೌಡ, ಪುಟ್ಟಸ್ವಾಮಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ಶ್ರವಣಬೆಳಗೊಳ

ಜೆಡಿಎಸ್‌ನ ಹಾಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಎಪಿಎಂಸಿ ನಿರ್ದೇಶಕ ಎಂ.ಶಂಕರ್ ಪ್ರಬಲ ಆಕಾಂಕ್ಷಿ. ಇವರೊಂದಿಗೆ ಮಾಜಿ ಸಚಿವ ಎಚ್‌.ಸಿ.ಶ್ರೀಕಂಠಯ್ಯ ಅವರ ಸೊಸೆ ರಾಜೇಶ್ವರಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜತ್ತೇನಹಳ್ಳಿ ರಾಮಚಂದ್ರ ಹೆಸರು ಕೇಳಿ ಬಂದಿದೆ. ಬಿಜೆಪಿಯಿಂದ ತಾಲ್ಲೂಕು ಘಟಕದ ಅಧ್ಯಕ್ಷ ಶಿವನಂಜೇಗೌಡ ಆಕಾಂಕ್ಷಿಯಾಗಿದ್ದಾರೆ.

ಸಕಲೇಶಪುರ–ಆಲೂರು

ಮೀಸಲು ಕ್ಷೇತ್ರದಿಂದ ಜೆಡಿಎಸ್‌ ಹಾಲಿ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮೂರನೇ ಬಾರಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಿ.ಎನ್‌.ಮಲ್ಲೇಶ್‌, ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಛಲವಾದಿ ಸಂಘದ ಅಧ್ಯಕ್ಷ ಛಲವಾದಿ ಕುಮಾರ್‌, ಡಿ.ಸಿ.ಸಣ್ಣಸ್ವಾಮಿ, ಜಿಗಣಿ ಕೃಷ್ಣಪ್ಪ ಸೇರಿದಂತೆ 17 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರು ಹೊರಗಿನವರು. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ದಲಿತ ಸಂಘಟನೆಗಳ ಮುಖಂಡರು ಸಭೆ ನಡೆಸಿ ಹೈಕಮಾಂಡ್‌ಗೂ ಒತ್ತಡ ಹೇರಿದ್ದಾರೆ. ಬಿಜೆಪಿಯಿಂದ ಚಿತ್ರನಟಿ ಚಾಂದನಿ ಪತಿ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ನಾರ್ವೆ ಸೋಮಶೇಖರ್‌ ಅಭ್ಯರ್ಥಿ ಎಂದು ಯಡಿಯೂರಪ್ಪ ಘೋಷಣೆ ಮಾಡಿ ಹೋಗಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯವೂ ಬಿರುಸಾಗಿ ನಡೆದಿದೆ. ಇವರೊಂದಿಗೆ ಡಾ.ನಾರಾಯಣ ಸ್ವಾಮಿ, ಮಾಸುವಳ್ಳಿ ಚಂದ್ರು, ಮುರಳಿ ಮೋಹನ್‌ ಯತ್ನ ಮುಂದುವರಿಸಿದ್ದಾರೆ.

ಬೇಲೂರು

ಹಾಲಿ ಶಾಸಕ ವೈ.ಎನ್‌.ರುದ್ರೇಶ್‌ಗೌಡ ನಿಧನದ ಕಾರಣ ಅವರ ಕುಟುಂಬದವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಸಹೋದರ ವೈ.ಎನ್‌.ಕೃಷ್ಣಕುಮಾರ್‌ ಅಥವಾ ಗೌಡರ ಪತ್ನಿ ಎಂ.ಎನ್‌.ಕೀರ್ತನಾ ಪೈಕಿ ಒಬ್ಬರಿಗೆ ಟಿಕೆಟ್‌ ಖಚಿತ. ಜೆಡಿಎಸ್‌ನಿಂದ ಕಳೆದ ಬಾರಿ ಕಡಿಮೆ ಮತದಿಂದ ಪರಾಜಿತಗೊಂಡಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌ ಹುರಿಯಾಳು. ಬಿಜೆಪಿಯಿಂದ ಹುಲ್ಲಳ್ಳಿ ಸುರೇಶ್‌, ಕೊರಟಗೆರೆ ಪ್ರಕಾಶ್‌, ಎಚ್‌.ಇ.ಲಕ್ಷ್ಮಣ್‌ ಕೂಡ ಆಕಾಂಕ್ಷಿಗಳು.

ಅರಸೀಕೆರೆ

ಹಾಲಿ ಜೆಡಿಎಸ್‌ ಶಾಸಕ ಕೆ.ಎಂ.ಶಿವಲಿಂಗೇಗೌಡ ಹ್ಯಾಟ್ರಿಕ್‌ ನಿರೀಕ್ಷೆಯೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್‌.ಅಶೋಕ್‌, ವಕೀಲ ರವಿ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್‌ ಸೋಮಣ್ಣ ಅಭ್ಯರ್ಥಿ. ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವೂ ನಡೆದಿದೆ. ಇವರೊಂದಿಗೆ ಮಾಜಿ ಶಾಸಕ ಎ.ಎಸ್‌.ಬಸವರಾಜು, ಪ್ರಭುಕುಮಾರ್‌ ಸ್ಪರ್ಧೆಯಲ್ಲಿದ್ದಾರೆ.

**

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಪ್ರಚಾರ ಕಾರ್ಯ ಜೋರಾಗಿ ನಡೆದಿದೆ – 

ಕೆ.ಎಸ್‌.ಲಿಂಗೇಶ್‌, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ.

**

ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿದ್ದು, ಏಪ್ರಿಲ್‌ ಎರಡನೇ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ – ಜಾವಗಲ್‌ ಮಂಜುನಾಥ್‌, ಡಿಸಿಸಿ ಅಧ್ಯಕ್ಷ

**

ನವದೆಹಲಿಯಲ್ಲಿ ಏ. 10ರಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗುವುದು – ಡಿ.ಅಶೋಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry