ನಗದು ರಹಿತ ವ್ಯವಹಾರಕ್ಕೆ ‘ಇ–ಸ್ವೀಕೃತಿ’

7
ಜಿಲ್ಲೆಯಲ್ಲಿ ಏ. 2ರಿಂದ ಆನ್‌ಲೈನ್‌ ಸೇವೆಗಳು ಆರಂಭ

ನಗದು ರಹಿತ ವ್ಯವಹಾರಕ್ಕೆ ‘ಇ–ಸ್ವೀಕೃತಿ’

Published:
Updated:

 

ಹಾವೇರಿ: ಜಿಲ್ಲೆಯ ಎರಡು ನಗರಸಭೆ, ಐದು ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯ್ತಿಗಳಲ್ಲಿ ನಗದು ರಹಿತ ಸೇವೆ (ಇ–ಸ್ವೀಕೃತಿ)ಯನ್ನು ಆರಂಭಿಸಲಾಗಿದೆ.ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ, ಏಪ್ರಿಲ್ 2ರಿಂದ ಇ–ಸ್ವೀಕೃತಿ ಜಾರಿಯಾಗಿದೆ. ಹಾವೇರಿ ಮತ್ತು ರಾಣೆಬೆನ್ನೂರು ನಗರಸಭೆ, ಬ್ಯಾಡಗಿ, ಹಾನಗಲ್‌, ಶಿಗ್ಗಾವಿ, ಸವಣೂರ ಮತ್ತು ಬಂಕಾಪುರ ಪುರಸಭೆ, ಗುತ್ತಲ ಹಾಗೂ ಹಿರೇಕೆರೂರ ಪಟ್ಟಣ ಪಂಚಾಯ್ತಿಗಳಲ್ಲಿ ಆನ್‌ಲೈನ್‌ ಮೂಲಕ, ಇ–ಸೇವೆಗಳು ದೊರೆಯುತ್ತಿವೆ.

‘ಸಾರ್ವಜನಿಕರಿಗೆ ಆಸ್ತಿ ತೆರಿಗೆ, ನೀರಿನ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಸಾರಿಗೆ ಕರ, ಜಾಹೀರಾತು ತೆರಿಗೆ, ಕಟ್ಟಡ ಪರವಾನಗಿ ಶುಲ್ಕ, ಭಿಕ್ಷುಕರ ಕರ, ಪ್ರಮಾಣ ಪತ್ರ ಮತ್ತು ನಕಲು ಶುಲ್ಕ, ಖಾತಾ ಬದಲಾವಣೆ ಶುಲ್ಕ, ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕ, ರಸ್ತೆ ಅಗೆತ ಮತ್ತು ಪೂರ್ವಸ್ಥಿತಿ ಸ್ಥಾಪನೆ ದರಗಳು, ಸಾಮಾನ್ಯ ನಿಧಿ (ಇತರೆ ಶುಲ್ಕ), ಮಾರುಕಟ್ಟೆ ಶುಲ್ಕ ಸೇರಿದಂತೆ, ಎಲ್ಲಾ ಸೇವೆಗಳು ಆನ್‌ಲೈನ್‌ನಲ್ಲಿ ಮಾತ್ರ ದೊರೆಯುತ್ತವೆ’ ಎಂದು ಹಾವೇರಿ ನಗರಸಭೆ ಪೌರಾಯುಕ್ತ ಬಿ.ಎಸ್‌. ಶಿವಕುಮಾರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರು ಇ–ಸ್ವೀಕೃತಿ ಮೂಲಕ ಕಟ್ಟುವ ಎಲ್ಲ ತೆರಿಗೆಯು ರಾಜ್ಯ ಸರ್ಕಾರದ ಖಜಾನೆ ಇಲಾಖೆ ಅಭಿವೃದ್ಧಿಪಡಿಸಿರುವ ಖಜಾನೆ–2ರಲ್ಲಿ ‘ಸೇವಾ ತೆರಿಗೆ ನಿಧಿ’ಗೆ ಜಮಾಗೊಳ್ಳುತ್ತದೆ. ಹೀಗಾಗಿ, ಮೂರನೇ ವ್ಯಕ್ತಿಯಿಂದ ಸಾರ್ವಜನಿಕರಿಗೆ ಯಾವುದೇ ಮೋಸ, ವಂಚನೆ ನಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಜನನ ಮತ್ತು ಮರಣ ಪ್ರಮಾಣ ಪತ್ರ, ಎಸ್‌ಎಎಸ್‌, ಆಸ್ತಿ ವರ್ಗಾವಣೆ, ಟ್ರೇಡ್‌, ಕಟ್ಟಡ ಪರವಾನಗಿ, ನೀರು ಸರಬರಾಜು ಸಂಪರ್ಕ ಹಾಗೂ ಯುಜಿಡಿ ಸಂಪರ್ಕಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಶೇ 5ರಷ್ಟು ರಿಯಾಯ್ತಿ: ‘ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಮೇರೆಗೆ ಏ.30ರೊಳಗೆ ತೆರಿಗೆ ಕಟ್ಟಿದರೆ ಶೇ 5ರಷ್ಟು ರಿಯಾಯ್ತಿ ಸಿಗಲಿದೆ. ಮೇ 31ರವರೆಗೆ ಯಾವುದೇ ದಂಡವಿಲ್ಲದೆ ತೆರಿಗೆ ಪಾವತಿಸಿಕೊಳ್ಳಲಾಗುವುದು. ನಂತರ, ಪ್ರತಿ ತಿಂಗಳಿಗೆ ಶೇ 2ರಷ್ಟು ದಂಡ ವಿಧಿಸಲಾಗುವುದು’ ಎಂದು ಹಾವೇರಿ ನಗರಸಭೆ ಲೆಕ್ಕ ಅಧೀಕ್ಷಕ ನಾಗರಾಜ ಬಿಲ್ಲಾಳ ಹೇಳಿದರು.

ನೆಟ್‌ ಬ್ಯಾಂಕಿಂಗ್ ಮೂಲಕವೂ ಪಾವತಿಸಬಹುದು

ನೆಟ್‌ ಬ್ಯಾಂಕಿಂಗ್‌ ಬಳಸಿ ತೆರಿಗೆ ಕಟ್ಟುವವರು ‘WWW.HAVERICITY.MRC.GOV.IN’ ವೆಬ್‌ಸೈಟ್‌ನಲ್ಲಿ ಐದು ಬ್ಯಾಂಕ್‌ಗಳ ಮೂಲಕ ಕಟ್ಟಬಹುದು. ‘ನೆಟ್‌ ಬ್ಯಾಂಕಿಂಗ್‌ ಮೂಲಕ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್ ಆಫ್‌ ಇಂಡಿಯಾ ಹಾಗೂ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳ ಮೂಲಕ ತೆರಿಗೆ ಪಾವತಿಸಬಹುದು. ಚಲನ್‌ ಮೂಲಕ ಕಟ್ಟುವವರು ಒಟ್ಟು 20 ಬ್ಯಾಂಕ್‌ಗಳ ಮೂಲಕ ಕಟ್ಟಬಹುದು. ಅಲ್ಲದೆ, ಡಿ.ಡಿ ಮತ್ತು ಚೆಕ್‌ ಮೂಲಕವು ಪಾವತಿಸಬಹುದು’ ಎಂದು ಹಾವೇರಿ ನಗರಸಭೆ ಲೆಕ್ಕ ಅಧೀಕ್ಷಕ ನಾಗರಾಜ ಬಿಲ್ಲಾಳ ತಿಳಿಸಿದರು.

**

ಜನಸ್ನೇಹಿ ಮತ್ತು ಪಾರದರ್ಶಕ ಇ–ಆಡಳಿತ ಜಾರಿ ಮಾಡುವ ಉದ್ದೇಶದಿಂದ ಪೌರಾಡಳಿತ ನಿರ್ದೇಶನಾಲಯವು ಹಲವು ತಂತ್ರಾಶಗಳನ್ನು ಅಭಿವೃದ್ಧಿಪಡಿಸಿದೆ – ಬಿ.ಎಸ್‌.ಶಿವಕುಮಾರಯ್ಯ ಪೌರಾಯುಕ್ತ, ಹಾವೇರಿ ನಗರಸಭೆ.

**

– ಪ್ರವೀಣ ಸಿ. ಪೂಜಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry