ಗೊಂದಲದ ಗೂಡಾದ ಜಗಜೀವನರಾಮ್‌ ಜಯಂತಿ

7
ದಲಿತ ಸಂಘಟನೆಗಳ ಸದಸ್ಯರಿಂದ ಧರಣಿ: ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ

ಗೊಂದಲದ ಗೂಡಾದ ಜಗಜೀವನರಾಮ್‌ ಜಯಂತಿ

Published:
Updated:

ಕೋಲಾರ: ಜಿಲ್ಲಾಡಳಿತವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್‌ ಜಯಂತಿ ಆಚರಣೆ ವೇಳೆ ದಲಿತ ಸಂಘಟನೆಗಳ ಸದಸ್ಯರು ಧರಣಿ ನಡೆಸಿದ್ದರಿಂದ ಕಾರ್ಯಕ್ರಮವು ಗೊಂದಲದ ಗೂಡಾಯಿತು.

ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿಯಾಗಿರುವ ಕಾರಣ ಜಿಲ್ಲಾಡಳಿತವು ಟಿ.ಚನ್ನಯ್ಯ ರಂಗಮಂದಿರದಲ್ಲಿ ಸರಳವಾಗಿ ಬಾಬು ಜಗಜೀವನರಾಮ್‌ ಜಯಂತಿ ಆಚ ರಿಸಲು ಸಿದ್ಧತೆ ಮಾಡಿಕೊಂಡಿತ್ತು. ದಲಿತ ಮುಖಂಡರಿಗೆ ಆಹ್ವಾನ ನೀಡಿರಲಿಲ್ಲ.

ಇದರಿಂದ ಅಸಮಾಧಾನಗೊಂಡಿದ್ದ ದಲಿತ ಸಂಘಟನೆಗಳ ಸದಸ್ಯರು ಕಾರ್ಯಕ್ರಮದ ಆರಂಭದಲ್ಲೇ ವೇದಿಕೆ ಮುಂಭಾಗದಲ್ಲಿ ಧರಣಿ ಕುಳಿತರು. ‘ಜಿಲ್ಲಾಡಳಿತವು ಕಾಟಾಚಾರಕ್ಕೆ ಬಾಬು ಜಗಜೀವನ ರಾಮ್‌ ಜಯಂತಿ ಆಚರಿಸುತ್ತಿದೆ. ಚುನಾವಣಾ ನೀತಿ ಸಂಹಿತೆಯ ನೆಪ ಮಾಡಿಕೊಂಡು ಜಗಜೀವನ ರಾಮ್‌ ಅವರಂತಹ ಮಹನೀಯರನ್ನು ಅವಮಾನಿಸಿದೆ’ ಎಂದು ಧರಣಿನಿರತರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ‘ಚುನಾವಣಾ ನೀತಿಸಂಹಿತೆ ಕಾರಣಕ್ಕೆ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಜಯಂತಿ ಆಚರಣೆ ಸಿದ್ಧತೆ ಸಂಬಂಧ ಅಸಮಾಧಾನವಿದ್ದರೆ ಚರ್ಚಿಸೋಣ. ಕಾರ್ಯಕ್ರಮದಲ್ಲಿ ಗದ್ದಲ ಮಾಡಬೇಡಿ’ ಎಂದು ಧರಣಿನಿರತರ ಮನವೊಲಿಸಲು ಯತ್ನಿಸಿದರು. ಆದರೆ, ಧರಣಿನಿರತರು ಕಾರ್ಯಕ್ರಮ ಮುಂದೂಡಿ ವ್ಯವಸ್ಥಿತವಾಗಿ ಜಯಂತಿ ಆಚರಿಸುವಂತೆ ಪಟ್ಟು ಹಿಡಿದರು. ಇದರಿಂದ ಗೊಂದಲ ಸೃಷ್ಟಿಯಾಯಿತು.

ಜಿಲ್ಲಾಡಳಿತಕ್ಕೆ ಗೌರವವಿಲ್ಲ: ‘ಬಾಬು ಜಗಜೀವನರಾಮ್ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್‌ ವ್ಯಕ್ತಿ ಬಗ್ಗೆ ಜಿಲ್ಲಾಡಳಿತಕ್ಕೆ ಸ್ವಲ್ಪವೂ ಗೌರವವಿಲ್ಲ. ಜಿಲ್ಲಾಡಳಿತವು ಸಾಂಕೇತಿಕವಾಗಿ ಬಾಬು ಜಗಜೀವನರಾಮ್‌ ಜಯಂತಿ ಆಚರಿಸುತ್ತಿರುವುದರಿಂದ ದಲಿತ ಸಮುದಾಯಕ್ಕೆ ನೋವಾಗಿದೆ’ ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ನಾರಾಯಣಸ್ವಾಮಿ ಆರೋಪಿಸಿದರು.

‘ಯಾವುದೇ ಜಯಂತಿ ಆಚರಣೆ ಸಂಬಂಧ ಮೊದಲು ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಆದರೆ, ಈ ಬಾರಿ ಅಧಿಕಾರಿಗಳು ಸಭೆ ಕರೆದಿಲ್ಲ. ದಲಿತ ಸಂಘಟನೆಗಳ ಮುಖಂಡರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಸಹ ನೀಡಿಲ್ಲ’ ಎಂದು ಅಸಮಾಧಾನ

ವ್ಯಕ್ತಪಡಿಸಿದರು.

ಕಡೆಗಣಿಸಿದೆ: ‘ಜಿಲ್ಲಾಡಳಿತವು ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯವನ್ನು ಕಡೆಗಣಿಸಿದೆ. ಅಂಬೇಡ್ಕರ್‌, ಬಸವಣ್ಣ, ಬಾಬು ಜಗಜೀವನರಾಮ್‌, ಮಹಾವೀರ ಜಯಂತಿ ಆಚರಣೆಯು ಅಧಿಕಾರಿಗಳಿಗೆ ಕೇವಲವಾಗಿದೆ. ಜಿಲ್ಲಾಡಳಿತಕ್ಕೆ ಅರ್ಥಪೂರ್ಣವಾಗಿ ಜಯಂತಿ ಆಚರಿಸಲು ಸಾಧ್ಯವಾಗದಿದ್ದರೆ ಸುಮ್ಮನಿರಬೇಕಿತ್ತು. ಸಂಘಟನೆಗಳ ಸದಸ್ಯರೆಲ್ಲಾ ಒಟ್ಟಾಗಿ ಅದ್ಧೂರಿಯಾಗಿ ಜಯಂತಿ ಆಚರಿಸುತ್ತಿದ್ದೆವು’ ಎಂದು ರಾಜ್ಯ ಜೆಡಿಎಸ್ ಎಸ್ಸಿ ಘಟಕದ ಉಪಾಧ್ಯಕ್ಷ ವೆಂಕಟೇಶ್‌ ಹೇಳಿದರು. ‘ನೆಪ ಮಾತ್ರಕ್ಕೆ ಜಯಂತಿ ಆಚರಿಸುವ ಅಗತ್ಯವಿಲ್ಲ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಅದ್ದೂರಿಯಾಗಿ ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಅಂತಿಮವಾಗಿ ವಿದ್ಯಾಕುಮಾರಿ ಧರಣಿನಿರತರ ಬೇಡಿಕೆಗೆ ಕಿವಿಗೊಡದೆ ಕಾರ್ಯಕ್ರಮ ಉದ್ಘಾಟಿಸಿ ಬಾಬು ಜಗಜೀವನರಾಮ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಂಗಮಂದಿರದಿಂದ ಹೊರ ನಡೆದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್, ಉಪ ತಹಶೀಲ್ದಾರ್‌ ನಾಗವೇಣಿ, ದಲಿತ ಮುಖಂಡರಾದ ಶಂಕರಪ್ಪ, ಟಿ.ವಿಜಿಕುಮಾರ್, ವೆಂಕಟೇಶಪ್ಪ, ಮುನಿಯಪ್ಪ ಹಾಜರಿದ್ದರು.

**

ಜಿಲ್ಲಾಡಳಿತ ಜಗಜೀವನರಾಮ್ ಜಯಂತಿಯನ್ನು ಸರಳವಾಗಿ ಆಚರಿಸುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿ ದರೆ ಅಧಿಕಾರಿಗಳು ಅನುದಾನದ ಕೊರತೆ ಎಂದು ಸಬೂಬು ಹೇಳುತ್ತಾರೆ. –ನಾರಾಯಣಸ್ವಾಮಿ, ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry