ಮತ ಖಾತ್ರಿಯಿಂದ ಜನರಲ್ಲಿ ವಿಶ್ವಾಸ ವೃದ್ಧಿ

7
ಕುಷ್ಟಗಿ: ಮತಯಂತ್ರ, ವಿವಿ ಪ್ಯಾಟ್‌ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ

ಮತ ಖಾತ್ರಿಯಿಂದ ಜನರಲ್ಲಿ ವಿಶ್ವಾಸ ವೃದ್ಧಿ

Published:
Updated:

ಕುಷ್ಟಗಿ: ಮತಯಂತ್ರಗಳ ಜೊತೆಗೆ ಮತ ಖಾತ್ರಿ ಪಡಿಸುವ ವಿವಿ ಪ್ಯಾಟ್‌ ಯಂತ್ರಗಳಿಂದ ಮತದಾರರಲ್ಲಿ ವಿಶ್ವಾಸ ಹೆಚ್ಚುತ್ತಿದೆ ಎಂದು ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ ಎಂದು ಯಂತ್ರಗಳ ಮಾಸ್ಟರ್‌ ಟ್ರೇನರ್‌ ವಿಜಯಕುಮಾರ ಹೇಳಿದರು.ಗುರುವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿಯಲ್ಲಿ ಮತಯಂತ್ರ ಮತ್ತು ವಿವಿ ಪ್ಯಾಟ್‌ ಬಳಕೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.‌

ಹಿಂದಿನ ಚುನಾವಣೆಯಲ್ಲಿ ಬ್ಯಾಲೆಟ್‌ ಯೂನಿಟ್‌ ಮತ್ತು ಕಂಟ್ರೋಲ್‌ ಯೂನಿಟ್‌ಗಳು ಮಾತ್ರ ಇರುತ್ತಿದ್ದವು. ಆದರೆ, ತಾವು ಚಲಾಯಿಸಿದ ಮತ ಬೇರೆ ಚಿನ್ಹೆಗಳಿಗೆ ಹೋಗಿದೆ ಎಂಬ ಅನುಮಾನ ಮತದಾರರಲ್ಲಿ ಇತ್ತು. ಹಾಗಾಗಿ ಈ ಬಾರಿ ಮತ ಖಾತರಿಪಡಿಸುವುದಕ್ಕೆ ಸಂಬಂಧಿಸಿದಂತೆ ವಿವಿ ಪ್ಯಾಟ್‌ ಯಂತ್ರವೂ ಇರುತ್ತದೆ. ಯಾವ ಚಿನ್ಹೆಗೆ ಮತ ಚಲಾವಣೆಗೊಂಡಿದೆ ಎಂಬುದನ್ನು ವಿವಿ ಪ್ಯಾಟ್‌ ಯಂತ್ರದಲ್ಲಿ 7 ಸೆಕೆಂಡ್‌ಗಳವರೆಗೆ ಕಾಣಿಸುತ್ತದೆ ಎಂದು ಪ್ರಾತ್ಯಕ್ಷಿಕೆ ಸಹಿತ ಮನವರಿಕೆ ಮಾಡಿದರು.

ಮತದಾನ ಪೂರ್ವ ಒಂದು ಗಂಟೆ ಮೊದಲು ಅಣಕು ಮತದಾನ (ಮಾಕ್‌ಪೋಲ್‌) ನಡೆಯುತ್ತದೆ. ಸುಮಾರು 50 ಮತಗಳನ್ನು ಚಲಾಯಿಸಿ ಯಂತ್ರಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದಕ್ಕೆ ಅವಕಾಶ ಇರುತ್ತದೆ. ಅದೇ ರೀತಿ ಮತದಾನ ಮುಗಿದ ನಂತರ ಒಟ್ಟು ಮತದಾನ ಆಗಿರುವುದನ್ನು ಏಜೆಂಟರಿಗೆ ತೋರಿಸಿ ಯಂತ್ರಗಳನ್ನು ಸೀಲ್‌ ಮಾಡಲಾಗುತ್ತದೆ. ಒಟ್ಟಾರೆ ಯಂತ್ರಗಳ ಬಗ್ಗೆ ಸಂಶಯ ಬೇಡ ಎಂದು ಹೇಳಿದರು.

ಆದರೆ, ಕೆಲವರು ಮತಯಂತ್ರದಲ್ಲಿ ಚಲಾಯಿಸಿದ ಮತ ಬೇರೆ ಅಭ್ಯರ್ಥಿಗೆ ಹೋಗಿರುವ ಉದಾಹರಣೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದಾಗ ಮತಯಂತ್ರ ಅಳವಡಿಸುವಲ್ಲಿನ ತಾಂತ್ರಿಕ ದೋಷದಿಂದ ಎಲ್ಲಿಯಾದರೂ ಸಮಸ್ಯೆಯಾಗಿರಬಹುದು. ಅದೇ ಕಾರಣಕ್ಕೆ ಮತದಾರರ ವಿಶ್ವಾಸ ವೃದ್ಧಿಸುವ ಸಲುವಾಗಿ ಈ ಬಾರಿ ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ವಿಜಯಕುಮಾರ ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ.ಮೋಹನ್‌ ಇತರರು ಇದ್ದರು. ಪುರಸಭೆಯಲ್ಲಿ ನಡೆದ ಕಾರ್ಯಾಗಾರದಲ್ಲಿಅಧ್ಯಕ್ಷ ಖಾಜಾ ಮೈನುದ್ದೀನ್‌ ಮುಲ್ಲಾ, ಮುಖ್ಯಾಧಿಕಾರಿ ಶಿವಪುತ್ರಪ್ಪ ಅಗಡಿ, ತಾಲ್ಲೂಕು ತರಬೇತಿದಾರ ಶಂಕರಪ್ಪ ಚಾಮಲಾಪುರ ಇದ್ದರು.

ಮತ ಹಕ್ಕು: ಮತದಾನದ ಹಕ್ಕು ಚಲಾವಣೆ ಕುರಿತಂತೆ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೂರಕ ಮಾಹಿತಿ ನೀಡುವ ಕಾರ್ಯಕ್ರಮ ಗುರುವಾರ ನಡೆಯಿತು.ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮತದಾನದಿಂದ ಜನರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದಂತಾಗುತ್ತದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ರೈತರು, ಸಾರ್ವಜನಿಕರಿಗೆ ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸುವಂತೆ ಹೇಳಿದರು.

ಕೃಷಿ ಅಧಿಕಾರಿಗಳಾದ ನಾಗನಗೌಡ ಪೊಲೀಸಪಾಟೀಲ, ಪ್ರಕಾಶ ತಾರಿವಾಳ, ಬಿ.ಆರ್‌.ಜಲಗೇರಿ, ಎಸ್‌.ವಿ.ಹುಣಿಸ್ಯಾಳ, ಕೆ.ಆರ್‌.ಭಜಂತ್ರಿ, ಸಿ.ಕೆ.ಕಮ್ಮಾರ, ರಾಮರಾವ ಕುಲಕರ್ಣಿ, ಶಿವಾನಂದ ಮಾಳಗಿ ಮತ್ತು ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry