ಶುಕ್ರವಾರ, ಡಿಸೆಂಬರ್ 13, 2019
19 °C
500 ಕುಟುಂಬಗಳ ಗ್ರಾಮ, 50ಕ್ಕೂ ಹೆಚ್ಚಿನ ಮಂದಿಗೆ ನೌಕರಿ

ಬಳ್ಳೇಕೆರೆ; ಸರ್ಕಾರಿ ನೌಕರರ ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳೇಕೆರೆ; ಸರ್ಕಾರಿ ನೌಕರರ ನೆಲೆ

 

ಶ್ರೀರಂಗಪಟ್ಟಣ: ಒಂದು ಗ್ರಾಮದಲ್ಲಿ ಹತ್ತರಿಂದ ಹನ್ನೆರಡು ಮಂದಿ ಸರ್ಕಾರಿ ನೌಕರರು ಇದ್ದರೆ ಅದೇ ಹೆಚ್ಚು. ಆದರೆ ಸುಮಾರು 500 ಕುಟುಂಬ ಇರುವ ತಾಲ್ಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ 50 ಮಂದಿಗೂ ಹೆಚ್ಚು ಮಂದಿ ಸರ್ಕಾರಿ ನೌಕರಿ ಪಡೆದಿದ್ದಾರೆ.

ಜಿಲ್ಲಾಧಿಕಾರಿಯಿಂದ ಗ್ರಾಮಲೆಕ್ಕಿಗ ರವರೆಗೆ, ಮುಖ್ಯ ಎಂಜಿಯರ್‌ ಹುದ್ದೆ ಯಿಂದ ಲೈನ್‌ಮನ್‌ ವರೆಗೆ, ಸಾಮಾನ್ಯ ಶಿಕ್ಷಕನಿಂದ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ವರೆಗೆ– ಹೀಗೆ ವಿವಿಧ ಹಂತದ ಹುದ್ದೆಗಳಲ್ಲಿರುವ, ಸೇವೆ ಸಲ್ಲಿಸಿ ನಿವೃತ್ತರಾಗಿರುವವರು ಈ ಊರಿನಲ್ಲಿದ್ದಾರೆ. ಸಾಕಷ್ಟು ಮಂದಿ ಹೊರ ರಾಜ್ಯ, ಹೊರ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದ ಪ್ರದೀಪ್‌ ಎಂಬವರು ಮಹಾರಾಷ್ಟ್ರ ಕೇಡರ್‌ನ ಜಿಲ್ಲಾಧಿಕಾರಿಯಾಗಿದ್ದಾರೆ. ಇವರ ತಂದೆ ಪ್ರಭಾಕರ್‌ ಕೆಪಿಟಿಸಿಎಲ್‌ ಎಂಜಿನಿಯರ್‌ ಹುದ್ದೆಯಲ್ಲಿದ್ದು, ನಿವೃತ್ತರಾಗಿದ್ದಾರೆ. ಇದೇ ಪ್ರಭಾಕರ್‌ ಅವರ ತಂದೆ ಟಿ.ಸಿ. ತಿಮ್ಮಯ್ಯ ಕೃಷಿ ಅಧಿಕಾರಿಯಾಗಿದ್ದು, 100 ವರ್ಷಗಳ ತುಂಬು ಜೀವನ ನಡೆಸಿ ಈಚೆಗಷ್ಟೇ ನಿಧನರಾಗಿದ್ದಾರೆ. ಗ್ರಾಮದ ಬಿ.ಟಿ. ಜಯರಾಂ ಎಂಜಿನಿಯರ್‌ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಇವರ ಇಬ್ಬರು ಮಕ್ಕಳು ಡಾ.ಸುಭಾಶ್ಚಂದ್ರ ಮತ್ತು ಡಾ.ಶರತ್‌ಚಂದ್ರ ಮೈಸೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ಜಲಮಂಡಳಿಯಲ್ಲಿ ಎಂಜಿನಿಯರ್‌ ಹುದ್ದೆಯಲ್ಲಿದ್ದು ನಿವೃತ್ತರಾಗಿರುವ ಬಿ.ಟಿ. ಜವರಪ್ಪ ಅವರ ಪುತ್ರ ವೆಂಕಟೇಶ್‌ ಕೂಡ ಎಂಜಿನಿಯರ್‌. ಅವರ ಮತ್ತೊಬ್ಬ ಪುತ್ರ ಅನಂತಪ್ರಭು ಆಸ್ಟ್ರೇಲಿಯಾದಲ್ಲಿ ಎಂಜಿನಿಯರ್. ಬಿ.ಎಚ್‌. ಶಿವಯ್ಯ ಕೂಡ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದವರು. ಇವರ ಸಹೋದರ ನಾರಾಯಣಸ್ವಾಮಿ ಅವರೂ ಎಂಜಿನಿಯರ್‌. ಇವರ ಮಗಳು ಪ್ರಭಾವತಿ ಮಂಡ್ಯ ನಗರದಲ್ಲಿ ಹೆಸರಾಂತ ವೈದ್ಯೆ. ಬಿ.ಎಚ್‌. ಶಿವಯ್ಯ ಅವರ ಮಗ ಡಾ.ಬಿ.ಎಸ್‌. ಬಾಲಕೃಷ್ಣ ತಾಲ್ಲೂಕು ವೈದ್ಯಾಧಿಕಾರಿಯಾಗಿ ಭಡ್ತಿ ಪಡೆದಿದ್ದಾರೆ. ಬಾಲಕೃಷ್ಣ ಅವರ ಮತ್ತೊಬ್ಬ ಸಹೋದರ ಆಸ್ಟ್ರೇಲಿಯಾದಲ್ಲಿ ಎಂಜಿನಿಯರ್‌ ಕೆಲಸ ಮಾಡುತ್ತಿದ್ದಾರೆ.

ಇದೇ ಊರಿನ ನಂಜುಂಡೇಗೌಡ ಬೆಂಗಳೂರಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿದ್ದವರು. ಅವರ ಪುತ್ರ ಚಂದ್ರಶೇಖರ್‌ ಕೆಎಎಸ್‌ ಅಧಿಕಾರಿಯಾಗಿದ್ದಾರೆ. ಶಂಕರೇಗೌಡ ಎಂಬವರು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು. ಪ್ರೊ.ಜವರೇಗೌಡ ಮಂಡ್ಯ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದೇ ಗ್ರಾಮದ ಡಾ.ಕುಮಾರ್‌ ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುರೇಂದ್ರ (ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ), ರೇವಣ್ಣ, (ಆಹಾರ ಇಲಾಖೆ), ಬಿ.ಎಚ್‌.ನಾಗರಾಜು, ಬಸವರಾಜು ಮುತ್ತು ರಾಜು, ಬಿ.ಪಿ. ಪುನೀತ್‌ ಪೊಲೀಸ್‌ ಇಲಾಖೆಯಲ್ಲಿದ್ದಾರೆ. ಸಿದ್ದಲಿಂಗಯ್ಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದು ನಿವೃತ್ಇ ಹೊಂದಿದ್ದಾರೆ. ಮನೋಹರ್‌ (ಅಬಕಾರಿ ಪೊಲೀಸ್‌), ಕೆ. ನಾಗೇಂದ್ರ (ಸೆಸ್ಕಾಂ) ಹಾಗೂ ಪ್ರದೀಪ್‌ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರ,

ಗೋಪಾಲ್‌ (ಗ್ರಾಮ ಲೆಕ್ಕಿಗ), ನಾರಾಯಣಸ್ವಾಮಿ (ನಿವೃತ್ತ ವಿಎ), ಕೆಂಪೇಗೌಡ ಆರೋಗ್ಯ ಇಲಾಖೆಯಲ್ಲಿದ್ದು ನಿವೃತ್ತರಾಗಿದ್ದು, ಚಿಕ್ಕರಸು ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರಾಗಿದ್ದ ಚಂದ್ರಾಚಾರ್‌ ಉತ್ತಮ ಸೇವೆಗಾಗಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಶಂಕರೇಗೌಡ (ಸರ್ವೆ ಅಧೀಕ್ಷಕ), ಲಕ್ಷ್ಮಣಗೌಡ ಮತ್ತು ಪ್ರಭಾಕರ್‌ ಕೆಎಸ್‌ಆರ್‌ಟಿಸಿಯಲ್ಲಿ ಕ್ರಮವಾಗಿ ನಿರ್ವಾಹಕ ಮತ್ತು ಚಾಲಕರಾಗಿದ್ದಾರೆ.

ಹೋಬಳಿ ಕೇಂದ್ರ ಅರಕೆರೆಗೆ ಒಂದೂವರೆ ಕಿ.ಮೀ. ದೂರದಲ್ಲಿರುವ ಬಳ್ಳೇಕೆರೆ ತಾಲ್ಲೂಕಿನಲ್ಲಿಯೇ ಹೆಚ್ಚು ಸರ್ಕಾರಿ ನೌಕರರನ್ನು ಕೊಟ್ಟಿರುವ ಗ್ರಾಮ. ಈ ಊರಿನ 8 ಜನರು ಎಂಜಿನಿಯರ್‌ ಆಗಿರುವುದು ಹೆಗ್ಗಳಿಕೆ. ಪ್ರಸಿದ್ಧ ಹಿನ್ನೆಲೆ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್‌ ಸಜ್ಜು ಬಳ್ಳೇಕೆರೆ ಗ್ರಾಮದವರು ಎಂಬುದು ಮತ್ತೊಂದು ವಿಶೇಷ.

‘ನಮ್ಮೂರಿನ ವಿದ್ಯಾರ್ಥಿಗಳು ಹಲವು ದಶಕಗಳಿಂದ ಪ್ರತಿಭಾವಂತರು ಎಂದು ಕರೆಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತರೂ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ಸರ್ಕಾರಿ ನೌಕರಿ ಕಾರಣಕ್ಕೆ ಕೆಲವು ಕುಟುಂಬಗಳು ಮೈಸೂರು, ಬೆಂಗಳೂರು ಇತರ ನಗರಗಳಿಗೆ ವಲಸೆ ಹೋಗಿವೆ. ಅವರನ್ನು ಒಂದೇ ವೇದಿಕೆಗೆ ಕರೆತಂದು ಬಳ್ಳೇಕೆರೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ನಗುವನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಎಸ್‌. ಸುರೇಂದ್ರ ಹೇಳುತ್ತಾರೆ.

ಗಣಂಗೂರು ನಂಜೇಗೌಡ

ಪ್ರತಿಕ್ರಿಯಿಸಿ (+)