ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

7

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

Published:
Updated:

ಉಳ್ಳಾಲ: ಕೈರಂಗಳ ಪುಣ್ಯಕೋಟಿ ನಗರದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ರಾಜಕೀಯ ಪ್ರೇರಿತವಾಗಿದ್ದು, ಅಲ್ಲಿ ಸಚಿವ ಖಾದರ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಕಲ್ಲಡ್ಕ ಭಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದರು.

ಕೈರಂಗಳ ಪುಣ್ಯಕೋಟಿನಗರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸಚಿವ ಖಾದರ್ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿ ತೊಕ್ಕೊಟ್ಟುವಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈರಂಗಳ ಗೋ ದರೋಡೆ ಪ್ರಕರಣವನ್ನು ಸಚಿವ ಖಾದರ್ ಅವರು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರಿಗೆ ಕಠಿಣ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಇದೀಗ ಉಪವಾಸವನ್ನು ರಾಜಕೀಯವಾಗಿ ಬಳಸಿ ಸಚಿವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ದೇವಸ್ಥಾನಗಳಲ್ಲಿ ಮತ್ತೆ ಬ್ರಹ್ಮಕಲಶ ಮಾಡಿಸಿ ಎಂದು ಹೇಳಲು ಕಲ್ಲಡ್ಕ ಭಟ್ ಯಾರು ಎಂದು ಪ್ರಶ್ನಿಸಿದ ಅವರು, ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ಬರುವವರನ್ನು ತಾಂಬೂಲ ನೀಡಿ ಗೌರವಿಸುವುದು ಸಂಸ್ಕೃತಿ. ಅದನ್ನು ಕಲ್ಲಡ್ಕ ಭಟ್ ಮೊದಲಿಗೆ ಅರಿಯಲಿ. ರಾಜಕೀಯಕ್ಕಾಗಿ ಕಲ್ಲಡ್ಕ ಭಟ್ ಅವರೇ ದನವನ್ನು ಕದ್ದಿರಬಹುದು ಎಂದು ಆರೋಪಿಸಿದರು.

ಸಚಿವರು ಸೋಮೇಶ್ವರ, ತಲಪಾಡಿ, ಕ್ವಾಟ್ರಗುತ್ತು, ದೇವಂದಬೆಟ್ಟು ದೇವಸ್ಥಾನಗಳಿಗೆ ಅನುದಾನ ಒದಗಿಸಿದ್ದಾರೆ. ಪಜೀರು ಕಾರ್ತಿಕ್ ರಾಜ್ ಪ್ರಕರಣದಲ್ಲಿ ಆರೋಪಿಯನ್ನು ತಮ್ಮ ಜತೆಗೆ ಕುಳ್ಳಿರಿಸಿ ಸಚಿವ ಖಾದರ್ ಮೇಲೆ ಎತ್ತಿಕಟ್ಟುವ ಕೆಲಸವನ್ನು ಸಂಘ ಪರಿವಾರ ಮಾಡಿದ ಇತಿಹಾಸವಿದೆ. ಚುನಾವಣೆ ನೀತಿ ಸಂಹಿತೆ ನಡುವೆ ಧರ್ಮವನ್ನು ಎತ್ತಿಕಟ್ಟುವ ಕೆಲಸ ಮಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಭಗವತಿ ಕ್ಷೇತ್ರ ಉಪಾಧ್ಯಕ್ಷ ಸುರೇಶ್ ಭಟ್ನಗರ, ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ರಮೇಶ್ ಕೊಲ್ಯ, ಕೊರಗಜ್ಜ ಸೇವಾ ಸಮಿತಿ ತೊಕ್ಕೊಟ್ಟು ಇದರ ರೋಹಿತ್ ಉಳ್ಳಾಲ್, ಮಲಯಾಳಿ ಚಾಮುಂಡಿ ದೇವಸ್ಥಾನ ಕನೀರುತೋಟದ ಅಧ್ಯಕ್ಷ ಶ್ರೀಧರ ಕನೀರುತೋಟ, ಅಸೈಗೋಳಿ ಅಯ್ಯಪ್ಪ ದೇವಸ್ಥಾನ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಅಸೈಗೋಳಿ, ಪುರುಷೋತ್ತಮ ಅಂಚನ್ ಬಗಂಬಿಲ, ದೀಪಕ್ ಪಿಲಾರ್, ಹರೀಶ್ ಮಡ್ಯಾರ್, ಸಂಪತ್ ಮಡ್ಯಾರ್, ಕಿಶೋರ್ ಗಟ್ಟಿ ಮುಂಡೋಳಿ, ಧಿರಜ್ ಶೆಟ್ಟಿ, ರಂಜಿತ್ ಶೆಟ್ಟಿ ಮಡ್ಯಾರ್, ರವಿ ಶೆಟ್ಟಿ ಪಿಲಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry