ಭಾನುವಾರ, ಡಿಸೆಂಬರ್ 15, 2019
19 °C
40 ಡಿಗ್ರಿ ಸೆಲ್ಸಿಯಸ್‌ ದಾಟಿದ ಜಿಲ್ಲೆ ತಾಪಮಾನ, ತಂಪು ಪಾನೀಯ ಮೊರೆ ಹೋದ ಜನರು

ಬಿಸಿಲ ಝಳಕ್ಕೆ ಬಸವಳಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲ ಝಳಕ್ಕೆ ಬಸವಳಿದ ಜನ

ಜಾಲಹಳ್ಳಿ: ಪಟ್ಟಣದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಬಿಸಿಲ ತಾಪಕ್ಕೆ ಜನರು ಬಸವಳಿದಿದ್ದಾರೆ. ಒಂದು ವಾರದಿಂದ ಗರಿಷ್ಠ ತಾಪಮಾನ 39–40 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದ್ದು, ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಪಟ್ಟಣದಲ್ಲಿ ಹೆಚ್ಚಿನ ಜನ ದಟ್ಟಣೆ ಕಂಡು ಬರುತ್ತಿಲ್ಲ.

ಬಿಸಿಲಿನ ಪ್ರಖರತೆ, ಬಿಸಿ ಗಾಳಿಗೆ ಜನರು ತತ್ತರಿಸಿದ್ದಾರೆ. ಭೂಮಿ ಕಾದ ಕಾವಲಿಯಂತಾಗಿದೆ. ಬೆಳಿಗ್ಗೆ 10 ಗಂಟೆ ದಾಟಿದರೆ, ಮನೆಯಿಂದ ಹೊರ ಬರಲಾಗದ ಸ್ಥಿತಿ. ಬಿಸಿಲ ಝಳಕ್ಕೆ ಒಳಗೂ ಇರಲಾಗುತ್ತಿಲ್ಲ. ಮನೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಇದ್ದರೂ ಸೆಖೆ ತಡೆಯಲು ಆಗುತ್ತಿಲ್ಲ ಎಂದು ಜನರು ಹೇಳುತ್ತಾರೆ.

ಹಗಲು ಹೊತ್ತಿನಲ್ಲಿ ಸೂರ್ಯ ಬೆಂಕಿಯಂಥ ಕಿರಣಗಳಿಗೆ ಕಾದು ಕಾವಲಿಯಂತಾಗುವ ಭೂಮಿ ರಾತ್ರಿಯಿಡೀ ಕಾವನ್ನು ಹೊರ ಉಗುಳುತ್ತಿದೆ. ಅದು ಬಿಸಿಗಾಳಿಯಾಗಿ ಪರಿವರ್ತನೆಗೊಂಡು, ಉಸಿರಾಡಲು ಕಷ್ಟ ಎನ್ನುವಂಥ ವಾತಾವರಣ ನಿರ್ಮಾಣ ಆಗುತ್ತದೆ. ರಾತ್ರಿಯಿಡೀ ಸೆಖೆ ಕಾಡುವುದರಿಂದ ನಿದ್ದೆ ಬರುವುದಿಲ್ಲ’ ಎಂದು ಬಟ್ಟೆ ವ್ಯಾಪಾರಿ ಶೈಲೇಶ ಕುಮಾರ ತಿಳಿಸಿದರು.

‘ಬಿಸಿಲ ಝಳಕ್ಕೆ ಚಿಕ್ಕ ಮಕ್ಕಳಿಗೂ ಕಷ್ಟವಾಗುತ್ತಿದೆ. ರಾತ್ರಿಯಿಡೀ ನಿದ್ದೆಯಿಲ್ಲದೆ ಹಾಸಿಗೆಯಲ್ಲಿ ಹೊರಳಾಡುತ್ತವೆ. ತಾಸಿಗೊಮ್ಮೆ ಎಚ್ಚರಗೊಂಡು ನೀರು ಬೇಡುತ್ತವೆ. ಇನ್ನೂ ಮುಂದಿನ ಎರಡು ತಿಂಗಳು ಕಡು ಬೇಸಿಗೆ. ಹೇಗೆ ನಿಭಾಯಿಸಬೇಕು ಎಂಬುದೇ ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಯುವಕರು ಹಾಗೂ ಚಿಕ್ಕ ಮಕ್ಕಳು ಒಂದು ವಾರದಿಂದ ಪ್ರತಿನಿತ್ಯ ಪಟ್ಟಣದ ರಂಗನಾಥ ದೇವಸ್ಥಾನಕ್ಕೆ ಸೇರಿದ ಕಲ್ಯಾಣಿಯಲ್ಲಿ ಈಜು ಆಟಕ್ಕಿಳಿಯುವುದು ಸಾಮಾನ್ಯವಾಗಿದೆ.ಬಿಸಿಲು ಹೆಚ್ಚಿದಂತೆ ಕಣ್ಣುರಿ, ಕಾಲುರಿ ಹೆಚ್ಚುತ್ತಿದೆ. ಮಧ್ಯಾಹ್ನದ ವೇಳೆ ಹೊರಗೆ ಸಂಚರಿಸುವವರ ಸಂಖ್ಯೆ ಇಳಿಮುಖವಾಗಿದೆ. ವಹಿವಾಟು ಬಂದ್‌ ಆಗಿ ಬಹುತೇಕ ಕೆಲಸಗಳು ಸ್ಥಗಿತಗೊಂಡಿರುತ್ತವೆ. ಮಾರ್ಚ್‌ ಅಂತ್ಯದಲ್ಲೇ ಬಿಸಿಲ ಝಳ ಹೆಚ್ಚಿದೆ. ಈ ತಾಪಮಾನಕ್ಕೆ ಸಹಜವಾಗಿಯೇ ಮನುಷ್ಯನ ದೇಹದಲ್ಲಿನ ನೀರಿನಾಂಶ ಸಾಕಷ್ಟು ಕಡಿಮೆಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರನ್ನು ಆಗಾಗ್ಗೆ ಕುಡಿಯದಿದ್ದರೆ ಮೂತ್ರ ಸಮಸ್ಯೆ ಬಾಧಿಸುತ್ತದೆ ಎಂದು ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಆರ್‌.ಎಸ್‌ ಹುಲಿಮನಿ ತಿಳಿಸಿದರು.

ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ಶುದ್ಧ ನೀರನ್ನು ಕುಡಿಯದಿದ್ದರೆ ಉರಿ ಮೂತ್ರದ ಸಮಸ್ಯೆ ಕಾಡಲಿದೆ. ಇದರ ಜತೆಗೆ ಕಿಡ್ನಿಯಲ್ಲಿ ಹರಳು ಸೃಷ್ಟಿಯಾಗಿ ಸಮಸ್ಯೆ ಉಲ್ಬಣಿಸಲಿದೆ. ವಯೋವೃದ್ಧರ ಪಾಲಿಗೆ ಈ ತಾಪಮಾನ ಅಪಾಯಕಾರಿ ಆರೋಗ್ಯದಲ್ಲಿ ಏರುಪೇರು ಮೂಡಿಸಲಿದೆ. ಅಲರ್ಜಿ ಆಗಲಿದೆ’ ಎಂದು ವಿವರಿಸಿದರು.

‘ಅತಿ ಬಿಸಿಲ ಝಳ ಯಾರಿಗೆ ಬೇಕಾದರೂ (ಸನ್‌ ಸ್ಟ್ರೋಕ್‌) ಹೊಡೆಯಬಹುದು. ಚಿಕ್ಕಮಕ್ಕಳು–ವಯೋವೃದ್ಧರು ಬಿಸಿಲು ಹೆಚ್ಚಿದ್ದ ಸಂದರ್ಭ ಹೊರ ಹೋಗದಿರುವುದು ಒಳ್ಳೆಯದು, ಬಿಸಿಲಿಗೆ ಹೋಗುವುದನ್ನು ಕಡಿಮೆ ಮಾಡುವುದು. ತಂಪು ಪಾನೀಯಗಳ ಸೇವನೆ. ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ದಿನಕ್ಕೆ ಕನಿಷ್ಠ ಐದು ಲೀಟರ್‌ಗೂ ಅಧಿಕ ಶುದ್ಧ ನೀರು ಕುಡಿಯುವ ಮೂಲಕ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಯತ್ನಿಸಬೇಕು’ ಎಂದು ಡಾ. ನಾಗರಾಜ ಕಕ್ಕಲದೊಡ್ಡಿ ತಿಳಿಸಿದರು.

**

ತಂಪು ಪಾನೀಯ ಮತ್ತು ಹಣ್ಣುಗಳ ಸೇವನೆಯಿಂದ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿ ಕೊಳ್ಳಬಹುದು. ಅತಿಯಾದ ಬಿಸಿಲು ಇರುವ ಕಾರಣ ಜನರು ಮನೆಯಿಂದ ಹೊರಹೋಗದಿರುವುದು ಒಳಿತು – ಡಾ. ನಾಗರಾಜ ಕಕ್ಕಲದೊಡ್ಡಿ , ವೈದ್ಯ.

**

ಅಲಿಬಾಬಾ ಪಟೇಲ್‌

ಪ್ರತಿಕ್ರಿಯಿಸಿ (+)