ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನ: ಒಂದು ಬೌದ್ಧಿಕ ಕಸರತ್ತು

Last Updated 6 ಏಪ್ರಿಲ್ 2018, 11:34 IST
ಅಕ್ಷರ ಗಾತ್ರ

ಚಿತ್ರ: ವರ್ತಮಾನ
ನಿರ್ಮಾಪಕ: ಮನು ಬಿಲ್ಲೆಮನೆ ಮತ್ತು ಹೇಮಾವತಿ ಟಿ.ಸಿ.
ನಿರ್ದೇಶನ: ಉಮೇಶ್ ಅಂಶಿ
ತಾರಾಗಣ: ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ, ಸ್ವಪ್ನರಾಜ್, ದೀಪಕ್

ಒಂದಿಷ್ಟು ಯುವಕರಲ್ಲಿ ವ್ಯವಸ್ಥೆಯ ಬಗ್ಗೆ ಇರುವ ಆಕ್ರೋಶ. ಅದೃಷ್ಟವಂತರಂತೆ ಕಾಣುವವರೆಲ್ಲ ಈ ಹಿಂದೆ ಮಾಡಬಾರದ್ದನ್ನು ಮಾಡಿರುವವರು ಎನ್ನುವ ನಂಬಿಕೆ. ಒಂದಿಷ್ಟು ಕೊಲೆಗಳು. ಚಿತ್ರದ ಪ್ರಮುಖ ಪಾತ್ರಧಾರಿ ಹೊಂದಿರುವ ಕೆಲವು ಭ್ರಮೆಗಳು ಅಥವಾ ಕನಸುಗಳು. ಆ ನಾಯಕನಲ್ಲಿರುವ ‘ಅದೇನೋ ಒಂದರ’ ಹುಡುಕಾಟ. ನಾಯಕನಲ್ಲಿ ನೈತಿಕ ಪ್ರಜ್ಞೆಯನ್ನು ಎಚ್ಚರಿಸುವ ಒಂದು ಪಾತ್ರ...

ಶುಕ್ರವಾರ ತೆರೆಗೆ ಬಂದಿರುವ, ಸಂಚಾರಿ ವಿಜಯ್ ಮತ್ತು ಸಂಜನಾ ಪ್ರಕಾಶ್ ಅಭಿನಯದ ಸಿನಿಮಾ ‘ವರ್ತಮಾನ’ದ ಬಿಡಿ ಚಿತ್ರಗಳು ಇವು. ಈ ಬಿಡಿ ಚಿತ್ರಗಳನ್ನೆಲ್ಲ ಒಂದು ಚೌಕಟ್ಟಿನೊಳಗೆ ಇಟ್ಟುಕೊಂಡು ನೋಡಿದಾಗ ಮೂರ್ತ ರೂಪವೊಂದು ಸಿಗುತ್ತದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ, ಚಿತ್ರಗಳನ್ನೆಲ್ಲ ಅನುಕ್ರಮವಾಗಿ ಜೋಡಿಸಿಕೊಳ್ಳುತ್ತ ಹೋಗುವುದು ಹೇಗೆ ಎಂಬ ಇನ್ನೊಂದು ಪ್ರಶ್ನೆ ಎದುರಾಗಬಹುದು!

ಉಮೇಶ್‌ ವಂಶಿ ನಿರ್ದೇಶನದ ಈ ಸಿನಿಮಾ ವೀಕ್ಷಕನಿಗೆ ಮನೋರಂಜನೆ ನೀಡುವುದಕ್ಕಿಂತಲೂ ಹೆಚ್ಚಾಗಿ ಅವನ ಮನಸ್ಸಿನಲ್ಲಿ ಗೊಂದಲಗಳನ್ನು ಮೂಡಿಸುತ್ತದೆ. ‘ಈ ಸಿನಿಮಾದಲ್ಲಿ ಯಾವುದೂ ಅನುಕ್ರಮಣಿಕೆಯಲ್ಲಿ ಇಲ್ಲ. ಯಾವುದೇ ಫಾರ್ಮುಲಾ ಇಲ್ಲದೆ ಮಾಡಿದ ಸಿನಿಮಾ ಇದು’ ಎಂದು ಚಿತ್ರತಂಡ ಸಿನಿಮಾ ಬಿಡುಗಡೆಗೆ ಮೊದಲೇ ಸ್ಪಷ್ಟಪಡಿಸಿತ್ತು. ಸಿನಿಮಾ ವೀಕ್ಷಣೆ ಸಾಗಿದಂತೆಲ್ಲ, ‘ಸಿನಿತಂಡ ಅದೆಷ್ಟು ಪ್ರಾಮಾಣಿಕವಾಗಿ ಈ ಮಾತುಗಳನ್ನು ಹೇಳಿತ್ತಲ್ಲವೇ’ ಎಂದು ಮನಸ್ಸಿಗೆ ಅನಿಸಲು ಆರಂಭವಾಗುತ್ತದೆ!

ಸಿನಿಮಾದ ನಾಯಕ ಅನಂತ್ (ಸಂಚಾರಿ ವಿಜಯ್) ಮತ್ತು ಅವನ ಮೂವರು ಸ್ನೇಹಿತರು ಒಂದೆಡೆ ಕುಳಿತುಕೊಂಡು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದು, ‘ಒಳ್ಳೆಯ’ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಶ್ರೀಮಂತನೊಬ್ಬನನ್ನು ಅಪಹರಿಸಿ ಹಣ ವಸೂಲಿ ಮಾಡುವುದು, ಆ ಅಕ್ರಮ ಹಣಕ್ಕಾಗಿ ಸ್ನೇಹಿತರ ನಡುವೆಯೇ ಸಂಘರ್ಷ ಉಂಟಾಗಿ ಅನಂತ್‌ ಹೊರತುಪಡಿಸಿ ಇನ್ನುಳಿದವರೆಲ್ಲರ ಕೊಲೆ ಆಗುವುದು... ಇವು ‘ವರ್ತಮಾನ’ದಲ್ಲಿ ಗ್ರಹಿಸಲು ಸಾಧ್ಯವಾಗುವ ಕೆಲವು ದೃಶ್ಯಾವಳಿಗಳು.

ಇದಾದ ನಂತರ ಅನಂತ್‌ ಭ್ರಾಂತಿಗೆ ಒಳಗಾದಂತೆ ವರ್ತಿಸುವುದು, ಯಾರನ್ನೋ ಹುಡುಕಿಕೊಂಡು ಅಲೆಯುವುದು, ಹುಡುಕಾಟದಲ್ಲಿ ಆತ ತನ್ನದೇ ಬಿಂಬವನ್ನು ಕಂಡುಕೊಳ್ಳುವುದು... ಇವೆಲ್ಲ ಒಂದು ಅಮೂರ್ತ ಚಿತ್ರದಂತೆ ಭಾಸವಾಗುತ್ತವೆ. ಈ ದೃಶ್ಯಗಳನ್ನು ಒಂದು ಪರಿಪ್ರೇಕ್ಷ್ಯದಲ್ಲಿ ಇಟ್ಟುಕೊಂಡು ಗ್ರಹಿಸುವುದು ಹೇಗೆಂಬ ಗೊಂದಲಕ್ಕೆ ವೀಕ್ಷಕ ಒಳಗಾದರೆ ಆಶ್ಚರ್ಯವೇನೂ ಇಲ್ಲ. ಇದೇ ವೇಳೆ, ಸಿನಿಮಾದ ಇನ್ನೊಂದು ಮಗ್ಗುಲಿನಲ್ಲಿ ಕಾಣಿಸಿಕೊಳ್ಳುವ ಕೆಲವು ಪಾತ್ರಧಾರಿಗಳು, ಅವರ ನಡುವಣ ಸಂಭಾಷಣೆಗಳು ಮತ್ತು ಅವರು ನಡೆಸುವ ಕೊಲೆಗಳನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ ಎಂಬುದೂ ಬಗೆಹರಿಯುವುದಿಲ್ಲ.

ಈ ಸಿನಿಮಾದ ಪೋಸ್ಟರ್‌ಗಳಲ್ಲಿ ‘A movie for extraordinary minds’ (ಅಸಾಧಾರಣ ಮನಸ್ಸಿನವರಿಗಾಗಿ ಒಂದು ಸಿನಿಮಾ) ಎನ್ನುವ ಮಾತು ಕಾಣಿಸುತ್ತದೆ. ಈ ಮಾತಿಗೆ ತಲೆದೂಗದೆ ವಿಧಿಯಿಲ್ಲ ಎನ್ನಬೇಕು! ಈ ಸಿನಿಮಾ ಒಂದು ಬೌದ್ಧಿಕ ಕಸರತ್ತಿನಂತೆ ಕಾಣಿಸುತ್ತದೆಯೇ ವಿನಾ, ಮನೋರಂಜನೆಯನ್ನು ಬಯಸಿ ಸಿನಿಮಾ ಮಂದಿರಗಳಿಗೆ ಬರುವ ವೀಕ್ಷಕನನ್ನು ಗುರಿಯಾಗಿಟ್ಟುಕೊಂಡು ಇದನ್ನು ಮಾಡಿರುವಂತೆ ಕಾಣಿಸುವುದಿಲ್ಲ. ಸಿನಿಮಾ ವೀಕ್ಷಿಸಿದ ನಂತರ ‘ಇದನ್ನು ತುಸು ಅರ್ಥ ಮಾಡಿಸಿಕೊಡಿ’ ಎಂದು ಯಾರಲ್ಲಿ ಕೇಳಬಹುದು ಎಂಬ ಬಗ್ಗೆ ‘ಸಾಮಾನ್ಯ ಮನಸ್ಸು’ ಇರುವವರು ಆಲೋಚಿಸಿದರೆ ತಪ್ಪಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT