ಸೋಮವಾರ, ಆಗಸ್ಟ್ 10, 2020
26 °C
ಕಾಮನ್‌ವೆಲ್ತ್ ವೇಟ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿಗೆದ್ದ ಗುರುರಾಜ್‌

ಪಿಕಪ್ ಚಾಲಕನ ಪುತ್ರನ ರಜತ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಕಪ್ ಚಾಲಕನ ಪುತ್ರನ ರಜತ ಸಾಧನೆ

ಕುಂದಾಪುರ: ಆಸ್ಟೇಲಿಯಾದ ಗೋಲ್ಡ್‌ಕೋಸ್ಟ್‌ದಲ್ಲಿ ನಡೆಯುತ್ತಿರುವ 2018 ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೊದಲ ದಿನ ನಡೆದ 56 ಕೆ.ಜಿ ವಿಭಾಗದ ಪುರುಷರ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕುಂದಾಪುರ ತಾಲ್ಲೂಕಿನ ಚಿತ್ತೂರಿನ ಗುರುರಾಜ್‌ ಬೆಳ್ಳಿಯ ಪದಕವನ್ನು ಪಡೆದುಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಸಾಧನೆ ಮಾಡಿದ್ದಾರೆ.

56 ಕೆ.ಜಿ ಪುರುಷರ ವಿಭಾಗದಲ್ಲಿ ಭಾಗವಹಿಸಿದ್ದ ಅವರು ಒಟ್ಟು ಮೂರು ಸುತ್ತಿನಲ್ಲಿ 249 ಕೆ.ಜಿ ಭಾರ ಎತ್ತುವ ಮೂಲಕ 2ನೇ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದು ಸಾಧನೆ ತೋರಿದ್ದಾರೆ. 261 ಕೆ.ಜಿ ಭಾರ ಎತ್ತಿದ್ದ ಮಲೇಷ್ಯಾದ ಇಜಾರ್‌ ಅಹ್ಮದ್‌ ಚಿನ್ನದ ಪದಕ ಹಾಗೂ 248 ಕೆ.ಜಿ ಭಾರ ಎತ್ತಿದ್ದ ಶ್ರೀಲಂಕಾದ ಲಕ್ಮಲ್‌ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಗ್ರಾಮೀಣ ಪ್ರತಿಭೆ: ತಾಲ್ಲೂಕಿನ ಮಲೆನಾಡ ಭಾಗದ ವಂಡ್ಸೆ ಸಮೀಪದ ಚಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡು ಎಂಬಲ್ಲಿನ ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರ್ತಿ ದಂಪತಿಗಳ ಪುತ್ರನಾಗಿರುವ ಗುರುರಾಜ್‌ ಪ್ರಸ್ತುತ ಭಾರತೀಯ ವಾಯುಸೇನೆಯ ಉದ್ಯೋಗಿ. 2016 ರಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರ ಎತ್ತುವ ಪಂದ್ಯದಲ್ಲಿ ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದ ಇವರಿಗೆ ಏಕಲವ್ಯ ಪ್ರಶಸ್ತಿ ದೊರಕಿತ್ತು.

ದೇಶದ ರಾಜಸ್ಥಾನ, ತಮಿಳುನಾಡು, ಪಂಜಾಬ್‌ ಮುಂತಾದ ಕಡೆಗಳಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಾಗೂ ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಪಂದ್ಯಾಟಗಳಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿ ಬಹುಮಾನವನ್ನು ಪಡೆಯುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪಿಕ್‌ಪ್‌ ಗೂಡ್ಸ್‌ ಗಾಡಿಯ ಚಾಲಕರಾಗಿರುವ ಮಹಾಬಲ ಪೂಜಾರಿಯವರ 6 ಮಕ್ಕಳಲ್ಲಿ ಗುರುರಾಜ್‌ 5ನೇಯವರು. ಕಿತ್ತು ತಿನ್ನುವ ಬಡತನದ ನಡುವೆಯೂ ಸಾಧನೆ ತೋರುವ ಮಗನ ಪ್ರತಿಭೆಗೆ ಆಸರೆಯಾದ ತಂದೆ–ತಾಯಿ. ವಂಡ್ಸೆಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸದ ಬಳಿಕ ಕೊಲ್ಲೂರಿನಲ್ಲಿ ಶ್ರೀ ಮೂಕಾಂಬಿಕಾ ಶಿಕ್ಷಣ ಸಂಸ್ಥೆಗೆ ಸೇರಿದ್ದ ಅವರಿಗೆ ಪದವಿಪೂರ್ವಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕೇಶ್‌ ಶೆಟ್ಟಿ ಹೊಸ್ಮಟ ಸ್ಪೂರ್ತಿಯ ಸೆಲೆಯಾಗಿದ್ದರು. ಕುಸ್ತಿ ಪಟುವಾಗಿ ಕ್ರೀಡಾ ಸಾಧನೆಯಲ್ಲಿ ಭರವಸೆ ಮೂಡಿಸಿದ್ದ ಅವರು ನಂತರದ ದಿನಗಳಲ್ಲಿ ವೇಟ್‌ ಲಿಫ್ಟಿಂಗ್‌ ಆಯ್ಕೆ ಮಾಡಿಕೊಂಡಿ

ದ್ದರು. ಪದವಿ ಶಿಕ್ಷಣಕ್ಕಾಗಿ ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಸೇರ್ಪಡೆಯಾಗಿದ್ದ ಅವರು ಕಾಲೇಜಿನ ಕೋಚ್‌ ರಾಜೇಂದ್ರಪ್ರಸಾದ್‌ ಅವರ ಗರಡಿಯಲ್ಲಿ ವೇಟ್‌ ಲಿಫ್ಟಿಂಗ್‌ನ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಬದುಕಿನಲ್ಲಿ ಏನಾದರೂ ಸಾಧನೆ ಮಾಡಲೇ ಬೇಕು ಎನ್ನುವ ಉತ್ಕಟ ಬಯಕೆಗಳಿಂದಾಗಿ ಸಾಧನೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಿದ್ದಾರೆ. ಕಾಮನ್‌ವೆಲ್ತ್‌ ಪಂದ್ಯಾಟಕ್ಕಾಗಿ ಆಸ್ಟೇಲಿಯಾಕ್ಕೆ ತೆರಳಿದ್ದ ವೇಳೆ ಕುಟುಂಬಿಕರಿಗೆ ಹಾಗೂ ಸ್ನೇಹಿತರಿಗೆ ದೂರವಾಣಿ ಕರೆಯನ್ನು ಮಾಡಿದ್ದ ಅವರು ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿರುವ ಕುರಿತು ಹೇಳಿಕೊಂಡಿದ್ದರು.

ಗುರುರಾಜ್‌ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲ ತಾಣಗಳ ಮೂಲಕ ವೈರಲ್‌ ಅಗುತ್ತಿದ್ದಂತೆ ಚಿತ್ತೂರಿನ ಜಡ್ಡುವಿನಲ್ಲಿ ಇರುವ ಅವರ ಮನೆಗೆ ಮಾಧ್ಯಮದವರು ಸೇರಿದಂತೆ ಹಿತೈಷಿಗಳು ಹಾಗೂ ಕುಟುಂಬಿಕರು ಭೇಟಿ ನೀಡಿ ಕುಟುಂಬಿಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ. ತಂದೆ ಮಹಾಬಲ ಪೂಜಾರಿಯವರ ಹಾಗೂ ಗುರುರಾಜ್‌ ಅವರ ಸಹೋದರರ ಮೊಬೈಲ್‌ ದೂರವಾಣಿ ಮೂಲಕವೂ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

**

ಗುರು ನಮ್ಮ ಹೆಮ್ಮೆಯ ವಿದ್ಯಾರ್ಥಿ. ಕಾಮನ್‌ವೆಲ್ತ್‌ನಲ್ಲಿ ಅವರಿಗೆ ಈ ಭಾರಿ ಚಿನ್ನ ಬರುತ್ತದೆ ಎನ್ನುವ ನಿರೀಕ್ಷೆ ನಮಗೆಲ್ಲ ಇತ್ತು. ಇದೀಗ ಬೆಳ್ಳಿ ಪದಕ ಬಂದಿರುವುದು ಅವರ ಸಾಧನೆಯ ಕಿರೀಟಕ್ಕೆ ಸೇರಿರುವ ಗರಿಗಳಲ್ಲಿ ಒಂದು. ಮುಂದೆ ಇನ್ನಷ್ಟು ಸಾಧನೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ – 

ಸುಕೇಶ್‌ ಶೆಟ್ಟಿ ಹೊಸ್ಮಟ. ಕ್ರೀಡಾ ಶಿಕ್ಷಕ.

**

ನಮ್ಮೂರಿನ ಯುವಕನಿಗೆ ಅಂತರರಾಷ್ಟ್ರೀಯ ಗೌರವ ಬಂದಿರುವುದು ನಮಗೆಲ್ಲ ಹೆಮ್ಮೆ ಎನಿಸುತ್ತಿದೆ. ಭಾರತಕ್ಕೆ ಬಂದ ಬಳಿಕ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತೇನೆ – ಕೆ.ಗೋಪಾಲ ಪೂಜಾರಿ, ಬೈಂದೂರು ಶಾಸಕ.

**

ರಾಜೇಶ್‌ ಕೆ.ಸಿ ಕುಂದಾಪುರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.