ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣ್ಣು–ಕಣ್ಣು’ ಛಾಯಾಚಿತ್ರ ಪ್ರದರ್ಶನ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದ ರೈತ ಮಹಿಳೆಯರು ಮತ್ತು ಯುವಜನರ ಬದುಕು, ಬವಣೆ, ಜೀವನಶೈಲಿ, ಕೃಷಿ ಚಟುವಟಿಕೆ ಸೇರಿದಂತೆ ಒಟ್ಟಾರೆ ದೈನಂದಿನ ಬದುಕಿನ ಚಿತ್ರಣವನ್ನು ಅನಾವರಣಗೊಳಿಸುವ ‘ಮಣ್ಣು-ಕಣ್ಣು’ ಛಾಯಾಚಿತ್ರ ಪ್ರದರ್ಶನ ಇದೇ 7ರಿಂದ 13ರವರೆಗೆ ನಗರದ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ನಡೆಯಲಿದೆ.

'ವನಸ್ತ್ರೀ’, 'ವನ್ಯ' ಮತ್ತು 'ಹೊನ್ನೇರು: ಗ್ರಾಮೀಣ ಯುವ ಸಮೂಹ' ಜಂಟಿಯಾಗಿ ‘ಮಣ್ಣು-ಕಣ್ಣು’ ಛಾಯಾಚಿತ್ರ ಪ್ರದರ್ಶನ ಆಯೋಜಿಸಿವೆ. ಶಿರಸಿಯ ರೈತ ಮಹಿಳೆಯರು, ಚಾಮರಾಜನಗರದ ಯುವಜನರ ಭೂಮಿ ಮತ್ತು ಬದುಕಿನ ಚಿತ್ರಣವನ್ನು ಇದು ಕಟ್ಟಿಕೊಡಲಿದೆ. ಇಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಛಾಯಾಚಿತ್ರಗಳನ್ನು ಸ್ವತಃ ರೈತ ಮಹಿಳೆಯರು ಮತ್ತು ಗ್ರಾಮೀಣ ಭಾಗದ ಯುವ ಜನರೇ ಕ್ಲಿಕ್ಕಿಸಿರುವುದು ವಿಶೇಷ.

ಕ್ಯಾಮೆರಾ ಬಳಸುವ ವಿಧಾನದ ಕುರಿತು ಈ ಎನ್‌ಜಿಒಗಳು ನಡೆಸಿದ ಕಾರ್ಯಾಗಾರದಲ್ಲಿ ವಿಶೇಷ ತರಬೇತಿ ನೀಡಿ, ಅವರಿಗೆ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ನೀಡಲಾಗಿತ್ತು. ಈ ಕ್ಯಾಮೆರಾಗಳಲ್ಲಿ ಅವರು ಸೆರೆಹಿಡಿದ 70ಕ್ಕೂ ಹೆಚ್ಚು ಛಾಯಾಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರತಿ ಛಾಯಾಚಿತ್ರದ ಜತೆಗೆ ಅದರ ಶೀರ್ಷಿಕೆ, ಚಿತ್ರ ತೆಗೆದವರ ಹೆಸರು, ವ್ಯಕ್ತಿ ಪರಿಚಯವೂ ಇರಲಿದೆ. ಛಾಯಾಚಿತ್ರಗಳ ಮಾರಾಟವೂ ನಡೆಯಲಿದೆ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕರೂ ಆಗಿರುವ ಆರ್ಟಿಸ್ಟ್‌ ಕ್ಯುರೇಟರ್‌ ಸುರೇಶ್‌ ಕುಮಾರ್‌.

‘ಈ ಪ್ರದರ್ಶನದ ಮೂಲಕ, ಗ್ರಾಮೀಣ ಜನರಿಗೆ ಅಮೂಲ್ಯ ಛಾಯಾಗ್ರಹಣದ ವೇದಿಕೆ ಒದಗಿಸಿಕೊಡುವುದು ನಮ್ಮ ಮುಖ್ಯ ಉದ್ದೇಶ. ಅನೇಕ ಅಪರೂಪದ ತಾಣಗಳು, ಜೀವನದೃಶ್ಯಗಳನ್ನು ವಿಭಿನ್ನವಾಗಿ, ತಮ್ಮದೇ ಆದ ಸೃಜನಾತ್ಮಕ ರೀತಿಯಲ್ಲಿ ಪರಿಚಯಿಸಿಕೊಡುವುದಕ್ಕೆ ಇದೊಂದು ಅವಕಾಶ’ ಎನ್ನುತ್ತಾರೆ ಅವರು.

‘ಬಾನು-ಭೂಮಿ, ಗಿಡ-ಮರ, ಸಮುದಾಯ-ಕುಟುಂಬ, ಬೀದಿ-ಮನೆಗಳಲ್ಲಿ ಕಂಡುಬರುವ ಅಪರೂಪದ ಚಿತ್ರಣಗಳು ಇಲ್ಲಿವೆ. ಕೃಷಿ ಮತ್ತು ಹಳ್ಳಿಗಾಡು ಭೂಮಿ ವಿಶಾಲವಾಗಿ, ಸುಂದರವಾಗಿರುವ ಜೊತೆಗೆ ಅಲ್ಲಿನ ಬದುಕಿನ ಒತ್ತಡಗಳೂ ಸಾಕಷ್ಟಿವೆ. ದಿನನಿತ್ಯದ ಕಷ್ಟಗಳ ಒತ್ತಡವಲ್ಲದೇ ಬದುಕಿನ ಸಂತಸಗಳನ್ನು ಕಂಡಿರುವ ಈ ವಿದ್ಯಾರ್ಥಿಗಳು ತಮ್ಮ ಬದುಕಿನ ಲಯದ ಇಣುಕು ನೋಟವನ್ನು ಛಾಯಾಚಿತ್ರಗಳ ಮೂಲಕ ಅನಾವರಣಗೊಳಿಸಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

‘ಮಣ್ಣು-ಕಣ್ಣು ಪ್ರದರ್ಶನವು ಛಾಯಾಚಿತ್ರಗಳ ಸಂಗ್ರಹವಷ್ಟೇ ಅಲ್ಲ. ಸಮಕಾಲೀನ ಮಾಧ್ಯಮ ಮತ್ತು ಸಾಂಪ್ರದಾಯಿಕ ಜನಪದ ಕಲೆಗಳನ್ನು ಸಮೀಕರಿಸಿ, ಗ್ರಾಮೀಣ ಬದುಕಿನ ಅನುಭವಗಳನ್ನು ಕಥಾವಸ್ತುವಾಗಿ ಹೆಣೆದಿರುವ ಒಂದು ವಿಶಿಷ್ಟ ಛಾಯಾಚಿತ್ರ ಪ್ರದರ್ಶನ. ಈ ಪ್ರಯತ್ನಕ್ಕೆ ಚಾಮರಾಜನಗರ ಮತ್ತು ಶಿರಸಿ ಗ್ರಾಮೀಣ ವಲಯಗಳು ಭೂಮಿಕೆಯಾಗಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಕ್ಯಾಮೆರಾಗಳಲ್ಲಿ ಚಿತ್ರಗಳನ್ನು ಸೆರೆ ಹಿಡಿದವರನ್ನು ವೃತ್ತಿಪರ ಛಾಯಾಗ್ರಾಹಕರಂತೆ ಗುರುತಿಸುವ ಪ್ರಯತ್ನ ಇಲ್ಲಿ ನಡೆಯಲಿದೆ. ಚಿತ್ರಗಳನ್ನು ತೆಗೆದವರ ಉಪಸ್ಥಿತಿಯೂ ಇರಲಿದೆ.

ಮಣ್ಣು-ಕಣ್ಣು ಮೇಳ : 'ವನಸ್ತ್ರೀ’, 'ವನ್ಯ' ಮತ್ತು 'ಹೊನ್ನೇರು: ಗ್ರಾಮೀಣ ಯುವ ಸಮೂಹ’ ತಮ್ಮ ಉತ್ಪನ್ನ, ಕರಕುಶಲ ವಸ್ತುಗಳು, ಮತ್ತು ಬೀಜಗಳನ್ನು ತಂತಮ್ಮ ಮಳಿಗೆಗಳಲ್ಲಿ ಪ್ರದರ್ಶಿಸಲಿದ್ದಾರೆ.

**

ಮೂರು ಗುರಿಗಳು

ಗ್ರಾಮೀಣ ಮಹಿಳೆಯರು ಮತ್ತು ಯುವಜನರಿಗೆ ವೃತ್ತಿಪರ ಕ್ಯಾಮೆರಾಗಳನ್ನು ಹೇಗೆ ಬಳಸಬೇಕು ಎಂದು ತರಬೇತಿ ನೀಡುವುದು.

* ಕ್ಯಾಮೆರಾ ಲೆನ್ಸ್ ಮೂಲಕ - ತಮ್ಮ ಭೂಮಿ, ಜೀವನ, ಮತ್ತು ತಮ್ಮೊಳಗಿನ ಸೃಜನಶೀಲತೆಯನ್ನು ಯಾವ ಆತಂಕವಿಲ್ಲದೆಯೇ ವ್ಯಕ್ತಪಡಿಸಲು ಪ್ರೋತ್ಸಾಹಿಸುವುದು.

* ಕಲಾವಿದರಾಗಿ ತಮ್ಮ ಕ್ಯಾಮೆರಾ-ಸೃಷ್ಟಿಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT