ಮಂಗಳವಾರ, ಆಗಸ್ಟ್ 4, 2020
26 °C

ಗೆಜ್ಜೆ-ಹೆಜ್ಜೆಯೊಂದಿಗೆ ರಾಧೆಯ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಜ್ಜೆ-ಹೆಜ್ಜೆಯೊಂದಿಗೆ ರಾಧೆಯ ಹಾದಿ

‘ನೃತ್ಯವು ದೈಹಿಕ, ಮಾನಸಿಕ ನವೋಲ್ಲಾಸ ನೀಡುತ್ತದೆ. ಇದು ಭಾವನಾತ್ಮಕವಾಗಿ ಹಾಗೂ ಬೌದ್ಧಿಕವಾಗಿ ದೇಹವನ್ನು ಸಮತೋಲನದಲ್ಲಿರಿಸುತ್ತದೆ. ಈ ಸಮತೋಲನ ಸ್ಥಿತಿಯಿಂದ ದೇಹಕ್ಕೆ ಸ್ಫೂರ್ತಿ ಬರುತ್ತದೆ. ನೃತ್ಯದ ಸಾಂಗತ್ಯದಿಂದ ದೇಹಕ್ಕೆ ವ್ಯಾಯಾಮ ದೊರಕುವುದಲ್ಲದೇ, ಸಾಹಿತ್ಯ–ಸಂಗೀತ ತಿಳಿದುಕೊಂಡು ಮಾಡುವುದರಿಂದ ಮನಸಿಗೆ ಖುಷಿ ಹಾಗೂ ನೆಮ್ಮದಿ ಸಿಗುತ್ತದೆ’ ಎಂದು ನೃತ್ಯದ ಪ್ರಾಮುಖ್ಯತೆ ಕುರಿತು ವಿವರಿಸುತ್ತಾರೆ ನೃತ್ಯ ಗುರು ರಾಧಾ ಶ್ರೀಧರ್‌.

ಗವಿಪುರಂ ಗುಟ್ಟಳ್ಳಿಯಲ್ಲಿರುವ ವೆಂಕಟೇಶ ನಾಟ್ಯ ಮಂದಿರದ ಸ್ಥಾಪಕರೂ ಆಗಿರುವ ರಾಧಾ ಈವರೆಗೆ 500ಕ್ಕೂ ಹೆಚ್ಚು ಜನರಿಗೆ ನರ್ತನ ಪಾಠ ಹೇಳಿಕೊಟ್ಟಿದ್ದಾರೆ. 1969ರಲ್ಲಿ ಆರಂಭವಾದ ಈ ನಾಟ್ಯ ಮಂದಿರ ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಎರಡು ತಲೆಮಾರುಗಳಿಗೆ ನೃತ್ಯ ಕಲಿಸಿದ ಖ್ಯಾತಿ ಈ ಸಂಸ್ಥೆಯದ್ದು. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ತಮ್ಮದೇ ಸಂಸ್ಥೆ ಕಟ್ಟಿಕೊಳ್ಳುವ ಮೂಲಕ ದೇಶ ಹಾಗೂ ವಿದೇಶಗಳಲ್ಲಿ ಭರತನಾಟ್ಯ ಕಲೆಯನ್ನು ಪಸರಿಸುತ್ತಿದ್ದಾರೆ.

ಕಲೆ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನ ಹೊಂದಿರುವ ರಾಧಾ, ಪ್ರತಿ ವರ್ಷ ‘ವಾರ್ಷಿಕ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ’ವನ್ನು ಆಯೋಜಿಸುತ್ತಾರೆ. 1995ರಿಂದ ಆಯೋಜಿಸಿಕೊಂಡು ಬಂದಿರುವ ಈ ಕಾರ್ಯಕ್ರಮ ಯುವ ‌ಪ್ರತಿಭೆಗಳ ಪ್ರತಿಭಾನ್ವೇಷಣೆಗೂ ವೇದಿಕೆಯಾಗಿದೆ.

 

ರಾಧಾ ಅವರಿಗೆ ಬಾಲ್ಯದಿಂದಲೂ ಭರತನಾಟ್ಯದ ಮೇಲೆ ವಿಶೇಷ ಒಲವು. ಆದರೆ ಸಂಪ್ರದಾಯಸ್ಥ ಮನೆತನವಾದ್ದರಿಂದ ಆರಂಭದ ದಿನಗಳಲ್ಲಿ ಮನೆಯವರು ರಾಧಾ ಅವರ ನೃತ್ಯ ಕಲಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಕಲೆಯ ಬಗೆಗಿನ ಇವರ ಆಸಕ್ತಿಯನ್ನು ಗುರುತಿಸಿ, ಕಲಿಕೆಗೆ ಪ್ರೇರಣೆ ನೀಡಿದ್ದು ದೊಡ್ಡಮ್ಮ. ಆಗಿನ ಕಾಲದಂತೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾದರೂ ಗಂಡನ ಸಹಕಾರದಿಂದ ಭರತನಾಟ್ಯದಲ್ಲಿ ಮುಂದುವರಿಯಲು ಸಾಧ್ಯವಾಗಿತ್ತು.

ನೃತ್ಯಕ್ಕಷ್ಟೇ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದೇ ಹಾಡು, ಮೃದಂಗವನ್ನು ಕಲಿತುಕೊಂಡರು. ಯು.ಎಸ್‌. ಕೃಷ್ಣರಾವ್‌, ಚಂದ್ರಭಾಗ ದೇವಿ, ಮುತ್ತಯ್ಯ ಪಿಳ್ಳೆ, ವೆಂಕಟಲಕ್ಷಮ್ಮ, ಕೇಶವಮೂರ್ತಿ ಅವರೆಲ್ಲರೂ ರಾಧಾ ಅವರಿಗೆ ಭರತನಾಟ್ಯ ಮೊದಲ ಪಾಠಗಳನ್ನು ಕಲಿಸಿದ ಗುರುಗಳು.

ಬಾಲ್ಯದಲ್ಲಿ ಇವರಿದ್ದ ಮನೆಯ ಎದುರಿಗೆ ನೃತ್ಯಶಾಲೆಯಿತ್ತು. ಅಲ್ಲಿ ಗೆಜ್ಜೆಯ ಶಬ್ದ ಕಿವಿಗೆ ಬಿದ್ದಾಗಲೆಲ್ಲಾ ತಾನೂ ನೃತ್ಯ ಮಾಡಬೇಕು ಎಂದು ಕನಸು ಕಾಣುತ್ತಿದ್ದರು ರಾಧಾ. ಆ ಕನಸನ್ನು ನನಸು ಮಾಡಿಕೊಂಡಿಕೊಂಡಿದ್ದಲ್ಲದೇ ತನ್ನಂತೆ ಕನಸು ಕಾಣುವವರ ಆಸೆ ನೆರವೇರಿಸಲು ನೃತ್ಯಶಾಲೆಯನ್ನೂ ಆರಂಭಿಸಿದರು.

ಪಕ್ಕದ ಮನೆಯ ಸ್ನೇಹಿತೆಯ ಮಾತಿನಿಂದ ಪ್ರೇರಣೆಗೊಂಡು ಮನೆಯಲ್ಲೇ ನೃತ್ಯಶಾಲೆ ಆರಂಭಿಸಿದ ಇವರ ಮೊದಲ ಶಿಷ್ಯೆ ಅದೇ ಸ್ನೇಹಿತೆಯ ಮಗಳು. ಒಬ್ಬಳೇ ವಿದ್ಯಾರ್ಥಿಯಿದ್ದ ನೃತ್ಯಶಾಲೆಗೆ ತನ್ನ ಮಗಳನ್ನೂ ಸೇರಿಸಿಕೊಂಡರು. ಹೀಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಭರತನಾಟ್ಯ ಕಲಿಯುವ ಆಸೆಯಿಂದ ಕೆಲ ಹುಡುಗರೂ ಇವರ ಬಳಿಗೆ ಬರಲು ಆರಂಭಿಸಿದರು. ಹುಡುಗರಿಗೆ ನೃತ್ಯ ಕಲಿಸಲು ಸಂಪ್ರದಾಯಸ್ಥ ಕುಟುಂಬಗಳಿಂದ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ಯೋಚಿಸಿದಾಗ ನಾನು ಹೀಗೆಯೇ ಇದ್ದರೆ ಬೆಳೆಯಲು ಸಾಧ್ಯವಿಲ್ಲ ಎನ್ನಿಸಿತು ರಾಧಾ ಅವರಿಗೆ. ಆ ಕಾರಣಕ್ಕೆ ವೆಂಕಟೇಶ ನಾಟ್ಯಮಂದಿರ ಎಂಬ ಸಂಸ್ಥೆ ಕಟ್ಟಿ, ಅಲ್ಲಿ ನೃತ್ಯ ಕಲಿಯುವ ಆಸೆಯಿಂದ ಬರುವ ಎಲ್ಲರಿಗೂ ಭರತನಾಟ್ಯದ ಕಲಿಸಿದರು. ರಾಧಾ ಅವರಿಗೆ ಈಗ 80 ವರ್ಷ. ಆದರೂ ಇಂದಿಗೂ ಈ ಕಾಯಕ ನಿಂತಿಲ್ಲ.

ನೃತ್ಯ ಕಲಿಕೆಯಲ್ಲಿ ದೀರ್ಘಾವಧಿಯಿಂದಲೂ ತೊಡಗಿಸಿಕೊಂಡಿರುವ ರಾಧಾ ಅವರು ಅಂದಿನ ಮಕ್ಕಳಿಗೂ– ಇಂದಿನ ಮಕ್ಕಳಿಗೂ ಇರುವ ವ್ಯತ್ಯಾಸದ ಬಗ್ಗೆ ಹೀಗೆ ಹೇಳುತ್ತಾರೆ:

‘ಅಂದಿನ ಮಕ್ಕಳಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಆಕರ್ಷಣೆ ಇರಲಿಲ್ಲ. ಕಲಿಕೆಯಲ್ಲಿ ಸಾಕಷ್ಟು ಶ್ರದ್ಧೆ ಇತ್ತು. ಶಾಲೆ– ಕಾಲೇಜುಗಳಲ್ಲಿಯೂ ಈಗಿನಂದ ಅಂಕಗಳಿಕೆಯ ಒತ್ತಡ ಇರಲಿಲ್ಲ. ಆದರೆ ಈಗಿನ ಮಕ್ಕಳಲ್ಲಿ ನಿರಂತರತೆ ಇಲ್ಲ’ ಎನ್ನುತ್ತಾರೆ.

ಸದ್ಯ ನಾಟ್ಯಶಾಲೆಯಲ್ಲಿ ಐವರು ಶಿಕ್ಷಕಿಯರಿದ್ದಾರೆ. ಸುಮಾರು 15 ವಿದ್ಯಾರ್ಥಿಗಳಿದ್ದಾರೆ. ವಾರದಲ್ಲಿ ಎರಡು ತರಗತಿಗಳು ನಡೆಯುತ್ತವೆ. 50ನೇ ವರ್ಷದ ಸಂಭ್ರಮಾಚರಣೆಯ ಸಿದ್ಧತೆಗಳು ನಡೆಯುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.