ಮಂಗಳವಾರ, ಡಿಸೆಂಬರ್ 10, 2019
23 °C

ಓ ಸಾಥೀ... ತೇರೆ ಬಿನಾ

Published:
Updated:
ಓ ಸಾಥೀ... ತೇರೆ ಬಿನಾ

‘ಇಷ್ಟು ಬೇಗ?...’ ಎನ್ನುತ್ತಾನೆ ಅವನು. ‘ಹತ್ತಿರ ಬಾ ಅಂತಾಳೆ’ ಅವಳು. ಇನ್ನೇನು ಅವರಿಬ್ಬರ ನಡುವೆ ಏನೋ ಘಟಿಸುತ್ತೆ ಅಂತ ಎಣಿಸುತ್ತಿದ್ದವರಿಗೆ ಅವನ ಕೈಯಲ್ಲಿರುವ ಬಾಸ್ಕೆಟ್‌ಬಾಲ್ ಮೇಲೆ ಆಕೆ ತನ್ನ ಫೋನ್ ನಂಬರ್ ಬರೀತಾಳೆ. ನಂಬರ್ ಕೊಟ್ಟೆ ಅಂತ ಹೆಂಗೆಗೋ ವರ್ತಿಸಬೇಡ. ಯಾವಾಗಲೂ ನನ್ನ ಬ್ಯಾಗ್‌ನಲ್ಲಿ ‘ಪೆಪ್ಪರ್ ಸ್ಪ್ರೇ’ ಇಟ್ಕೊಂಡಿರ್ತೀನಿ ಅಂತ ದುರುಗುಟ್ಟಿ ನೋಡಿ ಹೇಳಿದವಳೇ ಅವನಿಗೆ ಬೆನ್ನು ಮಾಡಿ ಜೋರಾಗಿ ನಗ್ತಾಳೆ...

ಈ  ಜೋಡಿ ಯಾರು ಅಂತೀರಾ? ‘ಭಾಗಿ–2’ ಸಿನಿಮಾದ ನಾಯಕ ಟೈಗರ್ ಶ್ರಾಫ್ ಮತ್ತು ನಾಯಕಿ ದಿಶಾ ಪಟಾನಿ ಮೇಲೆ ಚಿತ್ರೀಕರಿಸಿರುವ ‘ಓ ಸಾಥೀ... ತೇರೆ ಬಿನಾ’ ಹಾಡಿನ ಮೊದಲ ದೃಶ್ಯವಿದು.

ಅವಳ ಕಣ್ಣಿನ ಪ್ರೇಮದ ಕೊಳದೊಳಗೆ ಬೀಳುವ ಅವನು ಸಂಯಮಿ. ಅವಳೋ ಕೋಪಿಷ್ಠೆ. ಅವಳಿದ್ದಲ್ಲಿ ತೆರಳುವ ಅವನು ಹಾಯ್ ಅಂತಾನೆ. ನಗಿಸುತ್ತಾನೆ. ಅವನನ್ನು ನೋಡುತ್ತಲೆ ಇವಳು ಪದೇಪದೇ ಕೆಳಗೆ ಬೀಳ್ತಾಳೆ.

ಕಣ್ಣು ತೆರೆದರೂ, ಕಣ್ಮುಚ್ಚಿದರೂ ಕಾಡುವ ಅವಳು. ನಿದ್ದೆ ಬಾರದ ರಾತ್ರಿಗಳಲ್ಲಿ ಅವಳದ್ದೇ ನಗು. ಮುದ್ದುಮೊಗದ ಚೆಲುವೆಯ ಹಿಂದೆ ಬೀಳುವ ಅವನು ಅವಳ ಕಣ್ಣ ಕೊಳವಷ್ಟೇ ಅಲ್ಲ ಅವಳ ಈಜುಕೊಳದಲ್ಲೂ ಮೀನಾಗುತ್ತಾನೆ. ಅವಳ ಸಿಟ್ಟಿನ ಬಿರುಗಾಳಿಗೆ ಸಿಲುಕಿದ ತರಗಲೆಯಾದರೂ ‘ದೇವರಿಗೆ ಧನ್ಯವಾದ’ ಹೇಳುವಷ್ಟು ಸುಕುಮೋಲ ಮನಸು ಅವನದ್ದು. ಅದಕ್ಕೆಂದೇ ‘ಓ ಸಾಥೀ ತೇರೆ ಬಿನಾ’ ಎಂದು ಹಾಡುತ್ತಾನೆ ಅವನು.

ಸಿಟ್ಟು, ಮುನಿಸು. ಹುಸಿ ಕೋಪ ಎಲ್ಲವೂ ಅವಳ ಹುಟ್ಟಿದ ಹಬ್ಬದ ಹೊತ್ತಿಗೆ ಮಾಯವಾಗಿ ಅವಳೆದೆಯಲ್ಲಿ ಸಣ್ಣದೊಂದು ಪ್ರೇಮದ ಮುನ್ನುಡಿ ಮೂಡುತ್ತದೆ.

ಚಳಿಗಾಲದ ರಾತ್ರಿಯಲ್ಲಿ ಜರ್ಕಿನ್ ತೊಟ್ಟು ಅವನ ಜತೆ ಹೆಜ್ಜೆ ಹಾಕುವ ಚಳಿಯಲ್ಲಿ ನಡುಗುತ್ತಲೇ ಬೀದಿಮಕ್ಕಳಿಗೆ ಅವಳ ಜರ್ಕಿನ್ನೇ ಹೊದಿಕೆಯಾದರೆ, ಅವಳಿಗೆ ಅವನ ತೋಳು ಬೆಚ್ಚಬೆಚ್ಚಗೆ.

ಹೀಗೆ ಪ್ರೇಮದ ಭಿನ್ನ ಭಾವದ ಅಲೆಗಳನ್ನು ‘ಭಾಗೀ–2’ ಸಿನಿಮಾದ ಹಿಟ್ ಸಾಂಗ್ ‘ಓ ಸಾಥೀ... ತೇರೆ ಬಿನಾ’ ಕಟ್ಟಿಕೊಡುತ್ತದೆ. ಹಾಡಿನುದ್ದಕ್ಕೂ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ತಾಜಾ ಹೂವಿನಂತೆ ನಳನಳಿಸುತ್ತಾರೆ. ಹಾಲು ಬೆಳದಿಂಗಳಂತಿರುವ ದಿಶಾ ನೋಡುಗರ ಮನಸನ್ನು ಆವರಿಸುತ್ತಾರೆ. ಮುಗುಳು ನಗೆ, ಸಜ್ಜನ ನಡೆಯ ಮೂಲಕವೇ ಟೈಗರ್ ಶ್ರಾಫ್ ಹುಡುಗಿಯ ಮನ ಕದಿಯುತ್ತಾರೆ.

ಇವೆಲ್ಲಕ್ಕೂ ಕಳಶವಿಟ್ಟಂತಿರುವ ಅರ್ಕೊ ಪ್ರಾವೊ ಮುಖರ್ಜಿ ಅವರ ಸುಮಧುರ ಸಂಗೀತ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಗಾಯಕ ಅತೀಫ್ ಅಸ್ಲಾಂ ಅವರ ಮಾದಕ ದನಿಯಲ್ಲಿ  ಮೂಡಿ ಬಂದಿರುವ ಈ ಹಾಡು ಮತ್ತೆ ಮತ್ತೆ ಗುನುಗುವಂತಿದೆ.

ವರ್ಷದ ಆರಂಭದಲ್ಲೇ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಬಾಲಿವುಡ್‌ನ ಹೊಸ ಜೋಡಿ ಅನ್ನುವುದಕ್ಕೆ ಇದೊಂದು ಹಾಡು ಸಾಕು. ಅಷ್ಟಕ್ಕೂ ನಾಯಕ ಹೇಳುವುದೂ ಅದನ್ನೇ ‘ಓ ಸಾಥೀ ತೇರೆ ಬಿನಾ...’

ಪ್ರತಿಕ್ರಿಯಿಸಿ (+)